ADVERTISEMENT

ಷೇರುಪೇಟೆ: ನಿಲ್ಲದ ಕರಡಿ ಕುಣಿತ

ಪಿಟಿಐ
Published 7 ಅಕ್ಟೋಬರ್ 2024, 14:42 IST
Last Updated 7 ಅಕ್ಟೋಬರ್ 2024, 14:42 IST
ಕರಡಿ
ಕರಡಿ   

ಮುಂಬೈ: ಎಚ್‌ಡಿಎಫ್‌ಸಿ ಬ್ಯಾಂಕ್‌, ರಿಲಯನ್ಸ್‌ ಇಂಡಸ್ಟ್ರೀಸ್‌ ಷೇರುಗಳು ಮಾರಾಟದ ಒತ್ತಡಕ್ಕೆ ಸಿಲುಕಿದ್ದು ಮತ್ತು ವಿದೇಶಿ ಬಂಡವಾಳದ ಹೊರಹರಿವಿನಿಂದ ಸೋಮವಾರದ ವಹಿವಾಟಿನಲ್ಲೂ ಷೇರು ಸೂಚ್ಯಂಕಗಳು ಇಳಿಕೆ ಕಂಡಿವೆ.

ಸತತ ಆರನೇ ದಿನದ ವಹಿವಾಟಿನಲ್ಲೂ ಕರಡಿ ಕುಣಿತ ಮುಂದುವರಿದಿದೆ. ಇದರಿಂದ ಬಿಎಸ್‌ಇ ನೋಂದಾಯಿತ ಕಂಪನಿಗಳ ಮಾರುಕಟ್ಟೆ ಮೌಲ್ಯ ₹8.90 ಲಕ್ಷ ಕೋಟಿ ಇಳಿಕೆಯಾಗಿದ್ದು, ಕಂಪನಿಗಳ ಒಟ್ಟು ಮಾರುಕಟ್ಟೆ ಮೌಲ್ಯ ₹451 ಲಕ್ಷ ಕೋಟಿ ಆಗಿದೆ.

ಮುಂಬೈ ಷೇರುಪೇಟೆ ಸೂಚ್ಯಂಕ (ಬಿಎಸ್‌ಇ) ಸೆನ್ಸೆಕ್ಸ್‌ 638 ಅಂಶ ಇಳಿಕೆಯಾಗಿ, 81,050ಕ್ಕೆ ಸ್ಥಿರಗೊಂಡಿದೆ. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 218 ಅಂಶ ಕಡಿಮೆಯಾಗಿ 24,795ಕ್ಕೆ ವಹಿವಾಟು ಅಂತ್ಯಗೊಂಡಿದೆ.

ADVERTISEMENT

ವಿದ್ಯುತ್‌ಚಾಲಿತ ವಾಹನ ತಯಾರಿಕಾ ಕಂಪನಿ ಓಲಾದ ಷೇರಿನ ಮೌಲ್ಯ ಶೇ 8ರಷ್ಟು ಇಳಿದಿದೆ. ಅದಾನಿ ಪೋರ್ಟ್‌ ಆ್ಯಂಡ್‌ ಸ್ಪೆಷಲ್‌ ಎಕನಾಮಿಕ್‌ ಜೋನ್ಸ್‌, ಎನ್‌ಟಿಪಿಸಿ, ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ, ಪವರ್‌ಗ್ರಿಡ್‌, ಇಂಡಸ್‌ಇಂಡ್‌ ಬ್ಯಾಂಕ್‌, ಎಕ್ಸಿಸ್‌ ಬ್ಯಾಂಕ್‌, ಎಚ್‌ಡಿಎಫ್‌ಸಿ ಬ್ಯಾಂಕ್‌, ಟೈಟನ್‌ ಮತ್ತು ಅಲ್ಟ್ರಾಟೆಕ್‌ ಸಿಮೆಂಟ್‌ನ ಷೇರಿನ ಮೌಲ್ಯದಲ್ಲಿ ಇಳಿಕೆಯಾಗಿದೆ.

ಮಹೀಂದ್ರಾ ಆ್ಯಂಡ್‌ ಮಹೀಂದ್ರಾ, ಐಟಿಸಿ, ಭಾರ್ತಿ ಏರ್‌ಟೆಲ್‌, ಇನ್ಫೊಸಿಸ್, ಬಜಾಜ್‌ ಫೈನಾನ್ಸ್‌, ಟಿಸಿಎಸ್‌ ಮತ್ತು ಟೆಕ್‌ ಮಹೀಂದ್ರ ಷೇರಿನ ಮೌಲ್ಯದಲ್ಲಿ ಏರಿಕೆಯಾಗಿದೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಶೇ 2.09ರಷ್ಟು ಏರಿಕೆಯಾಗಿದೆ. ಪ್ರತಿ ಬ್ಯಾರೆಲ್‌ಗೆ 79.68 ಡಾಲರ್‌ಗೆ (₹6,692) ತಲು‍‍ಪಿದೆ. ಏಷ್ಯಾದ ಮಾರುಕಟ್ಟೆಯಲ್ಲಿ ಟೋಕಿಯೊ, ಶಾಂಘೈ, ಹಾಂಗ್‌ಕಾಂಗ್‌ ಮತ್ತು ಸೋಲ್‌ ಸಕಾರಾತ್ಮಕ ವಹಿವಾಟು ನಡೆಸಿವೆ.

ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಶುಕ್ರವಾರದ ವಹಿವಾಟಿನಲ್ಲಿ ₹9,896 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಇದೇ ವೇಳೆ ದೇಶಿ ಸಾಂಸ್ಥಿಕ ಹೂಡಿಕೆದಾರರು (ಡಿಐಐ) ₹8,905 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.