ADVERTISEMENT

73 ಲಕ್ಷ ಕನ್ನಡಿಗರು ಬಡತನ ಮುಕ್ತ: ಎಂಪಿಐ ವರದಿ

ಬಹು ಆಯಾಮಗಳ ಬಡತನ ಸೂಚ್ಯಂಕ ವರದಿ ಪ್ರಕಟ

​ಪ್ರಜಾವಾಣಿ ವಾರ್ತೆ
Published 20 ಜನವರಿ 2024, 21:03 IST
Last Updated 20 ಜನವರಿ 2024, 21:03 IST
   

ಬೆಂಗಳೂರು: ಕರ್ನಾಟಕದಲ್ಲಿ 2013–14ರಿಂದ 2022–23‌ರ ನಡುವಿನ ಅವಧಿಯಲ್ಲಿ ಒಟ್ಟು 73.64 ಲಕ್ಷ ಜನರು ಬಹು ಆಯಾಮಗಳ ಬಡತನದಿಂದ ಹೊರಬಂದಿದ್ದಾರೆ ಎಂದು ನೀತಿ ಆಯೋಗದ ರಾಷ್ಟ್ರೀಯ ಬಹು ಆಯಾಮಗಳ ಬಡತನ ಸೂಚ್ಯಂಕ (ಎಂಪಿಐ) ವರದಿಯು ಹೇಳಿದೆ.

ಪೋಷಕಾಂಶ, ಶಿಶು ಮತ್ತು ಮಕ್ಕಳ ಮರಣ ಪ್ರಮಾಣ, ಗರ್ಭಿಣಿಯರು ಮತ್ತು ತಾಯಂದಿರ ಆರೋಗ್ಯ, ಶಾಲಾ ಶಿಕ್ಷಣ, ಮಕ್ಕಳ ಹಾಜರಾತಿ, ಅಡುಗೆ ಅನಿಲ ಸಂಪರ್ಕ, ನೈರ್ಮಲ್ಯ, ಕುಡಿಯುವ ನೀರು, ವಸತಿ, ವಿದ್ಯುತ್‌, ಆಸ್ತಿ ಹಾಗೂ ಬ್ಯಾಂಕ್‌ ಖಾತೆಯನ್ನು ಸೂಚಕಗಳಾಗಿ ಪರಿಗಣಿಸಿ ಈ ವರದಿ ಸಿದ್ಧಪಡಿಸಲಾಗಿದೆ.

ದೇಶದಲ್ಲಿ ವರದಿ ಅನ್ವಯ 2013–14ರಿಂದ 2022–23‌ರ ಅವಧಿಯಲ್ಲಿ ಒಟ್ಟು 24.82 ಕೋಟಿ ಜನರು ಬಡತನದಿಂದ ಹೊರಕ್ಕೆ ಬಂದಿದ್ದಾರೆ. 

ADVERTISEMENT

ಕರ್ನಾಟಕದಲ್ಲಿ 2013-14ರಲ್ಲಿ ಶೇ 16.55ರಷ್ಟಿದ್ದ ಬಡತನ ಪ್ರಮಾಣವು 2022–23ರಲ್ಲಿ ಶೇ 5.67ಕ್ಕೆ ಇಳಿಕೆ ಆಗಿದೆ. ಕಳೆದ ಎರಡು ದಶಕಗಳಲ್ಲಿ ರಾಜ್ಯದಲ್ಲಿ ಗಣನೀಯ ಪ್ರಗತಿ ಸಾಧಿಸಲಾಗಿದೆ ಎಂದು ವರದಿ ಹೇಳಿದೆ.

2005-06ರಲ್ಲಿ ಕರ್ನಾಟಕದ ಒಟ್ಟು ಜನಸಂಖ್ಯೆಯ ಶೇ 46.71ರಷ್ಟು ಬಡವರಿದ್ದರು. ಬಡತನದ ಪ್ರಮಾಣವು 2015–16ರಲ್ಲಿ ಶೇ 12.77 ಹಾಗೂ 2019–21ರಲ್ಲಿ ಶೇ 7.58ರಷ್ಟು ಇಳಿಕೆಯಾಗಿದೆ ಎಂದು ವಿವರಿಸಿದೆ.

