ADVERTISEMENT

ಎನ್‌ಸಿಎಲ್‌ಎಟಿ ಆದೇಶಕ್ಕೆ ಸುಪ್ರೀಂ ತಡೆ; ಮಿಸ್ತ್ರಿಗೆ ಸದ್ಯಕ್ಕಿಲ್ಲ ಟಾಟಾ ಪ್ರವೇಶ

ಏಜೆನ್ಸೀಸ್
Published 10 ಜನವರಿ 2020, 9:36 IST
Last Updated 10 ಜನವರಿ 2020, 9:36 IST
ಟಾಟಾ ಸನ್ಸ್‌ನ ವಿಶ್ರಾಂತ ಅಧ್ಯಕ್ಷರಾಗಿರುವ ರತನ್‌ ಟಾಟಾ ಮತ್ತು ಸೈರಸ್ ಮಿಸ್ತ್ರಿ
ಟಾಟಾ ಸನ್ಸ್‌ನ ವಿಶ್ರಾಂತ ಅಧ್ಯಕ್ಷರಾಗಿರುವ ರತನ್‌ ಟಾಟಾ ಮತ್ತು ಸೈರಸ್ ಮಿಸ್ತ್ರಿ   

ನವದೆಹಲಿ:ಟಾಟಾ ಗ್ರೂಪ್‌ನ ಕಾರ್ಯನಿರ್ವಾಹಕ ಅಧ್ಯಕ್ಷರಾಗಿ ಸೈರಸ್ ಮಿಸ್ತ್ರಿ ಅವರನ್ನುಮರು ನೇಮಕ ಮಾಡಿಕೊಳ್ಳಬೇಕೆಂಬ ರಾಷ್ಟ್ರೀಯ ಕಂಪನಿ ಕಾಯ್ದೆ ಮೇಲ್ಮನವಿ ನ್ಯಾಯಮಂಡಳಿಯ (ಎನ್‌ಸಿಎಲ್‌ಎಟಿ) ಆದೇಶಕ್ಕೆ ಸುಪ್ರೀಂ ಕೋರ್ಟ್‌ ಶುಕ್ರವಾರ ತಡೆ ನೀಡಿದೆ.

ಡಿಸೆಂಬರ್‌ 18ರಂದು ಎನ್‌ಸಿಎಲ್‌ಎಟಿ ನೀಡಿದ್ದ ಆದೇಶ ಪ್ರಶ್ನಿಸಿ ಟಾಟಾ ಸನ್ಸ್‌ ಪ್ರೈವೇಟ್ ಲಿಮಿಟೆಡ್‌(ಟಿಎಸ್‌ಪಿಎಲ್‌), ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಅರ್ಜಿ ವಿಚಾರಣೆಗೆಮುಖ್ಯ ನ್ಯಾಯಮೂರ್ತಿ ಎಸ್‌.ಎ.ಬೋಬ್ಡೆ, ನ್ಯಾಯಮೂರ್ತಿಗಳಾದ ಬಿ.ಆರ್‌.ಗವೈ ಮತ್ತು ಸೂರ್ಯ ಕಾಂತ್‌ ಅವರನ್ನು ಒಳಗೊಂಡ ನ್ಯಾಯಪೀಠವು ಸಮ್ಮತಿಸಿದ್ದು, ಮಿಸ್ತ್ರಿ ಹಾಗೂ ಇತರರಿಗೆ ನೋಟಿಸ್‌ ಜಾರಿ ಮಾಡಿದೆ.

ಎನ್‌.ಚಂದ್ರಶೇಖರನ್‌ ಅವರನ್ನು ಸಂಸ್ಥೆಯ ಮುಖ್ಯಸ್ಥರನ್ನಾಗಿ ನೇಮಕ ಮಾಡಿದ್ದು ಕಾನೂನು ಬಾಹಿರ ಎಂದೂ ಎನ್‌ಸಿಎಲ್‌ಎಟಿ ಹೇಳಿತ್ತು.

ADVERTISEMENT

ಎನ್‌ಸಿಎಲ್‌ಎಟಿಆದೇಶವು ದೋಷಪೂರಿತವಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ವಿರೋಧಾಭಾಸಗಳಿಂದ ಕೂಡಿದೆ ಎಂದು ಟಾಟಾ ಸನ್ಸ್‌ನ ವಿಶ್ರಾಂತ ಅಧ್ಯಕ್ಷರಾಗಿರುವ ರತನ್‌ ಟಾಟಾ ಅವರು ಕೋರ್ಟ್‌ಗೆ ಸಲ್ಲಿಸಿರುವ ಪ್ರತ್ಯೇಕ ಅರ್ಜಿಯಲ್ಲಿ ತಿಳಿಸಿದ್ದರು.

2016ರಲ್ಲಿ ಟಾಟಾ ಸನ್ಸ್‌ ಅಧ್ಯಕ್ಷ ಹುದ್ದೆಯಿಂದ ಪದಚ್ಯುತಿಗೊಳಿಸಿದ್ದನ್ನು ಪ್ರಶ್ನಿಸಿ, ಮಿಸ್ತ್ರಿ ಅವರು ಸಲ್ಲಿಸಿದ್ದ ಅಹವಾಲನ್ನು ರಾಷ್ಟ್ರೀಯ ಕಂಪನಿ ಕಾಯ್ದೆ ನ್ಯಾಯಮಂಡಳಿಯು (ಎನ್‌ಸಿಎಲ್‌ಟಿ) 2018ರ ಜುಲೈನಲ್ಲಿ ತಳ್ಳಿ ಹಾಕಿತ್ತು. ಆ ಬಳಿಕ 2018ರ ಆಗಸ್ಟ್‌ನಲ್ಲಿ ಎನ್‌ಸಿಎಲ್‌ಎಟಿಗೆ ಮೇಲ್ಮನವಿ ಸಲ್ಲಿಸಿದ್ದರು. 2019ರ ಡಿಸೆಂಬರ್‌ನಲ್ಲಿ ಟಾಟಾ ಸನ್ಸ್‌ನ ಕಾರ್ಯನಿರ್ವಾಹಕ ಅಧ್ಯಕ್ಷರನ್ನಾಗಿ ಸೈರಸ್‌ ಮಿಸ್ತ್ರಿ ಅವರನ್ನು ಮರು ನೇಮಕ ಮಾಡುವಂತೆ ಎನ್‌ಸಿಎಲ್‌ಎಟಿ ಆದೇಶಿಸಿತ್ತು. ಇದನ್ನು ಪ್ರಶ್ನಿಸಿಟಾಟಾ ಸನ್ಸ್‌ ಪ್ರೈವೇಟ್‌ ಲಿಮಿಟೆಡ್‌ (ಟಿಎಸ್‌ಪಿಎಲ್‌) 2020ರ ಜನವರಿ 3 ರಂದು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.