ADVERTISEMENT

ಅದಾನಿ ಸಮೂಹದ ವಿರುದ್ಧ ಆರೋಪ ಮಾಡಿದ್ದ ಹಿಂಡೆನ್‌ಬರ್ಗ್‌ಗೆ SEBI ಷೋಕಾಸ್‌ ನೋಟಿಸ್‌

ಸೆಬಿಯಿಂದ ‘ಅಸಂಬದ್ಧ’ ಕ್ರಮ: ಶಾರ್ಟ್‌ ಸೆಲ್ಲರ್‌ ಕಂಪನಿ ಆರೋಪ

ಪಿಟಿಐ
Published 2 ಜುಲೈ 2024, 16:33 IST
Last Updated 2 ಜುಲೈ 2024, 16:33 IST
   

ನವದೆಹಲಿ: ಅದಾನಿ ಸಮೂಹದ ವಿರುದ್ಧ ಗಂಭೀರ ಆರೋಪ ಮಾಡಿದ್ದ  ಅಮೆರಿಕ ಮೂಲದ ಶಾರ್ಟ್‌ ಸೆಲ್ಲರ್‌ ಕಂಪನಿ ಹಿಂಡೆನ್‌ಬರ್ಗ್‌ ರಿಸರ್ಚ್‌ಗೆ, ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯು (ಸೆಬಿ) ಷೋಕಾಸ್‌ ನೋಟಿಸ್‌ ನೀಡಿದೆ. 

ಷೇರುಪೇಟೆಯ ವಾಸ್ತವಿಕ ಬೆಲೆಗಿಂತ ಕೃತಕ ಬೆಲೆಯಲ್ಲಿ ಅದಾನಿ ಸಮೂಹದ ಷೇರುಗಳು ಮಾರಾಟವಾಗುತ್ತಿವೆ ಎಂದು 2023ರ ಜನವರಿಯಲ್ಲಿ ಹಿಂಡೆನ್‌ಬರ್ಗ್‌ ವರದಿ ಪ್ರಕಟಿಸಿತ್ತು. ಈ ವರದಿಯಲ್ಲಿ ಉದ್ದೇಶಪೂರ್ವಕವಾಗಿ ವಾಸ್ತವಾಂಶಗಳನ್ನು ತಿರುಚಲಾಗಿದೆ ಎಂದು ಸೆಬಿ ನೀಡಿರುವ ನೋಟಿಸ್‌ನಲ್ಲಿ ಹೇಳಲಾಗಿದೆ.

ಲಾಭದ ಆಸೆಯಿಂದ ಅದಾನಿ ಸಮೂಹಕ್ಕೆ ಸೇರಿ‌ದ ಸಂಘಟಿತ ಷೇರುಗಳನ್ನು ಮಾರಾಟಕ್ಕಿಡುವಲ್ಲಿಯೂ ನಿಯಮಾವಳಿ ಉಲ್ಲಂಘಿಸಲಾಗಿದೆ ಎಂದು ಹೇಳಿದೆ.

ADVERTISEMENT

ಜೂನ್‌ 26ರಂದು ಇ–ಮೇಲ್‌ ಮೂಲಕ ಹಿಂಡೆನ್‌ಬರ್ಗ್‌ಗೆ 46 ಪುಟಗಳ ನೋಟಿಸ್‌ ನೀಡಿದ್ದು, 21 ದಿನದ ಒಳಗೆ ಉತ್ತರಿಸುವಂತೆ ಸೂಚಿಸಿದೆ.  

ಯಾವುದೇ ಕಂಪನಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಕ್ಕೂ ಪೂರ್ವಭಾವಿಯಾಗಿ ಸೆಬಿ ಷೋಕಾಸ್‌ ನೋಟಿಸ್ ನೀಡುತ್ತದೆ. ಬಳಿಕ ಅಂತಹ ಕಂಪನಿಗೆ ದಂಡ ವಿಧಿಸುವುದು ಮತ್ತು ಭಾರತದ ಷೇರು ಮಾರುಕಟ್ಟೆಯಲ್ಲಿ ಭಾಗವಹಿಸದಂತೆ ನಿರ್ಬಂಧ ಹೇರುವ ಸಾಧ್ಯತೆ ಇರುತ್ತದೆ.

ಅಸಂಬದ್ಧ ಕ್ರಮ

‘ನೋಟಿಸ್‌ ನೀಡಿರುವುದು ಅಸಂಬದ್ಧ ಕ್ರಮವಾಗಿದೆ. ಭಾರತದಲ್ಲಿ ವೈಯಕ್ತಿಕವಾಗಿ ‍ಪ್ರಭಾವಶಾಲಿಯಾದವರು ವಂಚನೆ ಎಸಗಿದ್ದಾರೆ. ಅವರ ವಿರುದ್ಧದ ಹೋರಾಟ ಮಾಡುವವರನ್ನು ಮೌನಗೊಳಿಸುವ ಹಾಗೂ ಬೆದರಿಕೆವೊಡ್ಡುವುದು ಈ ನೋಟಿಸ್‌ನ ತಂತ್ರವಾಗಿದೆ’ ಎಂದು ಹಿಂಡೆನ್‌ಬರ್ಗ್‌ ರಿಸರ್ಚ್‌ ಪ್ರತಿಕ್ರಿಯಿಸಿದೆ.

