ADVERTISEMENT

ಸೆಬಿಗೆ ಯಾವುದೇ ಮಾಹಿತಿ ಬಂದಿಲ್ಲ: ಕೇಂದ್ರ

ಫಲಿತಾಂಶದ ದಿನ ‘ನ್ಯಾಯಯುತವಲ್ಲದ ವ್ಯವಹಾರ’

ಪಿಟಿಐ
Published 22 ಜುಲೈ 2024, 16:25 IST
Last Updated 22 ಜುಲೈ 2024, 16:25 IST
ಷೇರು ಮಾರುಕಟ್ಟೆ
ಷೇರು ಮಾರುಕಟ್ಟೆ   

ನವದೆಹಲಿ: ‘ಜೂನ್‌ 4ರ ಲೋಕಸಭಾ ಫಲಿತಾಂಶದ ದಿನ ಷೇರು ಮಾರುಕಟ್ಟೆಯಲ್ಲಿ ‘ನ್ಯಾಯಯುತವಲ್ಲದ ವ್ಯವಹಾರ’ ನಡೆದಿರುವ ಕುರಿತಂತೆ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಗೆ (ಸೆಬಿ)ಗೆ ಯಾವುದೇ ನಿರ್ದಿಷ್ಟ ಮಾಹಿತಿ ಬಂದಿಲ್ಲ’ ಎಂದು ಸೋಮವಾರ ಸಂಸತ್ತಿನಲ್ಲಿ ತಿಳಿಸಲಾಗಿದೆ. 

ಫಲಿತಾಂಶ ದಿನದಂದು ಷೇರು ಸಂವೇದಿ ಸೂಚ್ಯಂಕ ಹಾಗೂ ಷೇರುಗಳ ಬೆಲೆ ದಿಢೀರ್ ಕುಸಿತದಿಂದ ಒಂದೇ ದಿನ ಹೂಡಿಕೆದಾರರಿಗೆ ₹30 ಲಕ್ಷ ಕೋಟಿ ನಷ್ಟವಾಗಿರುವುದು ಸತ್ಯವೇ ಎಂದು ಪ್ರಶ್ನೆಗೆ ಲೋಕಸಭೆಯಲ್ಲಿ ಲಿಖಿತ ಉತ್ತರ ನೀಡಿದ ಕೇಂದ್ರ ಹಣಕಾಸು ಖಾತೆಯ ರಾಜ್ಯ ಸಚಿವ ಪಂಕಜ್‌ ಚೌಧರಿ,‘ಷೇರು ಮಾರುಕಟ್ಟೆಯು ಹೂಡಿಕೆದಾರರ ಗ್ರಹಿಕೆ ಹಾಗೂ ಇತರೆ ಅಂಶಗಳ ಆಧರಿಸಿ ಕಾರ್ಯಾಚರಿಸುತ್ತದೆ’ ಎಂದು ತಿಳಿಸಿದ್ದಾರೆ. 

‘ಸಂಬಂಧಿತ ಪ್ರತಿನಿಧಿಗಳಿಂದ ಷೇರು ಮಾರುಕಟ್ಟೆಯಲ್ಲಿ ವಹಿವಾಟಿನ ಕುರಿತಂತೆ ಸೆ.ಬಿ ಮಾಹಿತಿ ಸ್ವೀಕರಿಸುತ್ತದೆ. ‘ನ್ಯಾಯಯುತವಲ್ಲದ ವ್ಯವಹಾರ’ದ ಕುರಿತಂತೆ ನಿರ್ದಿಷ್ಟ ಮಾಹಿತಿ ಸಿಕ್ಕಿಲ್ಲ’ ಎಂದು ಸಚಿವರು ಸ್ಪಷ್ಟಪಡಿಸಿದರು.

ADVERTISEMENT

ಕೇಂದ್ರದಲ್ಲಿ ಬಿಜೆಪಿ ಸರಳ ಬಹುಮತ ಪಡೆಯಲಿದೆ ಎಂದು ಜೂನ್‌ 3ರಂದು ಮಾಧ್ಯಮಗಳಲ್ಲಿ ಪ್ರಕಟಗೊಂಡ ಚುನಾವಣೋತ್ತರ ಸಮೀಕ್ಷೆ ಬೆನ್ನಲ್ಲೇ ಮುಂಬೈ ಷೇರುಪೇಟೆ ಸೂಚ್ಯಂಕ(ಬಿಎಸ್‌ಇ) ಶೇ 3.4 ರಷ್ಟು ಏರಿಕೆಯಾಗಿತ್ತು. 

ಫಲಿತಾಂಶದ ದಿನದಂದು ಸಮ್ಮಿಶ್ರ ಸರ್ಕಾರ ರಚನೆಯಾಗಲಿದೆ ಎಂಬ ಖಚಿತ ಮಾಹಿತಿ ಬಳಿಕ ಷೇರು ಸೂಚ್ಯಂಕವು ಶೇ 6ರಷ್ಟು ಕುಸಿತ ಕಂಡಿತ್ತು. ಕಳೆದ ನಾಲ್ಕು ವರ್ಷದಲ್ಲಿ ಆ ದಿನ ಹೂಡಿಕೆದಾರರ ಸಂಪತ್ತು ₹30 ಲಕ್ಷದಷ್ಟು ಕರಗಿತ್ತು.

‘ಚುನಾವಣಾ ಫಲಿತಾಂಶದ ದಿನದಂದು ಬಿಎಸ್‌ಇ ಹಾಗೂ ಎನ್‌ಎಸ್‌ಇ ಸೂಚ್ಯಂಕವು ಕ್ರಮವಾಗಿ ಶೇ 5.7 ಹಾಗೂ 5.9ರಷ್ಟು ಕುಸಿತ ಕಂಡಿತ್ತು. ಮೂರು ದಿನಗಳಲ್ಲಿಯೇ ಚೇತರಿಸಿಕೊಂಡಿದ್ದು, ಜುಲೈ 18ಕ್ಕೆ ಕ್ರಮವಾಗಿ ಶೇ 12.9 ಹಾಗೂ 13.3ರಷ್ಟು ಏರಿಕೆ ದಾಖಲಿಸಿವೆ. ಕುಸಿತದಿಂದ ಹೂಡಿಕೆದಾರರ ಸಂಪತ್ತು ₹30 ಲಕ್ಷದಷ್ಟು ಕರಗಿದರೆ, ಐದು ದಿನಗಳಲ್ಲಿ ಮತ್ತೆ ಚೇತರಿಕೆ ಕಂಡಿದೆ. ಅಲ್ಲಿಂದ ಜುಲೈ 18ರವರೆಗೆ ಹೂಡಿಕೆದಾರರಿಗೆ ₹58 ಲಕ್ಷದಷ್ಟು ಸಂಪತ್ತು ಸೇರ್ಪಡೆಯಾಗಿದೆ’ ಎಂದು ಚೌಧರಿ ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.