ADVERTISEMENT

ಏರ್‌ಟೆಲ್‌ನಲ್ಲಿನ ಷೇರು ಮಾರಲಿರುವ ಸಿಂಗ್‌ಟೆಲ್‌

ರಾಯಿಟರ್ಸ್
Published 26 ಆಗಸ್ಟ್ 2022, 16:06 IST
Last Updated 26 ಆಗಸ್ಟ್ 2022, 16:06 IST

ಬೆಂಗಳೂರು: ಭಾರ್ತಿ ಏರ್‌ಟೆಲ್‌ ಲಿಮಿಟೆಡ್‌ನಲ್ಲಿ ತಾನು ಹೊಂದಿರುವ ಶೇಕಡ 3.3ರಷ್ಟು ಷೇರುಗಳನ್ನು ಭಾರ್ತಿ ಟೆಲಿಕಾಂ ಲಿಮಿಟೆಡ್‌ಗೆ ಮಾರಾಟ ಮಾಡುತ್ತಿರುವುದಾಗಿ ಸಿಂಗಪುರ ಟೆಲಿಕಮ್ಯುನಿಕೇಷನ್ಸ್‌ ಲಿಮಿಟೆಡ್‌ ಗುರುವಾರ ತಿಳಿಸಿದೆ. ಈ ಮಾರಾಟದ ಒಟ್ಟು ಮೌಲ್ಯವು ಅಂದಾಜು ₹ 12,834 ಕೋಟಿ.

ಆಗ್ನೇಯ ಏಷ್ಯಾದ ಅತಿದೊಡ್ಡ ದೂರಸಂಪರ್ಕ ಕಂಪನಿಯಾಗಿರುವ ಸಿಂಗ್‌ಟೆಲ್, ತನ್ನ ಅಂಗಸಂಸ್ಥೆಗಳಾದ ಪಾಸ್ಟೆಲ್ ಲಿಮಿಟೆಡ್ ಮತ್ತು ವಿರಿಡಿಯನ್ ಲಿಮಿಟೆಡ್‌, ಭಾರ್ತಿ ಏರ್‌ಟೆಲ್‌ ಲಿಮಿಟೆಡ್‌ನಲ್ಲಿ ಹೊಂದಿರುವ 19.80 ಕೋಟಿ ಷೇರುಗಳನ್ನು ಮಾರಾಟ ಮಾಡಲಿವೆ ಎಂದು ತಿಳಿಸಿದೆ.

ಈ ಷೇರು ವಹಿವಾಟು ಮುಕ್ತ ಮಾರುಕಟ್ಟೆಯಲ್ಲಿ ನಡೆಯುತ್ತಿಲ್ಲವಾದ ಕಾರಣ ಮಾರುಕಟ್ಟೆಯು ಈ ಸುದ್ದಿಯನ್ನು ನಕಾರಾತ್ಮಕವಾಗಿ ಗ್ರಹಿಸಿಲ್ಲ ಎಂದು ಆ್ಯಂಬಿಟ್ ಕ್ಯಾಪಿಟಲ್‌ನ ವಿಶ್ಲೇಷಕ ವಿವೇಕಾನಂದ ಸುಬ್ಬರಾಮನ್ ಹೇಳಿದ್ದಾರೆ.

ADVERTISEMENT

ಈ ಷೇರು ಮಾರಾಟದಿಂದ ಬರುವ ಹಣವನ್ನು ಸಾಲ ತೀರಿಸುವುದಕ್ಕೆ, 5ಜಿ ಸೇವೆಗಳಿಗೆ ಅಗತ್ಯವಿರುವ ಬಂಡವಾಳ ವೆಚ್ಚಕ್ಕೆ ಹಾಗೂ ಕಂಪನಿಯ ಬೆಳವಣಿಗೆ ಚಟುವಟಿಕೆಗಳಿಗೆ ಬಳಕೆ ಮಾಡಿಕೊಳ್ಳಬಹುದು ಎಂದು ಸಿಂಗ್‌ಟೆಲ್ ಹೇಳಿದೆ.

ಏರ್‌ಟೆಲ್ ಕಂಪನಿಯು ಕೂಡ ಮನೆಗಳಿಗೆ ಬ್ರಾಡ್‌ಬ್ಯಾಂಡ್‌ ಸಂಪರ್ಕ ಕಲ್ಪಿಸಲು, ದತ್ತಾಂಶ ಕೇಂದ್ರ ಆರಂಭಿಸಲು ಸೇರಿದಂತೆ ಹಲವು ಉದ್ದೇಶಗಳಿಗೆ ಹಣ ಒಗ್ಗೂಡಿಸುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.