‍‘ಹಲವು ವರ್ಷಗಳಿಂದ ಅದಾನಿ ಸಮೂಹವು ಕೃತಕ ಬೆಲೆಯಲ್ಲಿ ಷೇರುಗಳನ್ನು ಮಾರಾಟ ಮಾಡುತ್ತಿದ್ದು, ವರದಿ ಮೂಲಕ ಇದನ್ನು ಬಹಿರಂಗಪಡಿಸಲಾಗಿದೆ’ ಎಂದು ತಿಳಿಸಿದೆ.

ಅದಾನಿ ಸಮೂಹವು ಈ ಎಲ್ಲಾ ಆರೋಪಗಳನ್ನು ನಿರಾಕರಿಸಿದೆ.

‘ವಿವಿಧ ಕಂಪನಿಗಳನ್ನು ಬಳಸಿಕೊಂಡು ಅದಾನಿ ಸಮೂಹದ ಷೇರುಗಳನ್ನು ಮಾರಾಟ ಮಾಡಿದ್ದೇವೆ. ಇದರಿಂದ ಲಕ್ಷಾಂತರ ರೂಪಾಯಿ ಲಾಭಗಳಿಸಿದ್ದೇವೆ ಎಂಬ ಆರೋಪ ನಿರಾಧಾರವಾದುದು. ಭಾರತದಲ್ಲಿ ನಮಗೆ ಹೂಡಿಕೆಗೆ ಸಂಬಂಧಿಸಿದಂತೆ ಒಬ್ಬರೇ ಪಾಲುದಾರರಿದ್ದಾರೆ. ಅದಾನಿ ಷೇರುಗಳ ಶಾರ್ಟ್‌ ಸೆಲ್ಲಿಂಗ್‌ ಮೂಲಕ ₹34 ಕೋಟಿ ಲಾಭ ಪಡೆಯಲಾಗಿದೆ’ ಎಂದು ಹಿಂಡೆನ್‌ಬರ್ಗ್ ಹೇಳಿದೆ.

ಆದರೆ, ತನ್ನ ಪಾಲುದಾರ ಕಂಪನಿಯ ಹೆಸರನ್ನು ಬಹಿರಂಗಪಡಿಸಿಲ್ಲ.

‘ಉದ್ಯಮಿ ಗೌತಮ್‌ ಅದಾನಿ ಇಲ್ಲಿಯವರೆಗೂ ನಮ್ಮ ವರದಿಯಲ್ಲಿನ ಆರೋಪಗಳಿಗೆ ಉತ್ತರಿಸುವಲ್ಲಿ ವಿಫಲರಾಗಿದ್ದಾರೆ. ಅವರ ಸಹೋದರ ವಿನೋದ್ ಅದಾನಿ ಮತ್ತು ಸಹವರ್ತಿಗಳಿಂದ ನಿಯಂತ್ರಣಕ್ಕೆ ಒಳಪಟ್ಟಿರುವ ವಿದೇಶಗಳಲ್ಲಿರುವ ಕಂಪನಿಗಳ ಬಗ್ಗೆಯೂ ವರದಿಯಲ್ಲಿ ಪುರಾವೆ ಒದಗಿಸಲಾಗಿದೆ ಎಂದು ತಿಳಿಸಿದೆ. 

ಕೋಟಕ್‌ ಬ್ಯಾಂಕ್‌ನ ಸ್ಪಷ್ಟನೆ ಏನು?

ಹಿಂಡೆನ್‌ಬರ್ಗ್‌ ಆರೋಪದ ಬಗ್ಗೆ ಕೋಟಕ್‌ ಮಹೀಂದ್ರ ಇನ್‌ವೆಸ್ಟ್‌ಮೆಂಟ್ಸ್‌ ಲಿಮಿಟೆಡ್‌ (ಕೆಎಂಐಎಲ್‌) ಪ್ರತಿಕ್ರಿಯಿಸಿದ್ದು ‘ಹಿಂಡೆನ್‌ಬರ್ಗ್‌ ನನ್ನ ಗ್ರಾಹಕನಲ್ಲ’ ಎಂದು ಸ್ಪಷ್ಟಪಡಿಸಿದೆ. ‘ಹಿಂಡೆನ್‌ಬರ್ಗ್‌ನ ಗ್ರಾಹಕನಾದ ಕಿಂಗ್‌ಡನ್‌ ಕ್ಯಾಪಿಟಲ್‌ ಮ್ಯಾನೇಜ್‌ಮೆಂಟ್‌ ಕಂಪನಿಯು ಕೆಎಂಐಎಲ್‌ನ ಕೆ–ಇಂಡಿಯಾ ಆಪರ್ಚುನಿಟೀಸ್‌ ಫಂಡ್‌ನಲ್ಲಿ ಹೂಡಿಕೆ ಮಾಡಿತ್ತು. ಹಿಂಡೆನ್‌ಬರ್ಗ್‌ ವರದಿ ಬಿಡುಗಡೆಗೂ ಮೊದಲೇ ಅದಾನಿ ಎಂಟರ್‌ಪ್ರೈಸಸ್‌ನಲ್ಲಿ ತನ್ನ ಸ್ಥಾನ ಭದ್ರಪಡಿಸಿಕೊಂಡಿದ್ದ ಈ ಕಂಪನಿಯು ಒಟ್ಟು ₹183 ಕೋಟಿ ಲಾಭ ಗಳಿಸಿದೆ. ಈ ಬಗ್ಗೆ ಸೆಬಿ ನೋಟಿಸ್‌ನಲ್ಲಿ ತಿಳಿಸಿದೆ’ ಎಂದು ಹೇಳಿದೆ. ‘ಹಿಂಡೆನ್‌ಬರ್ಗ್‌ ಮತ್ತು ಕಿಂಗ್‌ಡನ್‌ ನಡುವಿನ ಬಾಂಧವ್ಯ 2022ರ ಸೆಪ್ಟೆಂಬರ್‌ನಲ್ಲಿ ಶುರುವಾಗಿದೆ’ ಎಂದು ಹೇಳಿದೆ.  

