ADVERTISEMENT

ಬಾಂಬೆ ಡೈಯಿಂಗ್‌ಗೆ ಸೆಬಿ ನಿಷೇಧ | ಎರಡು ವರ್ಷ ಸಾಲಪತ್ರ ಮಾರುಕಟ್ಟೆ ಪ್ರವೇಶ ಇಲ್ಲ

ಎರಡು ವರ್ಷ ಸಾಲಪತ್ರ ಮಾರುಕಟ್ಟೆ ಪ್ರವೇಶ ಇಲ್ಲ

ಪಿಟಿಐ
Published 22 ಅಕ್ಟೋಬರ್ 2022, 22:30 IST
Last Updated 22 ಅಕ್ಟೋಬರ್ 2022, 22:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಕಂಪನಿಯ ಹಣಕಾಸಿನ ವ್ಯವಹಾರದ ಕುರಿತು ತಪ್ಪು ಮಾಹಿತಿ ನೀಡಿರುವುದಕ್ಕೆ ಸಂಬಂಧಿಸಿದಂತೆ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯು (ಸೆಬಿ) ಬಾಂಬೆ ಡೈಯಿಂಗ್‌ ಒಳಗೊಂಡು ಒಟ್ಟು 10 ಕಂಪನಿಗಳಿಗೆ ಸಾಲಪತ್ರ ಮಾರುಕಟ್ಟೆಯಿಂದ ಎರಡು ವರ್ಷಗಳವರೆಗೆ ನಿಷೇಧ ಹೇರಿದೆ.

ಬಾಂಬೆ ಡೈಯಿಂಗ್‌ ಕಂಪನಿಗೆ ಸೇರಿದ ಫ್ಲ್ಯಾಟ್‌ಗಳನ್ನು ವಾಡಿಯಾ ಸಮೂಹದ ಕಂಪನಿ ಸ್ಕೇಲ್‌ ಸರ್ವೀಸಸ್‌ ಲಿಮಿಟೆಡ್‌ ನೈಜ ಮೌಲ್ಯಕ್ಕಿಂತ ಹೆಚ್ಚಿನ ಬೆಲೆಗೆ, ಅಂದರೆ ₹ 2,492.94 ಕೋಟಿಗೆ ಮಾರಾಟ ಮಾಡಿದ್ದು, ₹1,302 ಕೋಟಿ ಲಾಭ ಮಾಡಿಕೊಳ್ಳಲಾಗಿದೆ. ಆ ಮೂಲಕ ಬಾಂಬೆ ಡೈಯಿಂಗ್‌ ಕಂಪನಿಯ ಹಣಕಾಸಿನ ವ್ಯವಹಾರದ ಬಗ್ಗೆ ತಪ್ಪು ಮಾಹಿತಿ ನೀಡಲಾಗಿದೆ ಎನ್ನುವ ಆರೋಪದ ಮೇಲೆ ಈ ಕ್ರಮ ಕೈಗೊಂಡಿರುವುದಾಗಿ ಸೆಬಿ ತಿಳಿಸಿದೆ.

2011-12 ಮತ್ತು 2017–18ನೇ ಹಣಕಾಸು ವರ್ಷದ ಅವಧಿಯಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ದೂರುಗಳು ಬಂದಿದ್ದರಿಂದ ಸೆಬಿ ತನಿಖೆ ನಡೆಸಿದೆ.

ADVERTISEMENT

ಈ ಸಂಬಂಧ 10 ಕಂಪನಿಗಳಿಗೆ ಒಟ್ಟು ₹15.75 ಕೋಟಿ ದಂಡ ವಿಧಿಸಿದ್ದು, 45 ದಿನಗಳ ಒಳಗಾಗಿ ದಂಡ ಪಾವತಿಸುವಂತೆ ನಿರ್ದೇಶನ ನೀಡಿದೆ.

