ADVERTISEMENT

ಹೊಸ ಎತ್ತರಕ್ಕೆ ಜಿಗಿದ ನಿಫ್ಟಿ: 78,000 ಗಡಿ ದಾಟಿದ ಸೆನ್ಸೆಕ್ಸ್‌

ಪಿಟಿಐ
Published 25 ಜೂನ್ 2024, 13:55 IST
Last Updated 25 ಜೂನ್ 2024, 13:55 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

‌ಮುಂಬೈ: ದೇಶೀಯ ಷೇರುಪೇಟೆಗಳಲ್ಲಿ ಗೂಳಿ ಓಟ ಜೋರಾಗಿದ್ದು, ಮಂಗಳವಾರ ನಡೆದ ವಹಿವಾಟಿನಲ್ಲಿ ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್‌ ಇದೇ ಮೊದಲ ಬಾರಿಗೆ 78 ಸಾವಿರ ಅಂಶದ ಗಡಿ ದಾಟಿದೆ. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ ಹೊಸ ಎತ್ತರಕ್ಕೆ ಜಿಗಿದಿದೆ.

ಬ್ಯಾಂಕಿಂಗ್‌ ವಲಯದ ಬ್ಲೂಚಿಪ್‌ ಕಂಪನಿಗಳು ಹಾಗೂ ರಿಲಯನ್ಸ್ ಇಂಡಸ್ಟ್ರಿಸ್‌ ಷೇರುಗಳ ಖರೀದಿಯಿಂದಾಗಿ ಷೇರು ಸೂಚ್ಯಂಕಗಳು ಏರಿಕೆಯ ಹಾದಿ ಹಿಡಿದವು. 

ADVERTISEMENT

ಸೆನ್ಸೆಕ್ಸ್‌ 712 ಅಂಶ ಏರಿಕೆ (ಶೇ 0.92ರಷ್ಟು) ಕಂಡು 78,053 ಅಂಶಗಳಲ್ಲಿ ವಹಿವಾಟು ಮುಗಿಸುವ ಮೂಲಕ ಸಾರ್ವಕಾಲಿಕ ದಾಖಲೆ ಬರೆದಿದೆ. ದಿನದ ವಹಿವಾಟಿನಲ್ಲಿ 823 ಅಂಶ ಏರಿಕೆ ಕಂಡಿತ್ತು. ಜೂನ್‌ 10ರಂದು ನಡೆದ ವಹಿವಾಟಿನಲ್ಲಿ ಸೆನ್ಸೆಕ್ಸ್‌ ಪ್ರಥಮ ಬಾರಿಗೆ 77 ಸಾವಿರದ ಗಡಿ ದಾಟಿತ್ತು.

ನಿಫ್ಟಿ 183 ಅಂಶ ಏರಿಕೆ ಕಂಡು 23,721 ಅಂಶಗಳಲ್ಲಿ ಸ್ಥಿರಗೊಂಡಿತು. ದಿನದ ವಹಿವಾಟಿನಲ್ಲಿ 216 ಅಂಶ ಏರಿಕೆ ಕಂಡಿತ್ತು.

ಸೆನ್ಸೆಕ್ಸ್‌ ಗುಚ್ಛದಲ್ಲಿನ ಎಕ್ಸಿಸ್‌ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್, ಟೆಕ್‌ ಮಹೀಂದ್ರ, ಎಲ್‌ ಆ್ಯಂಡ್ ಟಿ, ಬಜಾಜ್‌ ಫಿನ್‌ಸರ್ವ್‌, ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ, ರಿಲಯನ್ಸ್ ಇಂಡಸ್ಟ್ರೀಸ್‌, ಇನ್ಫೊಸಿಸ್‌ ಕಂ‍ಪನಿಯ ಷೇರಿನ ಮೌಲ್ಯದಲ್ಲಿ ಏರಿಕೆಯಾಗಿದೆ.

ಪವರ್‌ ಗ್ರಿಡ್‌, ಏಷ್ಯನ್‌ ಪೇಂಟ್ಸ್‌, ಟಾಟಾ ಸ್ಟೀಲ್‌, ನೆಸ್ಲೆ ಇಂಡಿಯಾ, ಮಾರುತಿ ಸುಜುಕಿ, ಜೆಎಸ್‌ಡಬ್ಲ್ಯು ಸ್ಟೀಲ್‌ನ ಷೇರಿನ ಮೌಲ್ಯದಲ್ಲಿ ಇಳಿಕೆಯಾಗಿದೆ.

‘ಬ್ಯಾಂಕಿಂಗ್‌ ವಲಯದ ಷೇರುಗಳು ನಿಫ್ಟಿ ಸಾರ್ವಕಾಲಿಕ ದಾಖಲೆ ಬರೆಯಲು ನೆರವಾಗಿವೆ. ಆದರೆ, ಇತರೆ ವಲಯದ ಷೇರುಗಳು ಪ್ರಸಕ್ತ ವರ್ಷದಲ್ಲಿ ಇಲ್ಲಿಯವರೆಗೆ 34ನೇ ಬಾರಿಗೆ ಇಳಿಕೆ ದಾಖಲಿಸಿವೆ’ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್‌ನ ರಿಟೇಲ್‌ ರಿಸರ್ಚ್‌ನ ಮುಖ್ಯಸ್ಥ ದೀಪಕ್‌ ಜಸನಿ ತಿಳಿಸಿದ್ದಾರೆ.