‘ಕೋಟಕ್‌ ಹೆಸರು ಮರೆಮಾಚಲು ಯತ್ನ’

ಅದಾನಿ ಸಮೂಹದ ಷೇರುಗಳಿಂದ ಅನಾಮಧೇಯ ಹೂಡಿಕೆದಾರರಿಗೆ ಲಾಭ ಮಾಡಿಕೊಡಲು ಉದ್ಯಮಿ ಉದಯ್‌ ಕೋಟಕ್‌ ಸ್ಥಾಪಿಸಿರುವ ಕೋಟಕ್‌ ಮಹೀಂದ್ರ ಬ್ಯಾಂಕ್‌ ಸಾಗರೋತ್ತರ ಫಂಡ್‌ ಸೃಷ್ಟಿಸಿದೆ ಎಂದು ಹಿಂಡೆನ್‌ಬರ್ಗ್‌ ರಿಸರ್ಚ್‌ ಆರೋಪಿಸಿದೆ.   ಆದರೆ ಸೆಬಿ ನೀಡಿರುವ ನೋಟಿಸ್‌ನಲ್ಲಿ ಕೋಟಕ್‌ ಬ್ಯಾಂಕ್‌ ಅನ್ನು ಹೆಸರಿಸಿಲ್ಲ ಏಕೆ? ಎಂದು ಪ್ರಶ್ನಿಸಿದೆ.  ‘ಕೋಟಕ್‌ ಬ್ಯಾಂಕ್‌ ದೇಶದ ಅತಿದೊಡ್ಡ ಬ್ಯಾಂಕ್‌ ಮತ್ತು ಬ್ರೋಕರೇಜ್‌ ಸಂಸ್ಥೆಯಾಗಿದೆ. ನೋಟಿಸ್‌ನಲ್ಲಿ ಕೆ–ಇಂಡಿಯಾ ಆಪರ್ಚುನಿಟೀಸ್‌ ಫಂಡ್‌ ಮತ್ತು ಸಂಕ್ಷಿಪ್ತವಾಗಿ ‘ಕೆಎಂಐಎಲ್‌’ ಎಂದು ನಮೂದಿಸಲಾಗಿದೆ. ಆದರೆ ಕೋಟಕ್‌ ಮಹೀಂದ್ರ ಇನ್‌ವೆಸ್ಟ್‌ಮೆಂಟ್ಸ್‌ ಲಿಮಿಟೆಡ್‌ ಎಂದು ನಮೂದಿಸಿಲ್ಲ. ಆ ಮೂಲಕ ಕೋಟಕ್‌ ಹೆಸರನ್ನು ಮರೆಮಾಚಲು ಸೆಬಿ ಯತ್ನಿಸಿದೆ’ ಎಂದು ಆರೋಪಿಸಿದೆ.  ₹7777 ಕೋಟಿ ನಷ್ಟ: ಅದಾನಿ– ಹಿಂಡೆನ್‌ಬರ್ಗ್ ನಡುವಿನ ವಿವಾದದಲ್ಲಿ ಹೆಸರು ತಳಕು ಹಾಕಿಕೊಂಡಿರುವ ಬೆನ್ನಲ್ಲೇ ಕೋಟಕ್‌ ಮಹೀಂದ್ರ ಬ್ಯಾಂಕ್‌ನ ಷೇರುಗಳ ಮೌಲ್ಯದಲ್ಲಿ ಶೇ 2ರಷ್ಟು ಇಳಿಕೆಯಾಗಿದೆ. ಒಂದೇ ದಿನ ಬ್ಯಾಂಕ್‌ನ ಮಾರುಕಟ್ಟೆ ಬಂಡವಾಳವು ₹7777 ಕೋಟಿ ಕರಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.