ADVERTISEMENT

Share Market | ಷೇರು ಸೂಚ್ಯಂಕ ಇಳಿಕೆ: ಹೂಡಿಕೆದಾರರಿಗೆ ₹6 ಲಕ್ಷ ಕೋಟಿ ನಷ್ಟ

ಪಿಟಿಐ
Published 4 ನವೆಂಬರ್ 2024, 14:05 IST
Last Updated 4 ನವೆಂಬರ್ 2024, 14:05 IST
ಷೇರು ಸೂಚ್ಯಂಕ
ಷೇರು ಸೂಚ್ಯಂಕ   

ಮುಂಬೈ: ರಿಲಯನ್ಸ್‌ ಇಂಡಸ್ಟ್ರೀಸ್‌, ಬ್ಯಾಂಕಿಂಗ್‌ ಷೇರುಗಳು ಮಾರಾಟದ ಒತ್ತಡಕ್ಕೆ ಸಿಲುಕಿದ್ದು ಹಾಗೂ ವಿದೇಶಿ ಬಂಡವಾಳದ ಹೊರಹರಿವಿನಿಂದ ಷೇರು ಸೂಚ್ಯಂಕಗಳು ಸೋಮವಾರದ ವಹಿವಾಟಿನಲ್ಲಿ ಕುಸಿದಿವೆ. 

ಷೇರು ಸೂಚ್ಯಂಕಗಳ ಇಳಿಕೆಯಿಂದ ಹೂಡಿಕೆದಾರರ ಸಂಪತ್ತು ಒಂದೇ ದಿನ ₹6 ಲಕ್ಷ ಕೋಟಿಯಷ್ಟು ಕರಗಿದೆ. ಬಿಎಸ್‌ಇ ಕಂಪನಿಗಳ ಒಟ್ಟು ಮೌಲ್ಯ ₹442 ಲಕ್ಷ ಕೋಟಿಗೆ ಇಳಿದಿದೆ.

ಮುಂಬೈ ಷೇರುಪೇಟೆ ಸೂಚ್ಯಂಕ (ಬಿಎಸ್‌ಇ) ಸೆನ್ಸೆಕ್ಸ್ 941 ಅಂಶ (ಶೇ 1.18) ಇಳಿಕೆಯಾಗಿ, 78,782ಕ್ಕೆ ಅಂತ್ಯಗೊಂಡಿದೆ. ಇದು ಮೂರು ತಿಂಗಳ ಕನಿಷ್ಠ ಮಟ್ಟವಾಗಿದೆ. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 309 ಅಂಶ (ಶೇ 1.27) ಕಡಿಮೆಯಾಗಿ, 23,995ಕ್ಕೆ ಕೊನೆಗೊಂಡಿತು. 

ADVERTISEMENT

ಅದಾನಿ ಪೋರ್ಟ್ಸ್‌, ರಿಲಯನ್ಸ್‌ ಇಂಡಸ್ಟ್ರೀಸ್‌, ಸನ್‌ ಫಾರ್ಮಾ, ಬಜಾಜ್‌ ಫಿನ್‌ಸರ್ವ್‌, ಎನ್‌ಟಿಪಿಸಿ, ಟಾಟಾ ಮೋಟರ್ಸ್‌, ಎಕ್ಸಿಸ್‌ ಬ್ಯಾಂಕ್‌ ಮತ್ತು ಟೈಟನ್‌ ಷೇರಿನ ಮೌಲ್ಯದಲ್ಲಿ ಇಳಿಕೆಯಾಗಿದೆ. 

ಮಹೀಂದ್ರ ಆ್ಯಂಡ್‌ ಮಹೀಂದ್ರ, ಟೆಕ್‌ ಮಹೀಂದ್ರ, ಎಸ್‌ಬಿಐ, ಎಚ್‌ಸಿಎಲ್‌ ಟೆಕ್ನಾಲಜೀಸ್‌, ಇನ್ಫೊಸಿಸ್‌ ಮತ್ತು ಇಂಡಸ್‌ಇಂಡ್‌ ಬ್ಯಾಂಕ್‌ನ ಷೇರಿನ ಮೌಲ್ಯದಲ್ಲಿ ಏರಿಕೆಯಾಗಿದೆ. 

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್‌ ಕಚ್ಚಾ ತೈಲದ ಬೆಲೆಯು ಶೇ 2.57ರಷ್ಟು ಏರಿಕೆಯಾಗಿದೆ. ಪ್ರತಿ ಬ್ಯಾರೆಲ್‌ ದರವು 74.98 ಡಾಲರ್‌ (₹6,306) ಆಗಿದೆ.

ಅಮೆರಿಕದ ಅಧ್ಯಕ್ಷೀಯ ಚುನಾವಣೆಯು ವಿವಿಧ ಮಾರುಕಟ್ಟೆಗಳಲ್ಲಿ ಅಸ್ಥಿರತೆಗೆ ಕಾರಣವಾಗಿದೆ. ಜೊತೆಗೆ, ಮುಂದಿನ ಹಣಕಾಸು ನೀತಿಯನ್ನು ನಿರ್ಧರಿಸಲು ಇದೇ ವಾರದಲ್ಲಿ ಅಮೆರಿಕದ ಕೇಂದ್ರೀಯ ಬ್ಯಾಂಕ್‌ ಫೆಡರಲ್‌ ರಿಸರ್ವ್‌ ಸಭೆ ಸೇರಲಿದೆ. ಹೀಗಾಗಿ ಷೇರು ಹೂಡಿಕೆದಾರರು ಎಚ್ಚರಿಕೆಯ ನಡೆ ಇಟ್ಟಿದ್ದಾರೆ. ಚೀನಾ ಮಾರುಕಟ್ಟೆಯತ್ತ ವಿದೇಶಿ ಹೂಡಿಕೆದಾರರು ಆಕರ್ಷಿತರಾಗಿರುವುದರಿಂದ ದೇಶದ ಸೂಚ್ಯಂಕಗಳು ಇಳಿದಿವೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.