ನವದೆಹಲಿ: ಸಹರಾದ ಎರಡು ಕಂಪನಿಗಳಿಗೆ ₹62,602.90 ಕೋಟಿ ಪಾವತಿಸುವಂತೆ ನಿರ್ದೇಶನ ನೀಡಬೇಕು ಎಂದು ಕೋರಿ ಭಾರತಿಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.
ನ್ಯಾಯಾಲಯ ಈ ಮೊದಲು ನೀಡಿದ್ದ ಆದೇಶದಂತೆ ಹಣ ಪಾವತಿಸಲು ಸೂಚಿಸಬೇಕು. ಇಲ್ಲದಿದ್ದರೆ, ಸಹರಾ ಸಮೂಹದ ಮುಖ್ಯಸ್ಥ ಸುಬ್ರತಾ ರಾಯ್ ಅವರನ್ನು ವಶಕ್ಕೆ ನೀಡಬೇಕು ಎಂದು ಕೋರಿದೆ.
ಹಣ ಪಾವತಿಗೆ ಸಂಬಂಧಿಸಿದಂತೆ ಸುಬ್ರತಾ ರಾಯ್ ಮತ್ತು ಅವರ ಎರಡು ಕಂಪನಿಗಳಾದ ‘ಇಂಡಿಯಾ ರಿಯಲ್ ಎಸ್ಟೇಟ್ ಕಾರ್ಪೋರೇಷನ್ ಲಿಮಿಟೆಡ್’ (ಎಸ್‌ಐಆರ್‌ಇಸಿಎಲ್) ಮತ್ತು ‘ಸಹರಾ ಹೌಸಿಂಗ್ ಇನ್ವೆಸ್ಟ್‌ಮೆಂಟ್ ಕಾರ್ಪೋರೇಷನ್ ಲಿಮಿಟೆಡ್’ (ಎಸ್‌ಎಚ್‌ಐಸಿಎಲ್) ನ್ಯಾಯಾಲಯ ನೀಡಿರುವ ಹಲವು ಆದೇಶಗಳನ್ನು ಉಲ್ಲಂಘಿಸಿವೆ ಎಂದು ಸೆಬಿ ಪ್ರತಿಪಾದಿಸಿದೆ.
ಸುಪ್ರೀಂ ಕೋರ್ಟ್ ಹಲವು ಬಾರಿ ವಿನಾಯಿತಿ ನೀಡಿದ್ದರೂ ಆದೇಶ ಪಾಲಿಸಲು ಸುಬ್ರತಾ ರಾಯ್ ನಿರ್ಲಕ್ಷ್ಯ ವಹಿಸಿದ್ದಾರೆ. ಹೀಗಾಗಿ, ಬಾಕಿ ಉಳಿದಿರುವ ₹62,602.90 ಕೋಟಿಯನ್ನು ಪಾವತಿಸಬೇಕು ಎಂದು ನ್ಯಾಯಾಲಯ ನಿರ್ದೇಶನ ನೀಡಬೇಕು. ಹಣ ಪಾವತಿಸದಿದ್ದರೆ 2015ರ ಜೂನ್ 15ರಂದು ನೀಡಿದ ಆದೇಶದ ಅನ್ವಯ ಸುಬ್ರತಾ ರಾಯ್ ಅವರನ್ನು ವಶಕ್ಕೆ ತೆಗೆದುಕೊಳ್ಳಲು ಮತ್ತೊಮ್ಮೆ ನಿರ್ದೇಶನ ನೀಡಬೇಕು ಎಂದು ಸೆಬಿ ಕೋರಿದೆ.
ಹೂಡಿಕೆದಾರರಿಂದ ಸಂಗ್ರಹಿಸಿದ ಹಣವನ್ನು ಶೇಕಡ 15ರಷ್ಟು ಬಡ್ಡಿಯೊಂದಿಗೆ ಸೆಬಿಗೆ ಪಾವತಿಸಬೇಕು. ಈ ಹಣವನ್ನು ಮೂರು ತಿಂಗಳ ಒಳಗೆ ಪಾವತಿಸಬೇಕು ಹಾಗೂ ಈ ಹಣವನ್ನು ಗರಿಷ್ಠ ಬಡ್ಡಿ ನೀಡುವ ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ಠೇವಣಿ ಇಡಬೇಕು ಎಂದು ಎಸ್‌ಐಆರ್‌ಇಸಿಎಲ್ ಮತ್ತು ಎಸ್‌ಎಚ್‌ಐಸಿಎಲ್ ಕಂಪನಿಗಳಿಗೆ 2012ರ ಆಗಸ್ಟ್ 31ರಂದು ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು.
ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವ ಲಿಂಕ್:ಆಂಡ್ರಾಯ್ಡ್ ಆ್ಯಪ್|ಐಒಎಸ್ ಆ್ಯಪ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.