ನವದೆಹಲಿ (ಪಿಟಿಐ): ಲೆಕ್ಕಪತ್ರಗಳಲ್ಲಿ ಅಕ್ರಮ ಎಸಗಲಾಗಿರುವ ಆರೋಪಗಳ ಕುರಿತು ಅಮೆರಿಕದ ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್‌ಚೇಂಜ್ ಕಮಿಷನ್ (ಎಸ್‌ಇಸಿ) ತನ್ನ ತನಿಖೆ ಪೂರ್ಣಗೊಳಿಸಿದೆ ಎಂದು ಇನ್ಫೊಸಿಸ್ ತಿಳಿಸಿದೆ.
ತನಿಖೆ ಪೂರ್ಣಗೊಂಡಿರುವುದರ ಬಗ್ಗೆ ’ಎಸ್‌ಇಸಿ‘ ತನಗೆ ಮಾಹಿತಿ ನೀಡಿದೆ. ಅಮೆರಿಕದ ಷೇರುಪೇಟೆ ನಿಯಂತ್ರಣ ಮಂಡಳಿಯು ಈ ವಿಷಯದ ಬಗ್ಗೆ ಇನ್ನಷ್ಟು ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ ಎಂದು ತಾನು ನಿರೀಕ್ಷಿಸುವುದಿಲ್ಲವೆಂದು ಇನ್ಫೊಸಿಸ್, ಮುಂಬೈ ಷೇರುಪೇಟೆಗೆ ತಿಳಿಸಿದೆ.
ಕಂಪನಿಯ ಉನ್ನತ ಅಧಿಕಾರಿಗಳು ವರಮಾನ ಮತ್ತು ಲಾಭ ಹೆಚ್ಚಿಸಲು ಲೆಕ್ಕಪತ್ರಗಳಲ್ಲಿ ಅಕ್ರಮಗಳನ್ನು ಎಸಗಿದ್ದಾರೆಂದು ಇನ್ಫೊಸಿಸ್ ಸಿಬ್ಬಂದಿ ಎಂದು ಹೇಳಿಕೊಂಡಿರುವ ಅನಾಮಧೇಯರು ಆರೋಪಿಸಿದ್ದರು. ಇದನ್ನು ಕಂಪನಿಯು ಹಿಂದಿನ ವರ್ಷದ ಅಕ್ಟೋಬರ್‌ನಲ್ಲಿ ಷೇರುಪೇಟೆಗಳ ಗಮನಕ್ಕೆ ತಂದಿತ್ತು.
ಹಣಕಾಸು ಅಕ್ರಮಗಳು ನಡೆದಿರುವ ಅಥವಾ ಉನ್ನತ ಅಧಿಕಾರಿಗಳು ತಪ್ಪು ಎಸಗಿರುವುದು ತನ್ನ ಲೆಕ್ಕಪತ್ರ ಸಮಿತಿಯ ತನಿಖೆಯಲ್ಲಿ ದೃಢಪಟ್ಟಿಲ್ಲ ಎಂದು ಕಂಪನಿಯು ಜನವರಿಯಲ್ಲಿ ತಿಳಿಸಿತ್ತು.
ದೇಶದ ಎರಡನೆ ಅತಿದೊಡ್ಡ ಸಾಫ್ಟ್‌ವೇರ್ ರಫ್ತು ಸೇವಾ ಸಂಸ್ಥೆಯಾಗಿರುವ ಇನ್ಫೊಸಿಸ್‌ನ ಷೇರುಗಳು ಭಾರತ ಮತ್ತು ಅಮೆರಿಕದ (ಅಮೆರಿಕನ್ ಡೆಪಾಸಿಟರಿ ರಿಸಿಪ್ಟ್– ಎಡಿಆರ್) ಷೇರುಪೇಟೆಗಳಲ್ಲಿ ವಹಿವಾಟು ನಡೆಸುತ್ತಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.