ನವದೆಹಲಿ: ಬ್ಯಾಂಕ್‌ಗಳಿಗೆ ವಂಚನೆ ಎಸಗಿರುವ ಆರೋಪ ಎದುರಿಸುತ್ತಿರುವ, ದೇಶಭ್ರಷ್ಟ ಉದ್ಯಮಿ ಮೆಹುಲ್ ಚೋಕ್ಸಿ ಅವರಿಗೆ ಸೇರಿದ ಬ್ಯಾಂಕ್ ಖಾತೆಗಳು, ಷೇರುಗಳು ಮತ್ತು ಮ್ಯೂಚುವಲ್ ಫಂಡ್ ಹೂಡಿಕೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ಆದೇಶಿಸಿದೆ.
ಗೀತಾಂಜಲಿ ಜೆಮ್ಸ್ ಲಿ. ಕಂಪನಿಯ ಷೇರುಗಳ ಅಕ್ರಮ ವಹಿವಾಟಿಗೆ ಸಂಬಂಧಿಸಿದ ಪ್ರಕರಣದಲ್ಲಿ ದಂಡ ಪಾವತಿಸುವಂತೆ ಸೆಬಿ 2022ರ ಅಕ್ಟೋಬರ್‌ನಲ್ಲಿ ಚೋಕ್ಸಿ ಅವರಿಗೆ ಆದೇಶಿಸಿತ್ತು. ಇದನ್ನು ಪಾವತಿಸುವಲ್ಲಿ ಅವರು ವಿಫಲರಾಗಿದ್ದಾರೆ. ಈ ಕಾರಣಕ್ಕಾಗಿ ಸೆಬಿ ಮುಟ್ಟುಗೋಲು ಆದೇಶ ಹೊರಡಿಸಿದೆ.
ಚೋಕ್ಸಿ ಅವರು ಗೀತಾಂಜಲಿ ಜೆಮ್ಸ್ ಕಂಪನಿಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಆಗಿದ್ದರು. ಅವರು ನೀರವ್ ಮೋದಿ ಅವರ ಸಂಬಂಧಿಯೂ ಹೌದು. ಇಬ್ಬರೂ ಸೇರಿ ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ ₹14 ಸಾವಿರ ಕೋಟಿಗಿಂತ ಹೆಚ್ಚಿನ ಮೊತ್ತವನ್ನು ವಂಚಿಸಿರುವ ಆರೋಪ ಎದುರಿಸುತ್ತಿದ್ದಾರೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ ವಂಚಿಸಿರುವ ಪ್ರಕರಣವು ಬಹಿರಂಗವಾದ ನಂತರದಲ್ಲಿ ಇಬ್ಬರೂ ದೇಶದಿಂದ ಪಲಾಯನ ಮಾಡಿದ್ದಾರೆ. ಬ್ಯಾಂಕ್‌ಗಳು, ಷೇರುಗಳನ್ನು ಇರಿಸಿಕೊಳ್ಳುವ ಸಿಡಿಎಸ್‌ಎಲ್ ಹಾಗೂ ಎನ್‌ಎಸ್‌ಡಿಎಲ್, ಮ್ಯೂಚುವಲ್ ಫಂಡ್ ಕಂಪನಿಗಳು ಚೋಕ್ಸಿ ಅವರ ಖಾತೆಯಿಂದ ಹಣ, ಷೇರುಗಳು ಅಥವಾ ಮ್ಯೂಚುವಲ್ ಫಂಡ್ ಯೂನಿಟ್‌ಗಳನ್ನು ಹಿಂಪಡೆಯಲು ಅವಕಾಶ ಕೊಡಬಾರದು ಎಂದು ಸೆಬಿ ಆದೇಶದಲ್ಲಿ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.