ADVERTISEMENT

ಟಾಪ್ ಸಾಧಕರ ಪಟ್ಟಿಯಲ್ಲಿ ಕರ್ನಾಟಕ ಸೇರಿದಂತೆ 7 ರಾಜ್ಯಗಳು

ಪಿಟಿಐ
Published 2 ಜುಲೈ 2022, 8:56 IST
Last Updated 2 ಜುಲೈ 2022, 8:56 IST
   

ನವದೆಹಲಿ: 2020ರ ವಾಣಿಜ್ಯ ವಹಿವಾಟು ಸುಧಾರಣೆ ಕ್ರಿಯಾ ಯೋಜನೆಯ ಅನುಷ್ಠಾನದ ಆಧಾರದಲ್ಲಿ ಸಿದ್ಧಪಡಿಸಿರುವ, ‘ಟಾಪ್ ಸಾಧಕ’ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಪಟ್ಟಿಯಲ್ಲಿ ಕರ್ನಾಟಕ ಸ್ಥಾನ ಪಡೆದಿದೆ.

ಆಂಧ್ರಪ್ರದೇಶ, ಗುಜರಾತ್, ತೆಲಂಗಾಣ, ಹರಿಯಾಣ, ಪಂಜಾಬ್, ತಮಿಳುನಾಡು ಕೂಡ ‘ಟಾಪ್ ಸಾಧಕ’ ರಾಜ್ಯಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿವೆ.

ಹಿಮಾಚಲ ಪ್ರದೇಶ, ಮಧ್ಯ ಪ್ರದೇಶ, ಮಹಾರಾಷ್ಟ್ರ, ಒಡಿಶಾ, ಉತ್ತರಾಖಂಡ ಮತ್ತು ಉತ್ತರ ಪ್ರದೇಶ ರಾಜ್ಯಗಳು ‘ಸಾಧಕ’ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿವೆ.

ADVERTISEMENT

ಹೂಡಿಕೆದಾರರ ವಿಶ್ವಾಸ ಹೆಚ್ಚಿಸುವುದು, ರಾಜ್ಯಗಳಲ್ಲಿ ಉದ್ಯಮ ಸ್ನೇಹಿ ವಾತಾವರಣ ನಿರ್ಮಾಣ ಮಾಡುವುದು ಈ ಪಟ್ಟಿ ಸಿದ್ಧಪಡಿಸುವುದರ ಉದ್ದೇಶ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ಪಟ್ಟಿಯನ್ನು ಗುರುವಾರ ಬಿಡುಗಡೆ ಮಾಡಿದರು.

ಕೇಂದ್ರ ವಾಣಿಜ್ಯ ಸಚಿವಾಲಯವು ಈ ವರ್ಷ ರಾಜ್ಯಗಳಿಗೆ ರ್‍ಯಾಂಕ್ ಘೋಷಿಸಿಲ್ಲ. ಬದಲಿಗೆ, ರಾಜ್ಯಗಳನ್ನು ವಿವಿಧ ಹೆಸರುಗಳ ಅಡಿಯಲ್ಲಿ ವರ್ಗೀಕರಿಸಿದೆ.

ಬೇರೆ ಬೇರೆ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ನಡುವಿನ ವ್ಯತ್ಯಾಸವು ತೀರಾ ಕಡಿಮೆ ಇದ್ದ ಕಾರಣದಿಂದಾಗಿ, ಅವುಗಳಿಗೆ ರ್‍ಯಾಂಕ್ ನೀಡುವ ಬದಲು, ಅವುಗಳನ್ನು ಬೇರೆ ಬೇರೆ ವರ್ಗಗಳ ಅಡಿ ತರಲಾಗಿದೆ ಎಂದು ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆಯ ಕಾರ್ಯದರ್ಶಿ ಅನುರಾಗ್ ಜೈನ್ ಹೇಳಿದ್ದಾರೆ.

‘ಕಾನೂನಿಗೆ ತಿದ್ದುಪಡಿ ತರುವ ಮೂಲಕ, ಕೈಗಾರಿಕೆಗಳ ಸ್ಥಾಪನೆಗೆ ಇದ್ದ ತೊಡಕುಗಳನ್ನು ನಿವಾರಿಸಲಾಗಿದೆ. ನಮ್ಮ ಸರ್ಕಾರವು ಸುಲಲಿತ ವ್ಯವಹಾರಕ್ಕೆ ಹೆಚ್ಚು ಒತ್ತು ನೀಡಿರುವ ಕಾರಣದಿಂದಾಗಿ ಹೂಡಿಕೆದಾರರು ರಾಜ್ಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಂಡವಾಳ ತೊಡಗಿಸುತ್ತಿದ್ದಾರೆ’ ಎಂದು ರಾಜ್ಯದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ ಆರ್. ನಿರಾಣಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.