ADVERTISEMENT

ಸೇವಾ ಚಟುವಟಿಕೆ: 11 ವರ್ಷಗಳಲ್ಲೇ ವೇಗದ ಬೆಳವಣಿಗೆ

ಪಿಟಿಐ
Published 3 ಜೂನ್ 2022, 11:19 IST
Last Updated 3 ಜೂನ್ 2022, 11:19 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ದೇಶದ ಸೇವಾ ವಲಯ ಚಟುವಟಿಕೆಗಳು ಮೇ ತಿಂಗಳಿನಲ್ಲಿ ಕಳೆದ 11 ವರ್ಷಗಳಲ್ಲಿಯೇ ಅತ್ಯಂತ ವೇಗದ ಬೆಳವಣಿಗೆ ಕಂಡಿವೆ ಎಂದು ಎಸ್‌ಆ್ಯಂಡ್‌ಪಿ ಗ್ಲೋಬಲ್‌ ಸಂಸ್ಥೆ ಹೇಳಿದೆ.

ತಯಾರಿಕಾ ವೆಚ್ಚ ಗರಿಷ್ಠ ಮಟ್ಟಕ್ಕೆ ಏರಿಕೆ ಆಗಿದ್ದರು ಸಹ ಹೊಸ ಯೋಜನೆಗಳಿಗೆ ಬೇಡಿಕೆ ಹೆಚ್ಚಾಗಿರುವುದರಿಂದ ವಲಯವು ಉತ್ತಮ ಬೆಳವಣಿಗೆ ಕಂಡಿತು ಎಂದು ಸಮೀಕ್ಷೆಯಲ್ಲಿ ತಿಳಿಸಿದೆ.

ಎಸ್‌ಆ್ಯಂಡ್‌ಪಿ ಗ್ಲೋಬಲ್‌ ಇಂಡಿಯಾ ಸರ್ವೀಸಸ್‌ ಪಿಎಂಐ ಬಿಸಿನೆಸ್‌ ಆ್ಯಕ್ಟಿವಿಟಿ ಇಂಡೆಕ್ಸ್‌ ಏಪ್ರಿಲ್‌ನಲ್ಲಿ 57.9 ಇತ್ತು. ಇದು ಮೇ ತಿಂಗಳಿನಲ್ಲಿ 58.9ಕ್ಕೆ ಏರಿಕೆ ಆಗಿದೆ. ಸತತ ಹತ್ತನೆ ತಿಂಗಳಿನಲ್ಲಿಯೂ ಸೇವಾ ವಲಯದ ಚಟುವಟಿಕೆ ಹೆಚ್ಚಾಗಿದೆ.

ADVERTISEMENT

‘ಕೋವಿಡ್‌ ಸಾಂಕ್ರಾಮಿಕದ ಬಳಿಕ ಆರ್ಥಿಕ ಚಟುವಟಿಕೆಗಳು ಮತ್ತೆ ಆರಂಭ ಆಗಿರುವುದು ಸೇವಾ ವಲಯದ ಬೆಳವಣಿಗೆಯನ್ನು ಹೆಚ್ಚಾಗುವಂತೆ ಮಾಡಿವೆ. ಹೊಸ ಯೋಜನೆಗಳ ಬೇಡಿಕೆಯು 2011ರ ಜುಲೈ ಬಳಿಕ ವೇಗವಾಗಿ ಹೆಚ್ಚಾಗಿದೆ. ಇದರಿಂದಾಗಿ ವಲಯವು 11 ವರ್ಷಗಳಲ್ಲಿಯೇ ಅತ್ಯಂತ ವೇಗದ ಬೆಳವಣಿಗೆ ಕಾಣುವಂತಾಗಿದೆ’ ಎಂದು ಎಸ್‌ಆ್ಯಂಡ್‌ಪಿ ಗ್ಲೋಬಲ್‌ನ ಅರ್ಥಶಾಸ್ತ್ರದ ಸಹಾಯಕ ನಿರ್ದೇಶಕಿ ಪಾಲಿಯಾನಾ ಡಿ. ಲಿಮಾ ಹೇಳಿದ್ದಾರೆ.

