ADVERTISEMENT

ಸತತ 2ನೇ ದಿನವೂ ಷೇರುಪೇಟೆ ಇಳಿಕೆ

ಪಿಟಿಐ
Published 3 ಜನವರಿ 2024, 13:59 IST
Last Updated 3 ಜನವರಿ 2024, 13:59 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಮುಂಬೈ: ಸತತ ಎರಡನೇ ದಿನವಾದ ಬುಧವಾರವೂ ಷೇರುಪೇಟೆಯು ಇಳಿಕೆ ದಾಖಲಿಸಿತು.

ಎಚ್‌ಡಿಎಫ್‌ಸಿ ಬ್ಯಾಂಕ್‌, ಐ.ಟಿ ಷೇರುಗಳ ಮಾರಾಟದ ಒತ್ತಡ ಹಾಗೂ ಅಮೆರಿಕದ ಫೆಡರಲ್‌ ರಿಸರ್ವ್‌ ಬಡ್ಡಿದರ ಕಡಿತಗೊಳಿಸಬಹುದು ಎಂಬ ಸುಳಿವು ಇಳಿಕೆಗೆ ಕಾರಣವಾಗಿದೆ ಎಂದು ಮಾರುಕಟ್ಟೆ ವಿಶ್ಲೇಷಕರು ತಿಳಿಸಿದ್ದಾರೆ.

ಮುಂಬೈ ಷೇರುಪೇಟೆ ಸೂಚ್ಯಂಕ (ಬಿಎಸ್‌ಇ) ಸೆನ್ಸೆಕ್ಸ್‌ 535 ಅಂಶ ಇಳಿಕೆಯಾಗಿ, 71,356ರಲ್ಲಿ ಸ್ಥಿರಗೊಂಡಿತು. ದಿನದ ವಹಿವಾಟಿನಲ್ಲಿ 588 ಅಂಶ ಕಡಿಮೆಯಾಗಿ, 71,303ಕ್ಕೆ ತಲುಪಿತ್ತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 148 ಅಂಶ ಇಳಿಕೆಯಾಗಿ 21,517ಕ್ಕೆ ಮುಟ್ಟಿತು.

ADVERTISEMENT

ಜೆಎಸ್‌ಡಬ್ಯ್ಲು ಸ್ಟೀಲ್‌, ಟಾಟಾ ಸ್ಟೀಲ್‌, ಟೆಕ್‌ ಮಹೀಂದ್ರ, ಇನ್ಫೊಸಿಸ್‌, ವಿಪ್ರೊ, ಟಾಟಾ ಕನ್ಸಲ್ಟೆನ್ಸಿ ಸರ್ವಿಸ್‌, ನೆಸ್ಟ್ಲೆ, ಎಚ್‌ಸಿಎಲ್ ಟೆಕ್ನಾಲಜೀಸ್‌, ಎಚ್‌ಡಿಎಫ್‌ಸಿ ಬ್ಯಾಂಕ್‌ ಮತ್ತು ಮಾರುತಿ ಕಂಪನಿಯ ಷೇರುಗಳು ಇಳಿಕೆ ಕಂಡಿವೆ.

ಇಂಡಸ್‌ಇಂಡ್‌ ಬ್ಯಾಂಕ್‌, ಐಟಿಸಿ, ಭಾರ್ತಿ ಏರ್‌ಟೆಲ್‌ ಮತ್ತು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಗಳಿಕೆ ಕಂಡಿವೆ. 

ಬಿಎಸ್‌ಇ ಸ್ಮಾಲ್‌ ಕ್ಯಾಪ್‌ ಮತ್ತು ಮಿಡ್‌ ಕ್ಯಾಪ್‌ ಸೂಚ್ಯಂಕಗಳು ಏರಿಕೆಯಾಗಿವೆ. ಲೋಹ, ಐಟಿ, ಟೆಕ್‌, ಸರಕು ಮತ್ತು ಹಣಕಾಸು ಸೇವೆ ಷೇರುಗಳು ಇಳಿಕೆಯಾಗಿವೆ. ಯುಟಿಲಿಟಿ, ಸೇವೆ, ರಿಯಾಲ್ಟಿ, ಇಂಧನ ಮತ್ತು ಆರೋಗ್ಯ ಕ್ಷೇತ್ರದ ಷೇರುಗಳು ಏರಿಕೆ ಕಂಡಿವೆ. 

ಬ್ರೆಂಟ್‌ ಕಚ್ಚಾ ತೈಲ ಶೇ 0.55ರಷ್ಟು ಇಳಿಕೆಯಾಗಿ ಬ್ಯಾರೆಲ್‌ 75.47 ಡಾಲರ್‌ಗೆ ತಲುಪಿದೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಮಂಗಳವಾರ ₹1,602 ಕೋಟಿ ಮೌಲ್ಯದ ಈಕ್ವಿಟಿಗಳನ್ನು ಖರೀದಿಸಿದ್ದಾರೆ ಎಂದು ಷೇರುಪೇಟೆಯ ಅಂಕಿ ಅಂಶಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.