ADVERTISEMENT

ಸೂಚ್ಯಂಕ 714 ಅಂಶ ಕುಸಿತ

ಮತಗಟ್ಟೆ ಸಮೀಕ್ಷೆ ಪ್ರಭಾವ: ಷೇರುಪೇಟೆಯಲ್ಲಿ ನಕಾರಾತ್ಮಕ ವಹಿವಾಟು

ಪಿಟಿಐ
Published 10 ಡಿಸೆಂಬರ್ 2018, 20:15 IST
Last Updated 10 ಡಿಸೆಂಬರ್ 2018, 20:15 IST
ಸಾಂದರ್ಭಿಕ ಚಿತ್ರ.
ಸಾಂದರ್ಭಿಕ ಚಿತ್ರ.   

ಮುಂಬೈ: ಐದು ರಾಜ್ಯಗಳ ಮತಗಟ್ಟೆ ಸಮೀಕ್ಷೆಯ ಪ್ರಭಾವಕ್ಕೆ ಒಳಗಾಗಿ ದೇಶದ ಷೇರುಪೇಟೆಗಳಲ್ಲಿ ಸೋಮವಾರ ಮಾರಾಟದ ಅತಿಯಾದ ಒತ್ತಡ ಕಂಡುಬಂದಿತು.

ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವು ಬಿಜೆಪಿಗೆ ಪ್ರಬಲ ಪೈಪೋಟಿ ನೀಡಿದೆ ಎಂದು ಮತಗಟ್ಟೆ ಸಮೀಕ್ಷೆಗಳು ತಿಳಿಸಿವೆ. ಇದು ಪೇಟೆಯಲ್ಲಿ ನಕಾರಾತ್ಮಕ ವಹಿವಾಟಿಗೆ ಕಾರಣವಾಯಿತು.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ 35 ಸಾವಿರಕ್ಕಿಂತಲೂ ಕೆಳಗಿಳಿಯಿತು. 714 ಅಂಶಗಳ ಕುಸಿತದೊಂದಿಗೆ 34,959 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿತು.

ADVERTISEMENT

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ ಸಹ 205 ಅಂಶ ಇಳಿಕೆಯಾಗಿ 10,488 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.

ಅಕ್ಟೋಬರ್‌ 11ರ ನಂತರ ದಿನದ ವಹಿವಾಟಿನ ಅತ್ಯಂತ ಗರಿಷ್ಠ ಕುಸಿತ ಇದಾಗಿದೆ. ರಿಯಲ್‌ ಎಸ್ಟೇಟ್‌, ಬ್ಯಾಂಕಿಂಗ್, ಲೋಹ, ಔಷಧ ಮತ್ತು ಹಣಕಾಸು ಸೇವೆಗಳ ಷೇರುಗಳು ಹೆಚ್ಚು ನಷ್ಟ ಕಂಡಿವೆ.

‘ವಹಿವಾಟಿನ ಆರಂಭದಿಂದ ಅಂತ್ಯದವರೆಗೂ ಷೇರುಪೇಟೆಯ ಮೇಲೆ ಗೂಳಿ ನಿಯಂತ್ರಣ ಸಾಧಿಸಿತ್ತು’ ಎಂದು ಎಂಕೇ ವೆಲ್ತ್‌ ಮ್ಯಾನೇಜ್‌ಮೆಂಟ್‌ನ ಸಂಶೋಧನಾ ಮುಖ್ಯಸ್ಥ ಜೋಸೆಫ್‌ ಥಾಮಸ್‌ ತಿಳಿಸಿದ್ದಾರೆ.

ಇಂದು ಇನ್ನಷ್ಟು ಇಳಿಕೆ ಸಂಭವ
ಸೋಮವಾರದ ಸೂಚ್ಯಂಕದ ಇಳಿಕೆಯ ಬಗ್ಗೆ ಹೆಚ್ಚು ಚಿಂತನೆ ಬೇಡ.ಆರ್‌ಬಿಐ ಗವರ್ನರ್ ಉರ್ಜಿತ್ ಪಟೇಲ್‌ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರುವುದರಿಂದ ಮಂಗಳವಾರ ಷೇರುಪೇಟೆ ಇನ್ನೂ ಹೆಚ್ಚಿನ ಕುಸಿತ ಕಾಣಲಿದೆ ಎಂದು ಕೆಲವು ತಜ್ಞರು ವಿಶ್ಲೇಷಣೆ ಮಾಡಿದ್ದಾರೆ.

ರೂಪಾಯಿ ಮೌಲ್ಯ 50 ಪೈಸೆ ಇಳಿಕೆ
ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್‌ ಎದುರು ರೂಪಾಯಿ ಮೌಲ್ಯ 50 ಪೈಸೆ ಇಳಿಕೆ ಕಂಡಿದೆ. ಇದರಿಂದ ಒಂಡು ಡಾಲರ್‌ಗೆ ₹ 71.32ರಂತೆ ವಿನಿಮಯಗೊಂಡಿದೆ.

ಐದು ರಾಜ್ಯಗಳ ಚುನಾವಣೆಯ ಫಲಿತಾಂಶ ಮಂಗಳವಾರ ಹೊರಬೀಳಲಿದೆ. ಹೀಗಾಗಿ ರೂಪಾಯಿ ಹೆಚ್ಚಿನ ಏರಿಳಿತ ಕಾಣುವ ಸಾಧ್ಯತೆ ಇದೆ ಎಂದು ವಿಶ್ಲೇಷಕರು ಹೇಳಿದ್ದಾರೆ. ಬ್ರೆಂಟ್ ಕಚ್ಚಾ ತೈಲ ದರ ಶೇ 0.31ರಷ್ಟು ಇಳಿಕೆಯಾಗಿ ಒಂದು ಬ್ಯಾರೆಲ್‌ಗೆ 61.48 ಡಾಲರ್‌ಗಳಿಗೆ ತಲುಪಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.