ಬಿಎಸ್‌ಇ ಮಿಡ್‌ ಕ್ಯಾಪ್‌ ಶೇ 0.26ರಷ್ಟು ಹಾಗೂ ಸ್ಮಾಲ್‌ ಕ್ಯಾಪ್‌ ಸೂಚ್ಯಂಕ ಶೇ 0.03ರಷ್ಟು ಇಳಿಕೆ ಕಂಡಿವೆ.

‘2023–24ನೇ ಆರ್ಥಿಕ ವರ್ಷದ ಮಾರ್ಚ್‌ ತ್ರೈಮಾಸಿಕದಲ್ಲಿ ಆಮದು ಪ್ರಮಾಣ ಕಡಿಮೆಯಾಗಿರುವುದರಿಂದ ಚಾಲ್ತಿ ಖಾತೆ ಮಿಗತೆ ಹೆಚ್ಚಿದೆ. ಇದು ರೂಪಾಯಿ ಮೌಲ್ಯದ ಮೇಲಿನ ಒತ್ತಡವನ್ನು ಕಡಿಮೆ ಮಾಡಿದೆ. ಜೊತೆಗೆ, ವಿದೇಶಿ ಸಾಂಸ್ಥಿಕ ಬಂಡವಾಳದ ಒಳಹರಿವು ಹೆಚ್ಚಳಕ್ಕೆ ದಾರಿ ಮಾಡಿಕೊಡಲಿದೆ’ ಎಂದು ಜಿಯೋಜಿತ್‌ ಫೈನಾನ್ಶಿಯಲ್‌ ಸರ್ವಿಸಸ್‌ನ ಮುಖ್ಯ ಹೂಡಿಕೆ ತಜ್ಞ ವಿ.ಕೆ. ವಿಜಯ್‌ಕುಮಾರ್‌ ಹೇಳಿದ್ದಾರೆ.

‘ಮತ್ತೊಂದೆಡೆ ಅಮೆರಿಕದ ಫೆಡರಲ್‌ ರಿಸರ್ವ್‌ ಬಡ್ಡಿ ದರ ಕಡಿತ ಮಾಡುವ ನಿರೀಕ್ಷೆ ಹೆಚ್ಚಿದೆ. ಹಾಗಾಗಿ, ದೇಶೀಯ ಮಾರುಕಟ್ಟೆಗಳಲ್ಲಿ ಸಕಾರಾತ್ಮಕ ವಹಿವಾಟು ನಡೆದಿದೆ’ ಎಂದು ತಿಳಿಸಿದ್ದಾರೆ.

ಬ್ಯಾಂಕಿಂಗ್‌ (ಶೇ 1.87), ಐ.ಟಿ (ಶೇ 0.53), ಟೆಕ್‌ (ಶೇ 0.43) ಹಾಗೂ ಬಂಡವಾಳ ಸರಕು (ಶೇ 0.28) ಸೂಚ್ಯಂಕ ಏರಿಕೆ ಕಂಡಿವೆ. 

ರಿಯಾಲ್ಟಿ (ಶೇ 1.82), ಪವರ್‌ (ಶೇ 1.05), ಯುಟಿಲಿಟಿ (ಶೇ 0.95), ಲೋಹ (ಶೇ 0.84) ಮತ್ತು ಟೆಲಿಕಮ್ಯೂನಿಕೇಷನ್‌ (ಶೇ 0.28) ಸೂಚ್ಯಂಕ ಇಳಿಕೆ ಕಂಡಿವೆ.

ಸೋಲ್‌, ಟೋಕಿಯೊ, ಹಾಂಗ್‌ಕಾಂಗ್‌ ಮಾರುಕಟ್ಟೆಯಲ್ಲಿ ಸಕಾರಾತ್ಮಕ ವಹಿವಾಟು ನಡೆದರೆ, ಶಾಂಘೈ ಷೇರುಪೇಟೆ ಇಳಿಕೆ ಕಂಡಿವೆ. 

ಜಾಗತಿಕ ಮಟ್ಟದಲ್ಲಿ ಬ್ರೆಂಟ್‌ ಕಚ್ಚಾ ತೈಲದ ಬೆಲೆಯಲ್ಲಿ ಶೇ 0.44ರಷ್ಟು ಇಳಿಕೆಯಾಗಿದ್ದು, ಪ್ರತಿ ಬ್ಯಾರೆಲ್‌ಗೆ 85.63 ಡಾಲರ್‌ ಆಗಿದೆ.

ಸೋಮವಾರದ ವಹಿವಾಟಿನಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ₹653 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ ಎಂದು ಷೇರುಪೇಟೆಯ ಅಂಕಿ–ಅಂಶ ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.