ಬಾಂಬೆ ಡೈಯಿಂಗ್‌ ಮತ್ತು ಅದರ ಪ್ರವರ್ತಕರಾದ ನುಸ್ಲಿ ಎನ್‌. ವಾಡಿಯಾ ಮತ್ತು ಅವರ ಇಬ್ಬರು ಮಕ್ಕಳು ನೆಸ್‌ ಮತ್ತು ಜಹಂಗೀರ್‌ ಅವರು ಎರಡು ವರ್ಷಗಳವರೆಗೆ ಸೆಕ್ಯುರಿಟಿ ಮಾರುಕಟ್ಟೆಯಲ್ಲಿ ವಹಿವಾಟು ನಡೆಸುವಂತಿಲ್ಲ.

ಸ್ಕೇಲ್‌ ಸರ್ವೀಸಸ್‌ ಲಿಮಿಟೆಡ್‌ ಮತ್ತು ಅದರ ಆಗಿನ ನಿರ್ದೇಶಕರಿಗೆ ಒಂದು ವರ್ಷದವರೆಗೆ ನಿಷೇಧ ಹೇರಲಾಗಿದೆ.

ಸ್ಕೇಲ್‌ ಕಂಪನಿಯಲ್ಲಿ ಬಾಂಬೆ ಡೈಯಿಂಗ್ ಶೇ 19ರಷ್ಟು ಷೇರುಪಾಲು ಮಾತ್ರ ಹೊಂದಿದ್ದರೂ, ಸ್ಕೇಲ್‌ ಹೊಂದಿರುವ ಅಷ್ಟೂ ಷೇರುಬಂಡವಾಳದ ಮೇಲೆ ಪೂರ್ಣ ರೀತಿಯ ನಿಯಂತ್ರಣವು ಬಾಂಬೆ ಡೈಯಿಂಗ್‌ ಕೈಯಲ್ಲಿ ಇರುವಂತೆ ಮಾಡಲಾಗಿದೆ.

ಬಾಂಬೆ ಡೈಯಿಂಗ್‌ ಜೊತೆ ಸ್ಕೇಲ್‌ ಕಂಪನಿಯ ಹಣಕಾಸು ವಹಿವಾಟಿನ ಮಾಹಿತಿ ಸೇರಿಸುವುದನ್ನು ತಪ್ಪಿಸಲು ಈ ರೀತಿ ಮಾಡಲಾಗಿದೆ. ಈ ಮೂಲಕ, ಸ್ಕೇಲ್‌ ಕಂಪನಿಗೆ ಮಾಡುವ ಮಾರಾಟ ಮತ್ತು ಅದರಿಂದ ಬರುವ ಲಾಭವನ್ನು ಬಾಂಬೆ ಡೈಯಿಂಗ್‌ನ ಸಮಗ್ರ ಹಣಕಾಸು ಮಾಹಿತಿಯಲ್ಲಿ ಸೇರಿಸುವುದರಿಂದ ತಪ್ಪಿಸಿಕೊಳ್ಳಲಾಗಿದೆ ಎಂದು ಸೆಬಿ ತನ್ನ ವರದಿಯಲ್ಲಿ ತಿಳಿಸಿದೆ.

ಎಸ್‌ಎಟಿಗೆ ಮೇಲ್ಮನವಿ: ಸೆಬಿ ತನ್ನ ವಿರುದ್ಧ ನೀಡಿರುವ ಆದೇಶವನ್ನು ಪ್ರಶ್ನಿಸಿ ಸೆಕ್ಯುರಿಟಿ ಅಪಲೆಟ್‌ ಟ್ರಿಬ್ಯುನಲ್‌ (ಎಸ್‌ಎಟಿ) ಕದ ತಟ್ಟುವುದಾಗಿ ಬಾಂಬೆ ಡೈಯಿಂಗ್‌ ಕಂಪನಿ ಹೇಳಿದೆ.

ಸೆಬಿ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ಕಂಪನಿಯು ತನ್ನ ಶಾಸನಬದ್ಧ ಹಕ್ಕನ್ನು ಚಲಾಯಿಸಲಿದೆ. ಎಸ್‌ಎಟಿಯಲ್ಲಿ ನ್ಯಾಯ ಸಿಗಲಿದ್ದು, ಆರೋಪಮುಕ್ತ ಆಗುವ ವಿಶ್ವಾಸವಿದೆ ಎಂದು ಕಂಪನಿಯ ವಕ್ತಾರರೊಬ್ಬರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.