ADVERTISEMENT

ಮೈಂಡ್‌ಗ್ರೋವ್‌ ಟೆಕ್ನಾಲಜೀಸ್‌ನಿಂದ ಸೆಕ್ಯುರ್‌ ಐಒಟಿ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 10 ಮೇ 2024, 10:21 IST
Last Updated 10 ಮೇ 2024, 10:21 IST
ಶಾಶ್ವತ್ ಟಿ.ಆರ್.
ಶಾಶ್ವತ್ ಟಿ.ಆರ್.   

ಬೆಂಗಳೂರು: ಸೆಕ್ಯುರ್‌ ಐಒಟಿ (Secure IoT) ಹೆಸರಿನ ಸ್ಥಳೀಯವಾಗಿ ವಿನ್ಯಾಸಗೊಳಿಸಿದ ಭಾರತದ ಮೊದಲ ಉನ್ನತ ಕಾರ್ಯಕ್ಷಮತೆ ಹೊಂದಿದ ವಾಣಿಜ್ಯ ಸಿಸ್ಟಂ ಆನ್ ಚಿಪ್ ಅನ್ನು ಫ್ಯಾಬ್ ಲೆಸ್ ಸೆಮಿಕಂಡಕ್ಟರ್ ಸ್ಟಾರ್ಟ್ಅಪ್ ಆದ ಮೈಂಡ್‌ಗ್ರೋವ್ ಟೆಕ್ನಾಲಜೀಸ್ ಬಿಡುಗಡೆ ಮಾಡಿದೆ.

ಈ ಚಿಪ್ ಅನ್ನು ಐಒಟಿ ಸಾಧನಗಳಿಗೆ ವಿನ್ಯಾಸಗೊಳಿಸಲಾಗಿದೆ. ಇತರೆ ಚಿಪ್‌ಗಳಿಗಿಂತ ಈ ಚಿಪ್‌ನ ಬೆಲೆ ಶೇ 30ರಷ್ಟು ಕಡಿಮೆ ಇರಲಿದೆ. ಮೈಂಡ್‌ಗ್ರೋವ್ ಸ್ಟಾರ್ಟ್‌ಅಪ್‌ ಕೇವಲ ಎಂಟು ತಿಂಗಳೊಳಗೆ ಚಿಪ್ ಅನ್ನು ವಿನ್ಯಾಸಗೊಳಿಸಿ ತಯಾರಿಕೆಗಾಗಿ ಕಳುಹಿಸಿದೆ ಎಂದು ಕಂಪನಿ ತಿಳಿಸಿದೆ.

ಸೆಕ್ಯುರ್‌ ಐಒಟಿ 700 ಎಂಎಚ್‌ಝಡ್‌ ಉನ್ನತ ಕಾರ್ಯಕ್ಷಮತೆಯ ಮೈಕ್ರೋಕಂಟ್ರೋಲರ್ ಆಗಿದೆ. ಈ ವಿಭಾಗದಲ್ಲಿ ವಾಣಿಜ್ಯಕವಾಗಿ ಲಭ್ಯವಿರುವ ಏಕೈಕ ಭಾರತೀಯ ಚಿಪ್ ಇದಾಗಿದೆ ಎಂದು ತಿಳಿಸಿದೆ.

ADVERTISEMENT

ಮೈಂಡ್‌ಗ್ರೋವ್‌ನ ಈ ಚಿಪ್ ಅನ್ನು ಸ್ಮಾರ್ಟ್ ಸಾಧನಗಳಲ್ಲಿನ ನಿಯಂತ್ರಕ ಅಪ್ಲಿಕೇಶನ್‌ಗಳಿಗೆ ಉನ್ನತ ಕಂಪ್ಯೂಟಿಂಗ್ ಶಕ್ತಿ ಒದಗಿಸಲು ಹಾಗೂ ಅವುಗಳಿಗೆ ಪ್ರೋಗ್ರಾಮೇಬಿಲಿಟಿ, ಫ್ಲೆಕ್ಸಿಬಿಲಿಟಿ, ಭದ್ರತೆ ಒದಗಿಸಲು ವಿನ್ಯಾಸಗೊಳಿಸಿದೆ.

ಈ ಚಿಪ್ ಸ್ಮಾರ್ಟ್ ವಾಚ್‌ಗಳಂತಹ ಸಾಧನಗಳಿಂದ ಹಿಡಿದು ವಿದ್ಯುತ್, ನೀರು ಮತ್ತು ಗ್ಯಾಸ್ ಮೀಟರ್‌ಗಳಂತಹ ಸ್ಮಾರ್ಟ್ ಸಾಧನಗಳವರೆಗೆ ಮತ್ತು ಸ್ಮಾರ್ಟ್ ಲಾಕ್‌ಗಳು, ಫ್ಯಾನ್‌ಗಳು, ಸ್ಪೀಕರ್‌ಗಳು ಮತ್ತು ಟಿ.ವಿಗಳಂತಹ ಗೃಹ ಸಾಧನಗಳು, ಜೊತೆಗೆ ವಿದ್ಯುತ್‌ಚಾಲಿತ ಬ್ಯಾಟರಿ ನಿರ್ವಹಣಾ ವ್ಯವಸ್ಥೆ ಮತ್ತು ನಿಯಂತ್ರಣ ವ್ಯವಸ್ಥೆಗಳವರೆಗೆ ಎಲ್ಲಾ ಸಾಧನಗಳನ್ನು ನಿಯಂತ್ರಣ ಮಾಡುವ ಶಕ್ತಿ ಹೊಂದಿದೆ ಎಂದು ತಿಳಿಸಿದೆ.

