ಮುಂಬೈ: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಷೇರು ಮೌಲ್ಯ ಹೆಚ್ಚಳವು ದೇಶದ ಷೇರುಪೇಟೆಗಳಲ್ಲಿ ಗುರುವಾರ ಸೂಚ್ಯಂಕ ಏರಿಕೆಗೆ ಕಾರಣವಾಯಿತು.
ದೇಶಿ ಷೇರುಪೇಟೆಗಳು ಸಕಾರಾತ್ಮಕ ಮಟ್ಟದಲ್ಲಿ ವಹಿವಾಟು ಆರಂಭಿಸಿದವು. ರಿಲಯನ್ಸ್ ಇಂಡಸ್ಟ್ರೀಸ್‌ನ ಷೇರುಗಳು ಉತ್ತಮ ಖರೀದಿ ವಹಿವಾಟಿಗೆ ಒಳಗಾಗಿದ್ದರಿಂದ ಸೂಚ್ಯಂಕದ ಏರಿಕೆಗೆ ವೇಗ ದೊರೆಯಿತು ಎಂದು ವರ್ತಕರು ಹೇಳಿದ್ದಾರೆ.
ಮುಂಬೈ ಷೇರುಪೇಟೆ (ಬಿಎಸ್‌ಇ) ಸಂವೇದಿ ಸೂಚ್ಯಂಕ ಗುರುವಾರದ ವಹಿವಾಟಿನಲ್ಲಿ 646 ಅಂಶ ಜಿಗಿತ ಕಂಡು 38,840 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 171 ಅಂಶ ಹೆಚ್ಚಾಗಿ 11,449 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.
ರಿಲಯನ್ಸ್ ಇಂಡಸ್ಟ್ರೀಸ್‌ಗೆ ಸಂಬಂಧಿಸಿದ ಎರಡು ವಿದ್ಯಮಾನಗಳು ಕಂಪನಿಯ ಷೇರು ಮೌಲ್ಯ ಹೆಚ್ಚಾಗುವಂತೆ ಮಾಡಿದವು.
ಮೊದಲನೆಯದು, ಕಂಪನಿಯು ತನ್ನ ರಿಟೇಲ್ ವಹಿವಾಟಿನ ಶೇಕಡ 40ರಷ್ಟು ಪಾಲನ್ನು ಅಮೆಜಾನ್‌ಗೆ ಮಾರಾಟ ಮಾಡಲಿದೆ ಎನ್ನುವುದಕ್ಕೆ ಸಂಬಂಧಿಸಿದ ವರದಿಗಳು. ಎರಡನೆಯದು, ಅಮೆರಿಕದ ಸಿಲ್ವರ್ ಲೇಕ್ ಪಾರ್ಟ್ನರ್ಸ್ ₹ 7,500 ಕೋಟಿ ಹೂಡಿಕೆ ಮಾಡಲಿದೆ ಎನ್ನುವ ಘೋಷಣೆ.
ಏಷ್ಯನ್ ಪೇಂಟ್ಸ್, ಆ್ಯಕ್ಸಿಸ್ ಬ್ಯಾಂಕ್, ಅಲ್ಟ್ರಾಟೆಕ್ ಸಿಮೆಂಟ್, ಇಂಡಸ್‌ಇಂಡ್ ಬ್ಯಾಂಕ್ ಮತ್ತು ಬಜಾಜ್ ಫೈನಾನ್ಸ್ ಷೇರುಗಳು ಶೇ 4.25ರವರೆಗೆ ಗಳಿಕೆ ಕಂಡಿವೆ.
ನಷ್ಟ: ಟಾಟಾ ಸ್ಟೀಲ್, ಭಾರ್ತಿ ಏರ್‌ಟೆಲ್, ಕೋಟಕ್ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಟೈಟಾನ್ ಷೇರುಗಳ ಮೌಲ್ಯ ಶೇ 2.24ರವರೆಗೆ ಇಳಿಕೆ ಆಗಿದೆ.