ಇಳಿಕೆಗೆ ಕಾರಣ ಏನು?:

ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಲಕ್ಷಾಂತರ ಜನರ ಜೀವನಮಟ್ಟ ಸುಧಾರಣೆಯಾಗಿರುವುದೇ ದೇಶದಲ್ಲಿ ಒಂಬತ್ತು ವರ್ಷಗಳ ಅವಧಿಯಲ್ಲಿ 24.82 ಕೋಟಿ ಜನರು ಬಡತನದಿಂದ ಹೊರಬರಲು ಸಾಧ್ಯವಾಗಿದೆ ಎಂದು ವರದಿ ಹೇಳಿದೆ.

ಪೋಷಣ್‌ ಅಭಿಯಾನ, ರಕ್ತಹೀನತೆ ಮುಕ್ತ ಭಾರತ, ಆಹಾರದ ಭದ್ರತೆ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕೈಗೊಂಡಿರುವ ಹಲವು ಅಭಿವೃದ್ಧಿ ಕಾರ್ಯಗಳು ಬಡತನದ ನಿರ್ಮೂಲನೆಗೆ ಸಹಕಾರಿಯಾಗಿವೆ ಎಂದು ವಿಶ್ಲೇಷಿಸಿದೆ.

ದೇಶದ 14 ಲಕ್ಷ ಅಂಗನವಾಡಿ ಕೇಂದ್ರಗಳ ಮೂಲಕ ಸಮರ್ಪಕವಾಗಿ ಆರೋಗ್ಯ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗಿದೆ. 6 ವರ್ಷದೊಳಗಿನ 8.87 ಕೋಟಿ ಮಕ್ಕಳು, 1.1 ಕೋಟಿ ಗರ್ಭಿಣಿಯರು ಮತ್ತು ತಾಯಂದಿರು ಸರ್ಕಾರದ ಆರೋಗ್ಯ ಯೋಜನೆಗಳ ಪ್ರಯೋಜನ ಪಡೆದಿದ್ದಾರೆ ಎಂದು ವಿವರಿಸಿದೆ.

ಉಜ್ವಲ ಯೋಜನೆಯಡಿ ದೇಶದಲ್ಲಿ 10 ಕೋಟಿ ಅಡುಗೆ ಅನಿಲ ಸಿಲಿಂಡರ್‌ ಸಂಪರ್ಕ ಕಲ್ಪಿಸಲಾಗಿದೆ. ಹೊಗೆ ಮುಕ್ತ ಅಡುಗೆ ಮನೆ ಆಶಯ ಸಾಕಾರಗೊಂಡಿದೆ. ಮಹಿಳೆಯರ ಆರೋಗ್ಯದ ಸುಧಾರಣೆಗೆ ಒತ್ತು ನೀಡಲಾಗಿದೆ ಎಂದು ತಿಳಿಸಿದೆ.

ಸ್ವಚ್ಛ ಭಾರತ್‌ ಮಿಷನ್‌, ಜಲಜೀವನ್‌ ಮಿಷನ್‌ನಡಿ ನೈರ್ಮಲ್ಯಕ್ಕೆ ಒತ್ತು ನೀಡಲಾಗಿದೆ. ದೇಶದಲ್ಲಿ 14 ಕೋಟಿ ನಲ್ಲಿ ಸಂಪರ್ಕ ಕಲ್ಪಿಸಲಾಗಿದೆ. 11.33 ಕೋಟಿ ವೈಯಕ್ತಿಕ ಶೌಚಾಲಯಗಳನ್ನು ನಿರ್ಮಿಸಲಾಗಿದೆ ಎಂದು ಹೇಳಿದೆ. 

ಪ್ರಧಾನ ಮಂತ್ರಿ ಜನಧನ ಯೋಜನೆಯಡಿ 50 ಕೋಟಿಗೂ ಹೆಚ್ಚು ಬ್ಯಾಂಕ್‌ ಖಾತೆಗಳನ್ನು ತೆರೆಯಲಾಗಿದೆ. ಆ ಮೂಲಕ ಸರ್ಕಾರದ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಲು ಸಹಕಾರಿಯಾಗಿದೆ. ಪ್ರಧಾನ ಮಂತ್ರಿ ಆವಾಸ್‌ ಯೋಜನೆಯಡಿ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ 4 ಕೋಟಿ ಮನೆಗಳನ್ನು ನಿರ್ಮಿಸಲಾಗಿದೆ ಎಂದು ವಿವರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.