ADVERTISEMENT

10 ಸಾವಿರಕ್ಕೂ ಹೆಚ್ಚು ಚಾರ್ಜಿಂಗ್ ಕೇಂದ್ರ ಸ್ಥಾಪಿಸಲಿರುವ ಶೆಲ್

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2022, 15:36 IST
Last Updated 16 ಸೆಪ್ಟೆಂಬರ್ 2022, 15:36 IST
   

ಬೆಂಗಳೂರು: ಶೆಲ್‌ ಎನರ್ಜಿ ಇಂಡಿಯಾ ಕಂಪನಿಯು ಬೆಂಗಳೂರಿನಲ್ಲಿ ಚಾರ್ಜಿಂಗ್ ಕೇಂದ್ರಗಳನ್ನು ಗುರುವಾರ ಆರಂಭಿಸಿದ್ದು ಈ ಮೂಲಕ ಭಾರತದ ವಿದ್ಯುತ್ ಚಾಲಿತ ವಾಹನ (ಇ.ವಿ.) ಚಾರ್ಜಿಂಗ್ ಮಾರುಕಟ್ಟೆ ಪ್ರವೇಶಿಸಿದೆ. 2030ರೊಳಗೆ ದೇಶದಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಚಾರ್ಜಿಂಗ್ ಕೇಂದ್ರಗಳನ್ನು ಆರಂಭಿಸುವ ಗುರಿಯನ್ನು ಕಂಪನಿಯು ಹೊಂದಿದೆ.

‘ಇಂಗಾಲದ ಹೊರಸೂಸುವಿಕೆಯನ್ನು ನಿವ್ವಳ–ಶೂನ್ಯಕ್ಕೆ ತಗ್ಗಿಸುವ ನಮ್ಮ ಉದ್ದೇಶದ ಭಾಗವಾಗಿ ಈ ಕೇಂದ್ರಗಳನ್ನು ಆರಂಭಿಸುತ್ತಿದ್ದೇವೆ. ಅದರಲ್ಲೂ, ದ್ವಿಚಕ್ರ ವಾಹನಗಳಿಗೆ ನಾವು ಚಾರ್ಜಿಂಗ್‌ ಸೌಲಭ್ಯವನ್ನು ಮೊದಲಿಗೆ ಒದಗಿಸುತ್ತಿರುವುದು ಭಾರತದಲ್ಲಿ’ ಎಂದು ಕಂಪನಿಯ ಏಷ್ಯಾ ವಿಭಾಗದ ಹಿರಿಯ ಉಪಾಧ್ಯಕ್ಷ ಆಮ್ರ್‌ ಆದೆಲ್ ‘ಪ್ರಜಾವಾಣಿ’ಗೆ ತಿಳಿಸಿದರು.

ಕಂಪನಿಯು ಎಂಟು ರಾಜ್ಯಗಳಲ್ಲಿ ಈಗ ಒಟ್ಟು 300ಕ್ಕೂ ಹೆಚ್ಚು ಪೆಟ್ರೋಲ್ ಬಂಕ್‌ಗಳನ್ನು ಹೊಂದಿದೆ. ‘ಈ ರಾಜ್ಯಗಳ ಮಾರುಕಟ್ಟೆಗಳು ಮಾತ್ರವೇ ಅಲ್ಲದೆ ನಾವು ಇ.ವಿ. ಚಾರ್ಜಿಂಗ್ ಕೇಂದ್ರಗಳ ಮೂಲಕ ಇತರ ರಾಜ್ಯಗಳ ಮಾರುಕಟ್ಟೆಗಳನ್ನೂ ಪ್ರವೇಶಿಸುವ ಉದ್ದೇಶ ಹೊಂದಿದ್ದೇವೆ. ನಮ್ಮ ಚಾರ್ಜಿಂಗ್ ಕೇಂದ್ರಗಳಲ್ಲಿ ಲಭ್ಯವಾಗುವ ವಿದ್ಯುತ್‌ ಸಂಪೂರ್ಣವಾಗಿ ನವೀಕರಿಸಬಹುದಾದ ಇಂಧನ ಮೂಲಗಳಿಂದಲೇ ಪಡೆದಿದ್ದಾಗಿರುತ್ತದೆ’ ಎಂದು ಕಂಪನಿಯ ಭಾರತದ ನಿರ್ದೇಶಕ ಸಂಜಯ್ ವರ್ಕೆ ಹೇಳಿದರು.

ADVERTISEMENT

ಶೆಲ್‌ ಪೆಟ್ರೋಲ್‌ ಬಂಕ್, ಜನರು ಹೆಚ್ಚಾಗಿ ಭೇಟಿ ನೀಡುವ ಸ್ಥಳಗಳು, ವಿದ್ಯುತ್ ಚಾಲಿತ ವಾಹನಗಳ ಚಾರ್ಜಿಂಗ್‌ಗಾಗಿಯೇ ಸ್ಥಾಪಿಸಲಾಗಿರುವ ಹಬ್‌ಗಳು, ಮನೆಗಳು, ಹೋಟೆಲ್‌ ಅಥವಾ ರೆಸ್ಟಾರೆಂಟ್‌ನಂತಹ ಸ್ಥಳಗಳಲ್ಲಿ ಗ್ರಾಹಕರ ಅಗತ್ಯಕ್ಕೆ ತಕ್ಕಂತೆ ಬದಲಾವಣೆ ಮಾಡಲಾಗಿರುವ ಚಾರ್ಜಿಂಗ್ ಸೌಲಭ್ಯವನ್ನು ಕಂಪನಿಯು ಒದಗಿಸಲಿದೆ ಎಂದು ಪ್ರಕಟಣೆ ತಿಳಿಸಿದೆ.

ಸರ್ಕಾರಿ ಸ್ವಾಮ್ಯದ ಕಂಪನಿಗಳಿಂದಲೂ ಚಾರ್ಜಿಂಗ್‌ ಕೇಂದ್ರ:

ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್) ಕಂಪನಿಯು ವಿದ್ಯುತ್ ಚಾಲಿತ ವಾಹನಗಳ ಚಾರ್ಜಿಂಗ್‌ಗೆ ಐದು ವರ್ಷಗಳಲ್ಲಿ ಒಟ್ಟು ಏಳು ಸಾವಿರ ಕೇಂದ್ರಗಳನ್ನು ಆರಂಭಿಸಲಿದೆ ಎಂದು 2021ರ ನವೆಂಬರ್‌ನಲ್ಲಿ ಹೇಳಿದೆ. ಹಿಂದುಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಎಚ್‌ಪಿಸಿಎಲ್‌) ಕಂಪನಿಯು ಒಟ್ಟು ಐದು ಸಾವಿರ ಚಾರ್ಜಿಂಗ್ ಕೇಂದ್ರ ಆರಂಭಿಸುವ ಚಿಂತನೆ ಹೊಂದಿದೆ.

ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ) ಮುಂದಿನ ಮೂರು ವರ್ಷಗಳಲ್ಲಿ ಒಟ್ಟು ಹತ್ತು ಸಾವಿರ ಚಾರ್ಜಿಂಗ್ ಕೇಂದ್ರಗಳನ್ನು ಆರಂಭಿಸುವುದಾಗಿ ಈಗಾಗಲೇ ಹೇಳಿದೆ. ಅಂದರೆ, ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಮುಂದಿನ ಐದು ವರ್ಷಗಳಲ್ಲಿ ಒಟ್ಟು 22 ಸಾವಿರ ಚಾರ್ಜಿಂಗ್ ಕೇಂದ್ರಗಳನ್ನು ಆರಂಭಿಸಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.