ADVERTISEMENT

Share Market: ಹೊಸ ಎತ್ತರಕ್ಕೆ ಜಿಗಿದ ಸೆನ್ಸೆಕ್ಸ್‌

ಪಿಟಿಐ
Published 12 ಸೆಪ್ಟೆಂಬರ್ 2024, 13:22 IST
Last Updated 12 ಸೆಪ್ಟೆಂಬರ್ 2024, 13:22 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಮುಂಬೈ: ವಿದೇಶಿ ಬಂಡವಾಳದ ಒಳಹರಿವಿನ ಏರಿಕೆಯಿಂದಾಗಿ ಗುರುವಾರ ನಡೆದ ವಹಿವಾಟಿನಲ್ಲಿ ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್‌ ಹಾಗೂ ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ ಹೊಸ ಎತ್ತರಕ್ಕೆ ಜಿಗಿದು ದಾಖಲೆ ಬರೆದಿವೆ.

ಸೆನ್ಸೆಕ್ಸ್‌ ಗುಚ್ಛದಲ್ಲಿನ ಬ್ಲೂಚಿಪ್‌ ಕಂಪನಿಗಳ ಷೇರು ಮಾರಾಟ ಹೆಚ್ಚಳ ಹಾಗೂ ಜಾಗತಿಕ ಷೇರುಪೇಟೆಗಳಲ್ಲಿ ನಡೆದ ಸಕಾರಾತ್ಮಕ ವಹಿವಾಟು ಕೂಡ ಇದಕ್ಕೆ ನೆರವಾಯಿತು.

ಸೆನ್ಸೆಕ್ಸ್‌ 1,439 ಅಂಶ ಏರಿಕೆ ಕಂಡು 82,962 ಅಂಶಗಳಲ್ಲಿ ವಹಿವಾಟನ್ನು ಮುಕ್ತಾಯಗೊಳಿಸಿತು. ಇಂಟ್ರಾಡೇ ವಹಿವಾಟಿನಲ್ಲಿ 1,593 ಅಂಶ ಏರಿಕೆಯಾಗಿ ಮೊದಲ ಬಾರಿಗೆ 83,116ಕ್ಕೆ ಮುಟ್ಟಿತ್ತು. 

ADVERTISEMENT

ನಿಫ್ಟಿ 470 ಅಂಶ ಹೆಚ್ಚಳ ಕಂಡು 25,388 ಅಂಶಗಳಲ್ಲಿ ಸ್ಥಿರಗೊಂಡಿತು. 

ಭಾರ್ತಿ ಏರ್‌ಟೆಲ್‌, ಎನ್‌ಟಿಪಿಸಿ, ಜೆಎಸ್‌ಡಬ್ಲ್ಯು ಸ್ಟೀಲ್‌, ಮಹೀಂದ್ರ ಆ್ಯಂಡ್‌ ಮಹೀಂದ್ರ, ಅದಾನಿ ಪೋರ್ಟ್ಸ್‌, ಟೆಕ್‌ ಮಹೀಂದ್ರ, ಎಲ್‌ ಆ್ಯಂಡ್ ಟಿ, ಟಾಟಾ ಸ್ಟೀಲ್‌, ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ, ಕೋಟಕ್‌ ಮಹೀಂದ್ರ ಬ್ಯಾಂಕ್‌ ಷೇರಿನ ಮೌಲ್ಯದಲ್ಲಿ ಏರಿಕೆಯಾಗಿದೆ. 

ನೆಸ್ಲೆ ಇಂಡಿಯಾ ಷೇರಿನ ಮೌಲ್ಯದಲ್ಲಿ ಇಳಿಕೆಯಾಗಿದೆ.

ಸೋಲ್‌, ಟೋಕಿಯೊ, ಹಾಂಗ್‌ಕಾಂಗ್‌ ಮಾರುಕಟ್ಟೆ ಏರಿಕೆ ದಾಖಲಿಸಿವೆ.

ಆಗಸ್ಟ್‌ನಲ್ಲಿ ಅಮೆರಿಕದ ಚಿಲ್ಲರೆ ಹಣದುಬ್ಬರವು ಇಳಿಕೆಯಾಗಿದೆ. ಇದು ದೇಶೀಯ ಷೇರು ಮಾರುಕಟ್ಟೆಯಲ್ಲಿ ಏರಿಕೆಗೆ ಕಾರಣವಾಗಿದೆ ಎಂದು ಮಾರುಕಟ್ಟೆ ತಜ್ಞರು ತಿಳಿಸಿದ್ದಾರೆ.

‘ಶೀಘ್ರವೇ ಅಮೆರಿಕದ ಕೇಂದ್ರೀಯ ಬ್ಯಾಂಕ್‌ ಆದ ಫೆಡರಲ್‌ ರಿಸರ್ವ್‌ನ ಹಣಕಾಸು ನೀತಿ ಸಮಿತಿ ಸಭೆ ನಡೆಯಲಿದೆ. ಸದ್ಯ ಹಣದುಬ್ಬರ ಇಳಿಕೆಯಾಗಿದೆ. ಹಾಗಾಗಿ, ಬಡ್ಡಿದರ ಕಡಿತಗೊಳಿಸಬಹುದೆಂಬ ನಿರೀಕ್ಷೆ ಹೆಚ್ಚಿದೆ’ ಎಂದು ಜಿಯೋಜಿತ್‌ ಫೈನಾನ್ಶಿಯಲ್‌ ಸರ್ವಿಸಸ್‌ನ ಮುಖ್ಯ ಹೂಡಿಕೆ ತಜ್ಞ ವಿ.ಕೆ. ವಿಜಯ್‌ಕುಮಾರ್‌ ಹೇಳಿದ್ದಾರೆ.

‘ಆದರೆ, ಸರಕು ಮತ್ತು ಸೇವೆಗಳ ವೆಚ್ಚದಲ್ಲಿನ ಬದಲಾವಣೆಯ ಸಂಕೇತವಾದ ಕೋರ್‌ ಹಣದುಬ್ಬರವು ಏರಿಕೆಯಾಗಿದೆ. ಹಾಗಾಗಿ, ಶೇ 0.50ರಷ್ಟು ಬಡ್ಡಿದರ ಕಡಿತಗೊಳಿಸುವ ಸಾಧ್ಯತೆ ಕಡಿಮೆ. ಅಂತಿಮವಾಗಿ ಶೇ 0.25ರಷ್ಟು ಬಡ್ಡಿದರ ಕಡಿತಕ್ಕೆ ಕ್ರಮವಹಿಸುವ ಸಾಧ್ಯತೆಯಿದೆ’ ಎಂದು ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.