ADVERTISEMENT

ಬೈಜುಸ್‌ ದಿವಾಳಿ ಪ್ರಕ್ರಿಯೆಗೆ ತಡೆ: ಎನ್‌ಸಿಎಲ್‌ಎಟಿ ಆದೇಶ ಪ್ರಶ್ನಿಸಿದ ಸುಪ್ರೀಂ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2024, 16:27 IST
Last Updated 25 ಸೆಪ್ಟೆಂಬರ್ 2024, 16:27 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ (ಪಿಟಿಐ): ಬಿಸಿಸಿಐಗೆ ಬಾಕಿ ಹಣ ಪಾವತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬೈಜುಸ್‌ ಕಂ‍ಪನಿ ವಿರುದ್ಧ ದಿವಾಳಿ ಪ್ರಕ್ರಿಯೆಯನ್ನು ರದ್ದುಪಡಿಸಿದ ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿಯ (ಎನ್‌ಸಿಎಲ್‌ಎಟಿ) ಕ್ರಮವನ್ನು ಬುಧವಾರ ಸುಪ್ರೀಂ ಕೋರ್ಟ್‌ ಪ್ರಶ್ನಿಸಿದೆ.

₹158.9 ಕೋಟಿ ಬಾಕಿ ಪಾವತಿ ಸಂಬಂಧ ಬಿಸಿಸಿಐ, ಬೈಜುಸ್‌ ವಿರುದ್ಧ ದಿವಾಳಿ ಪ್ರಕ್ರಿಯೆಗೆ ಮುಂದಾಗಿತ್ತು. ಹಣ ಪಾವತಿಗೆ ಒಪ್ಪಿಗೆ ನೀಡಿದ್ದ ಮೇಲ್ಮನವಿ ನ್ಯಾಯಮಂಡಳಿಯು, ದಿವಾಳಿ ಪ್ರಕ್ರಿಯೆಯನ್ನು ರದ್ದುಪಡಿಸಿತ್ತು. ಇದು ಬೈಜು ರವೀಂದ್ರನ್‌ ಅವರು ಮತ್ತೆ ಕಂಪನಿಯ ಮೇಲೆ ಹಿಡಿತ ಹೊಂದಲು ಅನುವು ಮಾಡಿಕೊಟ್ಟಿತ್ತು.

ಅಮೆರಿಕ ಮೂಲದ ಸಾಲದಾತ ಸಂಸ್ಥೆ ಗ್ಲಾಸ್‌ ಟ್ರಸ್ಟ್‌ ಕಂಪನಿಯು, ಎನ್‌ಸಿಎಲ್‌ಎಟಿ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನ ಮೊರೆ ಹೋಗಿತ್ತು.

ADVERTISEMENT

ಈ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್‌ ಅಧ್ಯಕ್ಷತೆಯ ತ್ರಿಸದಸ್ಯ ನ್ಯಾಯಪೀಠವು, ‘ನ್ಯಾಯಮಂಡಳಿಯು ಸರಿಯಾದ ನಿರ್ಧಾರ ಕೈಗೊಂಡಿಲ್ಲ’ ಎಂದು ಹೇಳಿದೆ.

‘ಕಂಪನಿಯು ₹15 ಸಾವಿರ ಕೋಟಿ ಸಾಲ ಹೊಂದಿದೆ. ಇದು ದೊಡ್ಡ ಮೊತ್ತವಾಗಿದೆ. ಒಬ್ಬ ಪ್ರವರ್ತಕ ನನಗೆ ಬಾಕಿ ಹಣ ಪಾವತಿಸಲು ಸಿದ್ಧವಿರುವುದಾಗಿ ಹೇಳಿರುವುದರಿಂದ ಒಬ್ಬ ಸಾಲಗಾರ (ಬಿಸಿಸಿಐ) ಹೊರನಡೆದಿದ್ದಾರೆ. ಬಿಸಿಸಿಐವೊಂದರ ಪ್ರಕರಣವನ್ನೇ ಆಯ್ಕೆ ಮಾಡಿಕೊಂಡು ಏಕೆ ಇತ್ಯರ್ಥಪಡಿಸಬೇಕು. ಎನ್‌ಸಿಎಲ್‌ಎಟಿ ತೀರ್ಪು ನೀಡುವ ಮೊದಲು ಈ ಎಲ್ಲವನ್ನೂ ಪರಿಗಣಿಸಬೇಕಿತ್ತು’ ಎಂದು ನ್ಯಾಯ‍ಪೀಠ ಹೇಳಿದೆ.

ನ್ಯಾಯಪೀಠವು ಗುರುವಾರವೂ ಈ ಪ್ರಕರಣದ ವಿಚಾರಣೆ ಮುಂದುವರಿಸಲಿದ್ದು, ದಿವಾಳಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಮತ್ತೆ ವಿಚಾರಣೆ ನಡೆಸಿ ಹೊಸದಾಗಿ ತೀರ್ಪು ಪ್ರಕಟಿಸುವಂತೆ ಸೂಚಿಸುವ ಸಾಧ್ಯತೆಯಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.