ಮಧ್ಯಮ ಹಂತದ ಮಾರುಕಟ್ಟೆಯನ್ನು ಗುರಿಯಾಗಿಸಿಕೊಂಡ ಚಿಪ್‌ಗಳನ್ನು ವಿನ್ಯಾಸಗೊಳಿಸಲು ಮುಂದಾಗಿದ್ದೇವೆ. ಮೈಂಡ್‌ಗ್ರೋವ್‌ ಈ ವಿಚಾರದಲ್ಲಿ ಹೊಸ ದಿಸೆಯಲ್ಲಿ ಸಾಗುತ್ತಾ ಬೆಳವಣಿಗೆ ಸಾಧಿಸಲು ಬಯಸುತ್ತಿದೆ. ಉತ್ತಮ ಫ್ಲೆಕ್ಸಿಬಿಲಿಟಿ, ಹೊಂದಿಕೊಳ್ಳುವಿಕೆ, ಭದ್ರತೆ ಮತ್ತು ವೆಚ್ಚ-ದಕ್ಷತೆ ಜೊತೆಗೆ ದೃಢವಾದ ಬೆಂಬಲ ವ್ಯವಸ್ಥೆಯೊಂದಿಗೆ ಉತ್ಪನ್ನ ನೀಡುವುದರ ಮೂಲಕ ಇತರರಿಗಿಂತ ಮುಂಚೂಣಿಯಲ್ಲಿ ಸಾಗಲಿದ್ದೇವೆ ಎಂದು ಮೈಂಡ್‌ಗ್ರೋವ್ ಟೆಕ್ನಾಲಜೀಸ್‌ನ ಸಿಇಒ ಮತ್ತು ಸಹ ಸಂಸ್ಥಾಪಕ ಶಾಶ್ವತ್ ಟಿ.ಆರ್. ಹೇಳಿದ್ದಾರೆ.

ಚಿಪ್ ಅನ್ನು ಮಾರಾಟ ಮಾಡುವುದರ ಜೊತೆಗೆ, ಮೈಂಡ್‌ಗ್ರೋವ್‌ ಭಾರತದಲ್ಲಿ ನಾವೀನ್ಯತೆ ಹೆಚ್ಚಿಸಲು ಮತ್ತು ಉತ್ಪಾದನೆಯ ಪ್ರಮಾಣವನ್ನು ವೇಗಗೊಳಿಸಲು ಭಾರತೀಯ ಬ್ರ್ಯಾಂಡ್‌ಗಳಿಗೆ ವಿನ್ಯಾಸ ಬೆಂಬಲ ನೀಡಲು ಮುಂದಾಗಿದೆ ಎಂದು ತಿಳಿಸಿದ್ದಾರೆ.

ಇದು ಸೆಮಿಕಂಡಕ್ಟರ್ ಮತ್ತು ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ಸ್ವಾವಲಂಬನೆ ಮತ್ತು ಜಾಗತಿಕ ಸ್ಥಾನಮಾನ ಗಳಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ. ಭಾರತವು ವರ್ಷಕ್ಕೆ 100 ಕೋಟಿ (ಒಂದು ಶತಕೋಟಿ) ಚಿಪ್‌ಗಳನ್ನು ಬಳಸುತ್ತದೆ. ಅವುಗಳಲ್ಲಿ 1ಕೋಟಿಯಿಂದ  5 ಕೋಟಿಗಳಷ್ಟು ಚಿಪ್ ಅನ್ನು ಸೆಕ್ಯುರ್‌ ಐಒಟಿಗೆ ಬದಲಾಯಿಸಬಹುದು ಎಂದು ತಿಳಿಸಿದ್ದಾರೆ. 

ಮೈಕ್ರೋಚಿಪ್‌ಗಳಿಗೆ ವಿಶ್ವದಾದ್ಯಂತ ವ್ಯಾಪಕ ಬೇಡಿಕೆಯಿದೆ. ಜಾಗತಿಕ ಖರೀದಿದಾರರು ಭಾರತದ ಹೊಸ ಉತ್ಪನ್ನ ಆಯ್ಕೆಯ ಬಗ್ಗೆ ಉತ್ಸುಕತೆ ಹೊಂದಲಿದ್ದಾರೆ ಎಂಬ ನಿರೀಕ್ಷೆ ನಮಗಿದೆ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.