ಸಂಪತ್ತು ವೃದ್ಧಿ: ಷೇರುಪೇಟೆಯ ಸಕಾರಾತ್ಮಕ ವಹಿವಾಟಿನಿಂದ ಹೂಡಿಕೆದಾರರ ಸಂಪತ್ತು ₹ 2.20 ಲಕ್ಷ ಕೋಟಿಗಳಷ್ಟು ಹೆಚ್ಚಾಗಿದೆ. ಇದರಿಂದ ಷೇರುಪೇಟೆಯ ಬಂಡವಾಳ ಮೌಲ್ಯ ₹ 155.21 ಲಕ್ಷ ಕೋಟಿಗಳಿಗೆ ಏರಿಕೆಯಾಗಿದೆ.
ಅಂಕಿ–ಅಂಶ
1.27%:ಬಿಎಸ್‌ಇ ಸಣ್ಣ, ಮಧ್ಯಮ ಪ್ರಮಾಣದ ಸೂಚ್ಯಂಕಗಳ ಏರಿಕೆ
1.27%:ಬ್ರೆಂಟ್ ಕಚ್ಚಾ ತೈಲ ದರ ಇಳಿಕೆ
9 ಪೈಸೆ:ಡಾಲರ್ ಎದುರು ರೂಪಾಯಿ ಮೌಲ್ಯ ಹೆಚ್ಚಳ
ಅತ್ಯಂತ ಮೌಲ್ಯಯುತ ಕಂಪನಿ
₹ 14.67 ಲಕ್ಷ ಕೋಟಿ ಮಾರುಕಟ್ಟೆ ಮೌಲ್ಯ ಹೊಂದಿದ ದೇಶದ ಮೊದಲ ಕಂಪನಿ ಎನ್ನುವ ಹೆಗ್ಗಳಿಕೆಗೆ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಗುರುವಾರ ಪಾತ್ರವಾಯಿತು.
ದಿನದ ವಹಿವಾಟಿನಲ್ಲಿ ಕಂಪನಿಯ ಷೇರಿನ ಮೌಲ್ಯ ಶೇ 7ಕ್ಕಿಂತ ಹೆಚ್ಚಿನ ಗಳಿಕೆ ಕಂಡಿತು. ದಿನದ ವಹಿವಾಟಿನಲ್ಲಿ ಮಾರುಕಟ್ಟೆ ಮೌಲ್ಯವು ₹15.84 ಲಕ್ಷ ಕೋಟಿಗಳಿಗೆ ಏರಿಕೆಯಾಗಿತ್ತು. ನಂತರ ತುಸು ಇಳಿಕೆ ಕಂಡಿತು.
ಬಿಎಸ್‌ಇನಲ್ಲಿ ಕಂಪನಿಯ ಷೇರು ಮೌಲ್ಯ ಶೇ 7.10ರಷ್ಟು ಗಳಿಕೆಯೊಂದಿಗೆ ₹ 2,314.65ರಲ್ಲಿ ವಹಿವಾಟು ಅಂತ್ಯಗೊಳಿಸಿತು. ಒಂದು ಹಂತದಲ್ಲಿ ಶೇ 8.45ರಷ್ಟು ಹೆಚ್ಚಾಗಿ ಷೇರುಗಳ ಬೆಲೆ ದಾಖಲೆಯ ₹ 2,343.90ಕ್ಕೆ ಏರಿಕೆ ಕಂಡಿತ್ತು.
ಎನ್‌ಎಸ್‌ಇನಲ್ಲಿ ಶೇ 7.29ರಷ್ಟು ಹೆಚ್ಚಾಗಿ ₹ 2,319ಕ್ಕೆ ತಲುಪಿತು. ಒಂದು ಹಂತದಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟವಾದ ₹ 2,344.95ಕ್ಕೆ ಏರಿಕೆಯಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.