ADVERTISEMENT

500 ಹೊಸ ಎಸ್‌ಬಿಐ ಶಾಖೆಗಳ ‍ಪ್ರಾರಂಭ : ಸಚಿವೆ ನಿರ್ಮಲಾ ಸೀತಾರಾಮನ್‌

ಪಿಟಿಐ
Published 18 ನವೆಂಬರ್ 2024, 15:56 IST
Last Updated 18 ನವೆಂಬರ್ 2024, 15:56 IST
ಎಸ್‌ಬಿಐ
ಎಸ್‌ಬಿಐ   

ಮುಂಬೈ/ನವದೆಹಲಿ: 2024–25ರ ಹಣಕಾಸು ವರ್ಷದ ಅಂತ್ಯದ ವೇಳೆಗೆ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಬಿಐ) ಹೊಸದಾಗಿ 500 ಶಾಖೆಗಳನ್ನು ಪ್ರಾರಂಭಿಸಲಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ.

1921ರಲ್ಲಿ ಬ್ಯಾಂಕ್‌ 250 ಶಾಖೆಗಳನ್ನು ಹೊಂದಿತ್ತು. ಅದು ಈಗ 22,500ಕ್ಕೆ ಏರಿಕೆಯಾಗಿದೆ. ಹೊಸ ಶಾಖೆಗಳ ಸೇರ್ಪಡೆಯೊಂದಿಗೆ ಶಾಖೆಗಳ ಸಂಖ್ಯೆ 23 ಸಾವಿರಕ್ಕೆ ತಲುಪಲಿದೆ ಎಂದು ಬ್ಯಾಂಕ್‌ನ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಹೇಳಿದರು.

ಎಸ್‌ಬಿಐನ ಈ ಬೆಳವಣಿಗೆಯು ‘ಜಾಗತಿಕ ದಾಖಲೆ’. ದೇಶದಲ್ಲಿನ ಒಟ್ಟು ಠೇವಣಿ ಪ್ರಮಾಣದಲ್ಲಿ ಶೇ 22ರಷ್ಟು ಎಸ್‌ಬಿಐ ಹೊಂದಿದ್ದು, 50 ಕೋಟಿಗೂ ಹೆಚ್ಚು ಗ್ರಾಹಕರಿಗೆ ಸೇವೆ ನೀಡಲಾಗುತ್ತಿದೆ. ಬ್ಯಾಂಕ್‌ ಪ್ರತಿ ದಿನ 20 ಕೋಟಿ ಯುಪಿಐ ವಹಿವಾಟು ನಿಭಾಯಿಸುತ್ತಿದೆ ಎಂದು ಹೇಳಿದರು. 

ADVERTISEMENT

ಶತಮಾನೋತ್ಸವದ ಪ್ರಯುಕ್ತ ₹100 ಮುಖಬೆಲೆಯ ನಾಣ್ಯಗಳನ್ನು ಸಚಿವರು ಇದೇ ವೇಳೆ ಬಿಡುಗಡೆ ಮಾಡಿದರು. ದೇಶದಲ್ಲಿ ಶತಮಾನ ಪೂರೈಸಿದ 43 ಎಸ್‌ಬಿಐ ಶಾಖೆಗಳಿವೆ. 1981 ಮತ್ತು 1996ರ ನಡುವಿನ ಬ್ಯಾಂಕಿನ ಇತಿಹಾಸವನ್ನು ದಾಖಲಿಸುವ ಸಂಪುಟವನ್ನು ಸಹ ಬಿಡುಗಡೆ ಮಾಡಿದರು. 

₹10 ಸಾವಿರ ಕೋಟಿ ಬಂಡವಾಳ ಸಂಗ್ರಹ:

ಏಳನೇ ಮೂಲಸೌಕರ್ಯ ಬಾಂಡ್‌ ವಿತರಣೆ ಮೂಲಕ ₹10 ಸಾವಿರ ಕೋಟಿ ಬಂಡವಾಳ ಸಂಗ್ರಹಿಸಲಾಗಿದೆ ಎಂದು ಎಸ್‌ಬಿಐ ಸೋಮವಾರ ಹೇಳಿದೆ.

ಈ ಬಾಂಡ್‌ಗಳಿಗೆ ವಾರ್ಷಿಕ ಶೇ 7.23ರಷ್ಟು ಬಡ್ಡಿ ದರ ನಿಗದಿಪಡಿಸಲಾಗಿದೆ. ಭವಿಷ್ಯ ನಿಧಿ, ಪಿಂಚಣಿ ನಿಧಿ, ವಿಮಾ ಕಂಪನಿಗಳು, ಮ್ಯೂಚುವಲ್‌ ಫಂಡ್‌ ಕಂಪನಿಗಳ ದೀರ್ಘಾವಧಿಯ ಈ ಬಾಂಡ್‌ಗಳಿಂದ ಸಂಗ್ರಹಿಸಿದ ಬಂಡವಾಳವನ್ನು ಕೈಗೆಟಕುವ ವಸತಿ ನಿರ್ಮಾಣದ ಮೂಲಸೌಕರ್ಯಕ್ಕೆ ವಿನಿಯೋಗಿಸಲಾಗುವುದು ಎಂದು ಎಸ್‌ಬಿಐ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.