ನವದೆಹಲಿ: ಚಿನ್ನದ ಬಾಂಡ್ ಯೋಜನೆಯ ಪ್ರಸಕ್ತ ಹಣಕಾಸು ವರ್ಷದ ಮೊದಲ ಕಂತು ಸೋಮವಾರ ಆರಂಭ ಆಗಲಿದೆ. ಪ್ರತಿ ಗ್ರಾಂಗೆ ನೀಡಿಕೆ ಬೆಲೆ ₹ 5,091 ನಿಗದಿ ಮಾಡಲಾಗಿದೆ.
ಬಾಂಡ್ ಖರೀದಿಸಲು ಶುಕ್ರವಾರ ಕೊನೆಯ ದಿನವಾಗಿದೆ. ಬಾಂಡ್ ಖರೀದಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ, ಪಾವತಿ ಮಾಡುವವರಿಗೆ ಪ್ರತಿ ಗ್ರಾಂಗೆ ₹ 50 ರಿಯಾಯಿತಿ ನೀಡಲಾಗುತ್ತದೆ. ಹೀಗಾಗಿ ಇಂತಹ ಹೂಡಿಕೆದಾರರಿಗೆ ಪ್ರತಿ ಗ್ರಾಂ ನೀಡಿಕೆ ಬೆಲೆ ₹ 5,041 ಆಗಲಿದೆ ಎಂದು ಆರ್‌ಬಿಐ ಪ್ರಕಟಣೆಯಲ್ಲಿ ತಿಳಿಸಿದೆ.
ಸ್ಟಾಕ್ ಹೋಲ್ಡಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ, ಅಂಚೆ ಕಚೇರಿ, ಬಿಎಸ್‌ಇ ಮತ್ತು ಎನ್‌ಎಸ್ಇ ಮೂಲಕ ಚಿನ್ನದ ಬಾಂಡ್ ಮಾರಾಟ ನಡೆಯಲಿದೆ. ಕೇಂದ್ರ ಸರ್ಕಾರದ ಸಮ್ಮುಖದಲ್ಲಿ ಆರ್‌ಬಿಐ ಈ ಬಾಂಡ್‌ಗಳನ್ನು ವಿತರಣೆ ಮಾಡುತ್ತದೆ.
ಕನಿಷ್ಠ ಹೂಡಿಕೆ 1 ಗ್ರಾಂ ಇರಲಿದೆ. ವೈಯಕ್ತಿಕ ಖರೀದಿದಾರರಿಗೆ ಮತ್ತು ಹಿಂದೂ ಅವಿಭಕ್ತ ಕುಟುಂಬಕ್ಕೆ 4 ಕೆ.ಜಿ ಹಾಗೂ ಟ್ರಸ್ಟ್‌ಗಳಿಗೆ 20 ಕೆ.ಜಿಯ ಗರಿಷ್ಠ ಮಿತಿ ನೀಡಲಾಗಿದೆ.
ಕೋವಿಡ್ ಅವಧಿಯಲ್ಲಿ ಹೆಚ್ಚಿದ ಬೇಡಿಕೆ: ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ಷೇರುಪೇಟೆಯಲ್ಲಿ ಅಸ್ಥಿರತೆ ಮೂಡಿದ್ದರಿಂದ ಹೂಡಿಕೆದಾರರು ಚಿನ್ನದ ಬಾಂಡ್ ಅನ್ನು ಸುರಕ್ಷಿತ ಹೂಡಿಕೆಯ ಆಯ್ಕೆಯಾಗಿ ಪರಿಗಣಿಸಿದ್ದಾರೆ. ಇದರಿಂದಾಗಿ ಚಿನ್ನದ ಬಾಂಡ್‌ಗೆ ಬೇಡಿಕೆ ಹೆಚ್ಚಾಗಿದೆ.
2020–21 ಮತ್ತು 2021–22ರ ಅವಧಿಯಲ್ಲಿ ಹೂಡಿಕೆದಾರರು ₹ 29,040 ಕೋಟಿ ಮೌಲ್ಯದ ಬಾಂಡ್ ಖರೀದಿಸಿದ್ದು, ಇದು ಯೋಜನೆಯು ಜಾರಿಗೆ ಬಂದಾಗಿನಿಂದ ಮಾರಾಟ ಆಗಿರುವ ಬಾಂಡ್‌ಗಳ ಒಟ್ಟಾರೆ ಮೌಲ್ಯದ ಶೇ 75ರಷ್ಟಾಗಿದೆ. ಯೋಜನೆಯಡಿ ಈವರೆಗೆ ಒಟ್ಟಾರೆ ₹ 38,693 ಕೋಟಿ ಮೌಲ್ಯದ ಬಾಂಡ್ ಮಾರಾಟ ಆಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.