ಭಾರತದ ಸೇವೆಗಳಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆಯು ದುರ್ಬಲವಾಗಿದೆ ಎನ್ನುವುದನ್ನು ಈಚಿನ ಅಂಕಿ–ಅಂಶಗಳು ಸೂಚಿಸುತ್ತಿವೆ. ಕೋವಿಡ್‌ ಸಾಂಕ್ರಾಮಿಕವು ಆರಂಭ ಆದಾಗಿನಿಂದ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೊಸ ಯೋಜನೆಗಳಿಗೆ ಬೇಡಿಕೆಯುಪ್ರತಿ ತಿಂಗಳಿನಲ್ಲಿಯೂ ಇಳಿಮುಖವಾಗಿಯೇ ಇದೆ ಎಂದು ಸಮೀಕ್ಷೆಯಲ್ಲಿ ತಿಳಿಸಲಾಗಿದೆ. ಹಣದುಬ್ಬರ ದರವು ಹೆಚ್ಚಾಗುತ್ತಲೇ ಇದೆ. ಆಹಾರ, ಇಂಧನ, ರಿಟೇಲ್‌ ಮತ್ತು ಸಾರಿಗೆ ವೆಚ್ಚ ಸೇರಿದಂತೆ ಎಲ್ಲಾ ವಸ್ತುಗಳ ದರವೂ ಹೆಚ್ಚಾಗುತ್ತಲೇ ಇದೆ.

ಬೆಲೆ ಏರಿಕೆ ಆಗುತ್ತಿರುವುದರಿಂದ ವ್ಯಾಪಾರ ನಡೆಸುವ ಆಶಾವಾದವನ್ನು ಕುಗ್ಗಿಸುತ್ತಿದೆ. ಹಣದುಬ್ಬರದ ಒತ್ತಡವು ಆರ್ಥಿಕ ಚೇತರಿಕೆಗೆ ಅಡ್ಡಿಪಡಿಸಬಹುದು ಎನ್ನುವ ಆತಂಕ ಎದುರಾಗಿದೆ ಎಂದು ಲಿಮಾ ತಿಳಿಸಿದ್ದಾರೆ.

ಸೇವಾ ಕಂಪನಿಗಳು ಮೇ ತಿಂಗಳಿನಲ್ಲಿ ಹೆಚ್ಚುವರಿ ಕೆಲಸಗಾರರನ್ನು ನೇಮಿಸಿಕೊಳ್ಳುವುದನ್ನು ತಡೆಹಿಡಿದಿದ್ದಾರೆ ಎಂದು ಅವರು ಹೇಳಿದ್ದಾರೆ.

ತಯಾರಿಕೆ ಮತ್ತು ಸೇವಾ ವಲಯದ ಒಟ್ಟಾರೆ ಬೆಳವಣಿಗೆಯನ್ನು ಸೂಚಿಸುವ ಕಂಪೋಸಿಟ್‌ ಪಿಎಂಐ ಔಟ್‌ಪುಟ್‌ ಇಂಡೆಕ್ಸ್‌ ಏಪ್ರಿಲ್‌ನಲ್ಲಿ 57.6 ಇತ್ತು. ಮೇ ತಿಂಗಳಿನಲ್ಲಿ 58.3ಕ್ಕೆ ಏರಿಕೆ ಆಗಿದೆ. ಕಳೆದ ನವೆಂಬರ್‌ಗೆ ಹೋಲಿಸಿದರೆ ಅತ್ಯಂತ ವೇಗದ ಬೆಳವಣಿಗೆ ದರ ಇದಾಗಿದೆ.

ಮುಖ್ಯಾಂಶಗಳು

ಸತತ 10ನೇ ತಿಂಗಳಿನಲ್ಲಿಯೂ ಸಕಾರಾತ್ಮಕ ಬೆಳವಣಿಗೆ

ಆರ್ಥಿಕ ಚೇತರಿಕೆಗೆ ಹಣದುಬ್ಬರ ಅಡ್ಡಿಪಡಿಸುವ ಆತಂಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.