ಬೆಂಗಳೂರು: ಹುರೂನ್ ಇಂಡಿಯಾ ಸಂಸ್ಥೆಯು ದೇಶದ ಮಹಾದಾನಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಎಚ್‌ಸಿಎಲ್ ಟೆಕ್ನಾಲಜೀಸ್ ಕಂಪನಿಯ ಗೌರವಾಧ್ಯಕ್ಷ ಶಿವ ನಾಡಾರ್ ಮತ್ತು ಅವರ ಕುಟುಂಬವು ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಅವರು 2021–22ರಲ್ಲಿ ಒಟ್ಟು ₹ 1,161 ಕೋಟಿಯನ್ನು ದಾನವಾಗಿ ನೀಡಿದ್ದಾರೆ.
2021ರ ಏಪ್ರಿಲ್ 1ರಿಂದ 2022ರ ಮಾರ್ಚ್ 31ರವರೆಗಿನ ದಾನ ಕಾರ್ಯದ ವಿವರ ಆಧರಿಸಿ ಈ ಪಟ್ಟಿ ಸಿದ್ಧಪಡಿಸಲಾಗಿದೆ. ಹುರೂನ್ ಇಂಡಿಯಾ ಸಂಸ್ಥೆಯು ಎಡೆಲ್‌ಗಿವ್ ಸಂಸ್ಥೆಯ ಜೊತೆ ಸೇರಿ ಈ ಪಟ್ಟಿ ಸಿದ್ಧಪಡಿಸಿದೆ. ವಿಪ್ರೊ ಕಂಪನಿಯ ಸಂಸ್ಥಾಪಕ ಅಧ್ಯಕ್ಷ ಅಜೀಂ ಪ್ರೇಮ್‌ಜಿ ಅವರು ₹ 484 ಕೋಟಿ ದಾನ ಮಾಡಿ, ಎರಡನೆಯ ಸ್ಥಾನದಲ್ಲಿ ಇದ್ದಾರೆ. ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಧ್ಯಕ್ಷ ಮುಕೇಶ್ ಅಂಬಾನಿ ಮತ್ತು ಅವರ ಕುಟುಂಬವು ₹ 411 ಕೋಟಿಯನ್ನು ದಾನವಾಗಿ ನೀಡಿ ಮೂರನೆಯ ಸ್ಥಾನದಲ್ಲಿದೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ಪಟ್ಟಿ ಬಿಡುಗಡೆ ಮಾಡಿದ ಹುರೂನ್ ಇಂಡಿಯಾ ಸಂಸ್ಥೆಯ ಮುಖ್ಯ ಸಂಶೋಧಕ ಹಾಗೂ ವ್ಯವಸ್ಥಾಪಕ ನಿರ್ದೇಶಕ ಅನಸ್ ರಹಮಾನ್ ಜುನೈದ್, ‘ದೇಶದಲ್ಲಿ ಸಂಪತ್ತು ಹೆಚ್ಚಾಗುತ್ತಿರುವ ಜೊತೆಯಲ್ಲಿಯೇ, ದಾನವಾಗಿ ನೀಡುವ ಮೊತ್ತ ಕೂಡ ಹೆಚ್ಚುತ್ತಿದೆ’ ಎಂದು ಹೇಳಿದರು.
ರೋಹಿಣಿ ನಿಲೇಕಣಿ ಅವರು ಪರಿಸರ ಮತ್ತು ಸುಸ್ಥಿರ ಅಭಿವೃದ್ಧಿಗೆ ಒಟ್ಟು ₹ 120 ಕೋಟಿ ದಾನವಾಗಿ ನೀಡಿದ್ದಾರೆ. ಅವರು 2021–22ನೆಯ ಸಾಲಿನ ಮಹಾದಾನಿ ಮಹಿಳೆಯರ ಪೈಕಿ ಮೊದಲ ಸ್ಥಾನದಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.