ADVERTISEMENT

ಷೇರುಪೇಟೆ: ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿಕೆ ಕಂಡ ಸೆನ್ಸೆಕ್ಸ್, ನಿಫ್ಟಿ

ಪಿಟಿಐ
Published 3 ಜುಲೈ 2023, 6:26 IST
Last Updated 3 ಜುಲೈ 2023, 6:26 IST
   

ನವದೆಹಲಿ: ದೇಶದ ಷೇರುಪೇಟೆಗಳಲ್ಲಿ ಗೂಳಿ ಓಟ ಜೋರಾಗಿದ್ದು, ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್‌ ಇದೇ ಮೊದಲಿಗೆ 65 ಸಾವಿರದ ಗಡಿ ದಾಟಿದೆ. ದಿನದ ವಹಿವಾಟಿನಲ್ಲಿ ಸೆನ್ಸೆಕ್ಸ್ 486 ಅಂಶ ಏರಿಕೆ ಕಂಡು 65,205 ಅಂಶಗಳಿಗೆ ತಲುಪಿತು. ವಹಿವಾಟಿನ ಒಂದು ಹಂತದಲ್ಲಿ 65,300 ಅಂಶಗಳಿಗೂ ಏರಿಕೆ ಕಂಡಿತ್ತು.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 133 ಅಂಶ ಏರಿಕೆ ಕಂಡು 19,322 ಅಂಶಗಳ ದಾಖಲೆ ಮಟ್ಟದಲ್ಲಿ ವಹಿವಾಟು ಅಂತ್ಯಗೊಂಡಿತು.

ಜೂನ್‌ ತಿಂಗಳ ಜಿಎಸ್‌ಟಿ ಸಂಗ್ರಹ ಹೆಚ್ಚಾಗಿರುವುದು, ಮುಂಗಾರು ಮಳೆಯು ದೇಶದ ಬಹುಪಾಲು ಪ್ರದೇಶ
ಗಳಿಗೆ ವ್ಯಾಪಿಸಿರುವುದು ಹೂಡಿಕೆದಾರರಲ್ಲಿ ಉತ್ಸಾಹ ಮೂಡಿಸಿದೆ. ವಿದೇಶಿ ಬಂಡವಾಳ ಒಳಹರಿವು ಹೆಚ್ಚಾಗಿ
ರುವುದೂ ಸೂಚ್ಯಂಕದ ಏರಿಕೆ ಕಾರಣವಾಗಿರಬಹುದು ಎಂದು ಕೋಟಕ್ ಸೆಕ್ಯುರಿಟೀಸ್‌ನ ಸಂಶೋಧನಾ ಮುಖ್ಯಸ್ಥ ‌ಶ್ರೀಕಾಂತ್‌ ಚೌಹಾಣ್‌ ಹೇಳಿದ್ದಾರೆ.

ADVERTISEMENT

ಸೆನ್ಸೆಕ್ಸ್‌ನಲ್ಲಿ ಸೋಮವಾರ ರಿಲಯನ್ಸ್ ಇಂಡಸ್ಟ್ರೀಸ್‌ ಷೇರು ಮೌಲ್ಯ ಶೇ 2.53ರಷ್ಟು ಗರಿಷ್ಠ ಏರಿಕೆ ಕಂಡಿತು. ವಲಯವಾರು ತೈಲ ಮತ್ತು ಅನಿಲ ಶೇ 2.28ರಷ್ಟು, ಇಂಧನ ಶೇ 2.08ರಷ್ಟು, ಲೋಹ ಶೇ 1.11ರಷ್ಟು ಮತ್ತು ಎಫ್‌ಎಂಸಿಜಿ ಶೇ 1.09ರಷ್ಟು ಗಳಿಕೆ ಕಂಡಿತು. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲ ದರವು ಶೇ 0.97ರಷ್ಟು ಏರಿಕೆ ಕಂಡು ಬ್ಯಾರಲ್‌ಗೆ 76.14 ಡಾಲರ್‌ಗೆ ತಲುಪಿತು.

ಮಾರುಕಟ್ಟೆ ಮೌಲ್ಯ ವೃದ್ಧಿ: ಸೋಮವಾರದ ವಹಿವಾಟಿನ ಅಂತ್ಯದ ವೇಳೆಗೆ ಬಿಎಸ್‌ಇ ಮಾರುಕಟ್ಟೆ ಬಂಡವಾಳ ಮೌಲ್ಯವು ₹298.21 ಲಕ್ಷ ಕೋಟಿಗೆ ತಲುಪುವ ಮೂಲಕ ದಾಖಲೆ ಮಟ್ಟಕ್ಕೆ ಏರಿತು. ನಾಲ್ಕು ದಿನಗಳ ವಹಿವಾಟಿನಲ್ಲಿ ಹೂಡಿಕೆದಾರರ ಸಂಪತ್ತು ಮೌಲ್ಯ ₹7.54 ಲಕ್ಷ ಕೋಟಿಯಷ್ಟು ಏರಿಕೆ ಕಂಡಿದೆ.

ಮಾರುಕಟ್ಟೆ ಮೌಲ್ಯ ಗರಿಷ್ಠ ಮಟ್ಟದಲ್ಲಿ ಇರುವಾಗ ಅಪಾಯವೂ ಹೆಚ್ಚು. ಕೆಲವು ನಕಾರಾತ್ಮಕ ವಿದ್ಯಮಾನಗಳು ಷೇರುಪೇಟೆಯಲ್ಲಿ ತೀವ್ರ ಕುಸಿತಕ್ಕೆ ಕಾರಣವಾಗಬಹುದು. ಹೀಗಾಗಿ ಹೂಡಿಕೆದಾರರು ಎಚ್ಚರಿಕೆಯಿಂದ ಇರಬೇಕು.
-ವಿ.ಕೆ.ವಿಜಯಕುಮಾರ್, ಜಿಯೋಜಿತ್‌ ಫೈನಾನ್ಶಿಯಲ್‌
ನಿಫ್ಟಿ ಬ್ಯಾಂಕ್‌ ಇಂಡೆಕ್ಸ್‌ ಉತ್ತಮ ಗಳಿಕೆ ಕಂಡಿದ್ದು, 45 ಸಾವಿರದ ಗಡಿಯನ್ನು ದಾಟಿದೆ. ಈ ಏರುಗತಿಯ ಪ್ರಯೋಜನ ಪಡೆಯಲು ವರ್ತಕರು ಮತ್ತು ಹೂಡಿಕೆದಾರರು ಖರೀದಿ ಪ್ರವೃತ್ತಿಯನ್ನು ಮುಂದುವರಿಸಬೇಕು. ಆದರೆ, ಮುಂದೆ 45,500ದ ಗಡಿ ಇದ್ದು, ಅಲ್ಲಿ ಸೂಚ್ಯಂಕದ ಏರುಮುಖ ಚಲನೆಯ ವೇಗ ತಗ್ಗುವ ಸಾಧ್ಯತೆ ಇದೆ ಎನ್ನುವುದನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು. ವಿಶ್ಲೇಷಕ
-ಕುನಾಲ್‌ ಶಾ, ಎಲ್‌ಕೆಪಿ ಸೆಕ್ಯುರಿಟೀಸ್‌ನ ಹಿರಿಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.