ನವದೆಹಲಿ: ‘ಕಾಂಗ್ರೆಸ್ ಪಕ್ಷವು ತಮ್ಮ ವಿರುದ್ಧ ಮಾಡಿರುವ ಆರೋಪಗಳು ದುರುದ್ದೇಶಪೂರಿತ ಹಾಗೂ ಮಾನಹಾನಿಕರವಾಗಿದ್ದು, ಸತ್ಯಕ್ಕೆ ದೂರವಾಗಿವೆ’ ಎಂದು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ ಅಧ್ಯಕ್ಷೆ (ಸೆಬಿ) ಮಾಧವಿ ಪುರಿ ಬುಚ್ ಹಾಗೂ ಅವರ ಪತಿ ಧವಳ್ ಬುಚ್ ಅವರು, ಶುಕ್ರವಾರ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
‘ನಾವು ಸಲ್ಲಿಸಿರುವ ಆದಾಯ ತೆರಿಗೆ ರಿಟರ್ನ್ಸ್‌ನಲ್ಲಿನ ಮಾಹಿತಿ ಆಧರಿಸಿ ಕಾಂಗ್ರೆಸ್ ಆರೋಪ ಮಾಡಿದೆ. ರಿಟರ್ನ್ಸ್ ಸಲ್ಲಿಕೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲಾಗಿದೆ. ಈ ಮಾಹಿತಿಯನ್ನು ಬಹಿರಂಗಪಡಿಸುವ ಮೂಲಕ ಕಾಂಗ್ರೆಸ್ ನಮ್ಮ ಖಾಸಗಿತನದ ಹಕ್ಕಿಗೆ ಧಕ್ಕೆ ತಂದಿದೆ. ಅಲ್ಲದೆ, ಇದು ಆದಾಯ ತೆರಿಗೆ ಕಾಯ್ದೆಯ ಉಲ್ಲಂಘನೆಯೂ ಆಗಿದೆ’ ಎಂದು ಹೇಳಿದ್ದಾರೆ.
‘ಸೆಬಿಗೆ ಸೇರ್ಪಡೆಯಾದ ಬಳಿಕ ಅಗೋರಾ ಅಡ್ವೈಸರಿ, ಅಗೋರಾ ಪಾರ್ಟ್‌ನರ್ಸ್, ಮಹೀಂದ್ರ ಸಮೂಹ, ಪಿಡಿಲೈಟ್, ಡಾ.ರೆಡ್ಡೀಸ್, ಅಲ್ವಾರೆಜ್, ಮಾರ್ಷಲ್, ವಿಶು ಲೀಸಿಂಗ್ ಅಥವಾ ಐಸಿಐಸಿಐ ಬ್ಯಾಂಕ್‌ನೊಂದಿಗೆ ವ್ಯವಹಾರ ನಡೆಸಿಲ್ಲ’ ಎಂದು ಮಾಧವಿ ಹೇಳಿದ್ದಾರೆ.
‘ಕಾಂಗ್ರೆಸ್ ಆರೋಪವು ಸುಳ್ಳಿನ ಕಂತೆಯಾಗಿದೆ. ಸೆಬಿಯ ನಿಯಮಾವಳಿಗಳು ಮತ್ತು ಮಾರ್ಗಸೂಚಿಗಳನ್ನು ಪಾಲಿಸಲಾಗಿದೆ’ ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ಇತ್ತೀಚೆಗೆ ಬುಚ್ ದಂಪತಿ ವಿರುದ್ಧ ಸರಣಿ ಆರೋಪ ಮಾಡಿತ್ತು. ಮಾಧವಿ ಅವರು ಅಗೋರಾ ಅಡ್ವೈಸರಿ ಪ್ರೈವೆಟ್ ಲಿಮಿಟೆಡ್ ಹೆಸರಿನ ಕನ್ಸಲ್ಟೆನ್ಸಿ ಸರ್ವಿಸ್ ಸಂಸ್ಥೆ ಹೊಂದಿದ್ದಾರೆ. ಇದರಲ್ಲಿ ಶೇ 99ರಷ್ಟು ಷೇರು ಹೊಂದಿದ್ದಾರೆ. ಈ ಸಂಸ್ಥೆ ಮೂಲಕ ಮಹೀಂದ್ರ ಆ್ಯಂಡ್ ಮಹೀಂದ್ರ ಸಮೂಹಕ್ಕೆ ಸೇವೆ ನೀಡಿದ್ದಾರೆ. ಅವರ ಪತಿ ಧವಳ್ ಬುಚ್ ಅವರು, ಇದೇ ಕಂಪನಿಯಿಂದ ₹4.78 ಕೋಟಿ ಆದಾಯ ಗಳಿಸಿದ್ದಾರೆ ಎಂದು ಆರೋಪಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.