ನವದೆಹಲಿ: ‘ಪ್ರಸಕ್ತ ಆರ್ಥಿಕ ವರ್ಷದಲ್ಲಿ ದೇಶದಾದ್ಯಂತ ಎಸ್‌ಬಿಐನಿಂದ ಹೊಸದಾಗಿ 600 ಶಾಖೆಗಳನ್ನು ತೆರೆಯಲಾಗುವುದು’ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅಧ್ಯಕ್ಷ ಸಿ.ಎಸ್. ಸೆಟ್ಟಿ ತಿಳಿಸಿದ್ದಾರೆ.
‘ಬ್ಯಾಂಕ್‌ನ ಚಟುವಟಿಕೆ ವಿಸ್ತರಿಸಲು ನಿರ್ಧರಿಸಲಾಗಿದೆ. ಇಂದಿಗೂ ಹಲವು ವಸತಿ ಪ್ರದೇಶಗಳಲ್ಲಿ ನಮ್ಮ ಶಾಖೆಗಳಿಲ್ಲ. ಹಾಗಾಗಿ, ಟೌನ್‌ಶಿಪ್‌ಗಳು ಸೇರಿ ಆರ್ಥಿಕ ವ್ಯವಹಾರ ಚಟುವಟಿಕೆಗಳು ಹೆಚ್ಚಿರುವ ಹೊಸ ಪ್ರದೇಶಗಳಲ್ಲಿ ಈ ಶಾಖೆಗಳನ್ನು ತೆರೆಯಲು ತೀರ್ಮಾನಿಸಲಾಗಿದೆ’ ಎಂದು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಕಳೆದ ವರ್ಷ ಎಸ್‌ಬಿಐನಿಂದ 137 ಹೊಸ ಶಾಖೆಗಳನ್ನು ತೆರೆಯಲಾಗಿತ್ತು. ಈ ಪೈಕಿ ಗ್ರಾಮೀಣ ಪ್ರದೇಶದಲ್ಲಿ 59 ಶಾಖೆಗಳನ್ನು ಸ್ಥಾಪಿಸಲಾಗಿತ್ತು. ಮಾರ್ಚ್ ಅಂತ್ಯಕ್ಕೆ ದೇಶದಾದ್ಯಂತ ಎಸ್‌ಬಿಐನ 22,542 ಶಾಖೆಗಳಿದ್ದು, 65 ಸಾವಿರ ಎಟಿಎಂಗಳಿವೆ. ಗ್ರಾಹಕರಿಗೆ ಬ್ಯಾಂಕಿಂಗ್ ಹಾಗೂ ಹಣಕಾಸು ಸೇವೆ ಒದಗಿಸುವ 85 ಸಾವಿರ ಪ್ರತಿನಿಧಿಗಳು ಇದ್ದಾರೆ.
‘ದೇಶದ 50 ಕೋಟಿಗೂ ಹೆಚ್ಚು ಗ್ರಾಹಕರಿಗೆ ಎಸ್‌ಬಿಐ ಸೇವೆ ಒದಗಿಸುತ್ತಿದೆ. ಪ್ರತಿ ಕುಟುಂಬದ ಬ್ಯಾಂಕ್ ಆಗಿರುವುದು ಹೆಮ್ಮೆಯ ಸಂಗತಿ’ ಎಂದು ಹೇಳಿದ್ದಾರೆ.
‘ಒಬ್ಬ ಷೇರುದಾರನ ದೃಷ್ಟಿಯಲ್ಲಷ್ಟೇ ಅತಿಹೆಚ್ಚು ಮೌಲ್ಯ ಹೊಂದಿರುವ ಬ್ಯಾಂಕ್ ಆಗಿಲ್ಲ. ಬ್ಯಾಂಕ್‌ನೊಂದಿಗೆ ವ್ಯವಹರಿಸುವ ಎಲ್ಲಾ ಷೇರುದಾರರ ದೃಷ್ಟಿಯಲ್ಲೂ ಅತಿಹೆಚ್ಚು ಮೌಲ್ಯ ಹೊಂದಿದೆ’ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.