ಮುಂಬೈ: ಜಾಗತಿಕ ಷೇರುಪೇಟೆಗಳಲ್ಲಿನ ಖರೀದಿ ಉತ್ಸಾಹ ಮತ್ತು ರಿಲಯನ್ಸ್ ಇಂಡಸ್ಟ್ರೀಸ್, ಭಾರ್ತಿ ಏರ್‌ಟೆಲ್, ಟಿಸಿಎಸ್ ಷೇರುಗಳಲ್ಲಿನ ಗಳಿಕೆಯ ಫಲವಾಗಿ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು ಶುಕ್ರವಾರದ ವಹಿವಾಟಿನಲ್ಲಿ 178 ಅಂಶಗಳ ಹೆಚ್ಚಳ ಕಂಡಿದೆ.
‘ಕೋವಿಡ್–19’ ಚಿಕಿತ್ಸೆ ಉದ್ದೇಶಕ್ಕೆ, ಕ್ಯಾಡಿಲ್ಲಾ ಹೆಲ್ತ್‌ಕೇರ್‌ನ ಜೈಡಸ್ ಲಸಿಕೆಯನ್ನು ಮಾನವನ ಮೇಲೆ ಪ್ರಯೋಗ ಮಾಡಲು ಅನುಮತಿ ದೊರೆತಿರುವುದು ದೇಶಿ ಹೂಡಿಕೆದಾರರ ಉತ್ಸಾಹ ಹೆಚ್ಚಿಸಿದೆ ಎಂದು ಷೇರು ವಹಿವಾಟುದಾರರು ತಿಳಿಸಿದ್ದಾರೆ.
ದಿನದ ವಹಿವಾಟಿನಲ್ಲಿ 36,110 ಅಂಶಗಳ ಗರಿಷ್ಠ ಮಟ್ಟ ತಲುಪಿದ್ದ ಸೂಚ್ಯಂಕವು ಅಂತಿಮವಾಗಿ 177 ಅಂಶಗಳ ಹೆಚ್ಚಳದೊಂದಿಗೆ 36,021 ಅಂಶಗಳಲ್ಲಿ ವಹಿವಾಟು ಕೊನೆಗೊಳಿಸಿತು. ರಾಷ್ಟ್ರೀಯ ಷೇರುಪೇಟೆಯ ನಿಫ್ಟಿ 55 ಅಂಶ ಏರಿಕೆಯಾಗಿ 10,607 ಅಂಶಗಳಿಗೆ ತಲುಪಿತು.
ಭಾರ್ತಿ ಏರ್‌ಟೆಲ್ ಷೇರು (ಶೇ 4) ಗರಿಷ್ಠ ಏರಿಕೆ ದಾಖಲಿಸಿತು. ನಂತರದ ಸ್ಥಾನದಲ್ಲಿ ಬಜಾಜ್ ಆಟೊ, ಟಿಸಿಎಸ್, ಟೈಟಾನ್, ಎಚ್‌ಸಿಎಲ್ ಟೆಕ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳ ಬೆಲೆ ಏರಿಕೆ ಕಂಡಿವೆ.
ಶಾಂಘೈ, ಹಾಂಗ್‌ಕಾಂಗ್, ಟೋಕಿಯೊ ಮತ್ತು ಸೋಲ್ ಷೇರುಪೇಟೆಗಳಲ್ಲಿ ಖರೀದಿ ಉತ್ಸಾಹ ಮತ್ತು ಯುರೋಪ್ ಪೇಟೆಗಳಲ್ಲಿ ಮಾರಾಟ ಒತ್ತಡ ಕಂಡು ಬಂದಿದೆ.
ರೂಪಾಯಿ ಚೇತರಿಕೆ: ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್ ಎದುರಿನ ರೂಪಾಯಿ ದರ 38 ಪೈಸೆ ಹೆಚ್ಚಳಗೊಂಡು 74.66ಕ್ಕೆ ಏರಿಕೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.