ಚಿಕ್ಕಮಗಳೂರು: ಕಾಫಿ ಉದ್ಯಮಿ ದಿವಂಗತ ಸಿದ್ಧಾರ್ಥ ಹೆಗ್ಡೆ ಒಡೆತನದ ಪೀಠೋಪಕರಣ ತಯಾರಿಕಾ ಕಂಪನಿ ‘ಡ್ಯಾಫ್ಕೊ’ (ಡಾರ್ಕ್ ಫಾರೆಸ್ಟ್ ಫರ್ನಿಚರ್ ಕಂಪನಿ) ಆರ್ಥಿಕ ನಷ್ಟದಿಂದ ಸೊಮವಾರ ಬಾಗಿಲು ಮುಚ್ಚಿದೆ.
ನಗರದ ಕೆ.ಎಂ. ರಸ್ತೆಯಲ್ಲಿರುವ ಎಬಿಸಿ ಕಂಪನಿ ಆವರಣದಲ್ಲಿಯೇ ಡ್ಯಾಫ್ಕೊ ಕಂಪನಿ ಇತ್ತು. ದೇಶ–ವಿದೇಶಗಳಲ್ಲಿನ ಸಿದ್ಧಾರ್ಥ ಅವರ ಕೆಫೆ ಕಾಫಿ ಡೇಗಳಿಗೆ ಇಲ್ಲಿಂದಲೇ ಪೀಠೋಪಕರಣ ಸರಬರಾಜು ಆಗುತ್ತಿದ್ದವು. ಸುಮಾರು 60 ಕಾರ್ಮಿಕರು ಕಾರ್ಯ ನಿರ್ವಹಿಸುತ್ತಿದ್ದರು.
ಸಿದ್ಧಾರ್ಥ ಅವರ ಮರಣ ನಂತರ ಡ್ಯಾಫ್ಕೊ ಕಂಪನಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಅದರ ಅಭಿವೃದ್ಧಿಗೆ ಪ್ರಯತ್ನಿಸಿದರೂ ಪ್ರಯೋಜನವಾಗಿಲ್ಲ. ನವೆಂಬರ್ 25ರಿಂದ ಡ್ಯಾಫ್ಕೊ ಘಟಕದ ಎಲ್ಲ ಕಾರ್ಮಿಕರನ್ನು ಕೆಲಸದಿಂದ ತೆಗೆದು ಹಾಕಲಾಗಿದೆ ಎಂದು ಕಂಪನಿ ಗೇಟ್ ಬಳಿ ಅಂಟಿಸಿದ ನೋಟಿಸ್‌ನಲ್ಲಿ ತಿಳಿಸಲಾಗಿದೆ.
ಎಂದಿನಂತೆ ಕೆಲಸಕ್ಕೆ ಬಂದ ಕಾರ್ಮಿಕರು ನೋಟಿಸ್ ನೋಡಿ ಕಂಗಾಲಾದರು. ಮಧ್ಯಾಹ್ನ 1 ಗಂಟೆವರೆಗೆ ಗೇಟ್ ಬಳಿಯೇ ಕಾಯ್ದು ವಾಪಸಾದರು. ಗೇಟ್ ಆವರಣದಲ್ಲಿ ಪೊಲೀಸ್ ತುಕಡಿಗಳನ್ನು ನಿಯೋಜಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.