ADVERTISEMENT

‘ಸಿಪ್‌’ ಹೊಸ ವಿಧಾನ ಆಕರ್ಷಕವೇ?

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2019, 6:31 IST
Last Updated 13 ಡಿಸೆಂಬರ್ 2019, 6:31 IST
ಹೂಡಿಕೆ ಅವಕಾಶ
ಹೂಡಿಕೆ ಅವಕಾಶ   

ವ್ಯವಸ್ಥಿಯ ಹೂಡಿಕೆ ಯೋಜನೆ (ಎಸ್‌ಐಪಿ– ಸಿಪ್‌) ಇತ್ತೀಚಿನ ದಿನಗಳಲ್ಲಿ ಹೆಚ್ಚು ಜನಪ್ರಿಯವಾಗುತ್ತಿದೆ. 2018ರ ಸೆಪ್ಟೆಂಬರ್‌ ಅಂತ್ಯದವರೆಗಿನ ಅಂಕಿಅಂಶಗಳ ಪ್ರಕಾರ ದೇಶದಲ್ಲಿ 2.44 ಕೋಟಿ ಎಸ್‌ಐಪಿ ಖಾತೆಗಳಿದ್ದು, ಅವುಗಳ ಮೂಲಕ ಪ್ರತಿ ತಿಂಗಳು ₹ 7,727 ಕೋಟಿ ಹೂಡಿಕೆ ನಡೆಯುತ್ತಿದೆ. ಮ್ಯೂಚುವಲ್‌ ಫಂಡ್‌ ಸಂಸ್ಥೆಗಳು ವ್ಯಾಪಕವಾದ ಪ್ರಚಾರಾಂದೋಲನ ನಡೆಸಿದ ಕಾರಣ, ಜನರಲ್ಲಿದ್ದ ‘ಎಸ್‌ಐಪಿ ಎಂದರೆ ಒಂದು ಹೂಡಿಕೆ ಉತ್ಪನ್ನ’ ಎಂಬ ತಪ್ಪು ಕಲ್ಪನೆ ದೂರವಾಗಿದೆ.

‘ಎಸ್‌ಐಪಿ’ ಎಂದರೆ ನಿಗದಿತ ಮೊತ್ತವನ್ನು ಪ್ರತಿ ತಿಂಗಳೂ ಯಾವುದಾದರೂ ಹಣಕಾಸು ಉತ್ಪನ್ನದಲ್ಲಿ ‘ಹೂಡಿಕೆ ಮಾಡುವ ವಿಧಾನ’ವೇ ಹೊರತು ಅದೇ ಹೂಡಿಕಾ ಉತ್ಪನ್ನವಲ್ಲ. ಪ್ರತಿ ತಿಂಗಳು ಅಥವಾ ನಿಗದಿತ ಅವಧಿಯಲ್ಲಿ ನಿಗದಿತ ಮೊತ್ತವನ್ನು ಒಂದು ನಿರ್ಧರಿತ ಅವಧಿಯವರೆಗೆ ಹೂಡಿಕೆ ಮಾಡುತ್ತಾ ಹೋಗುವ ವಿಧಾನವೇ ಎಸ್‌ಐಪಿ. ಈ ತಿಳಿವಳಿಕೆ ಜನರಲ್ಲಿ ಹೆಚ್ಚಿದ್ದರಿಂದ ಮ್ಯೂಚುವಲ್‌ ಫಂಡ್‌ ಕ್ಷೇತ್ರಕ್ಕೆ ಹರಿದುಬರುವ ಹಣದ ಪ್ರಮಾಣ ಸತತವಾಗಿ ಏರಿಕೆಯಾಗುತ್ತಿದೆ. 2018ರ ಸೆಪ್ಟಂಬರ್‌ ಅಂತ್ಯದ ವರದಿಯ ಪ್ರಕಾರ, ಈವರೆಗೆ ಈ ಕ್ಷೇತ್ರದಲ್ಲಿ ₹22.04 ಲಕ್ಷ ಕೋಟಿ ಹೂಡಿಕೆ ಆಗಿದೆ.

ಈಚಿನ ವರ್ಷಗಳಲ್ಲಿ ಮ್ಯೂಚುವಲ್‌ ಫಂಡ್‌ಗಳು ಮಾಡಿರುವ ಸಾಧನೆ ಹಾಗೂ ಹೂಡಿಕೆದಾರರಲ್ಲಿ ಮೂಡಿರುವ ಜಾಗೃತಿಯ ಪರಿಣಾಮ ‘ಎಸ್‌ಐಪಿ’ಯಲ್ಲೂ ಹೂಡಿಕೆಯ ಹೊಸ ಹೊಸ ವಿಧಾನಗಳು ರೂಪುಗೊಂಡಿವೆ. ಇವು ಇನ್ನಷ್ಟು ಹೂಡಿಕೆದಾರರನ್ನು ಆಕರ್ಷಿಸುತ್ತಿವೆ. ಈ ವಿಧಾನದ ಹೂಡಿಕೆ ಆರಂಭಿಸುವುದಕ್ಕೂ ಮುನ್ನ ‘ಹೂಡಿಕೆಗೆ ಎಸ್‌ಐಪಿಯೇ ಉತ್ತಮ ಆಯ್ಕೆ ಯಾಕೆ ’ ಎಂಬುದನ್ನು ತಿಳಿದುಕೊಳ್ಳುವುದು ಅಗತ್ಯ.

ADVERTISEMENT

ಷೇರುಪೇಟೆಯಲ್ಲಿ ಹೂಡಿಕೆ ಮಾಡಿದ ಅನೇಕ ಮಂದಿ ಮಾರುಕಟ್ಟೆಯ ಏರುಪೇರನ್ನು ಅರ್ಥಮಾಡಿಕೊಳ್ಳಲಾಗದೆ ನಷ್ಟ ಅನುಭವಿಸಿದ ಮತ್ತು ಇನ್ನು ಮುಂದೆ ಷೇರುಪೇಟೆಯ ಉಸಾಬರಿಯೇ ಬೇಡ ಎಂದು ಪೇಟೆಯಿಂದ ದೂರಸರಿದ ಸಾಕಷ್ಟು ಉದಾಹರಣೆಗಳು ನಮ್ಮ ಮುಂದಿವೆ.

ಷೇರುಪೇಟೆಯ ಬಗ್ಗೆ ಹೆಚ್ಚು ತಿಳಿವಳಿಕೆ ಇಲ್ಲದಿದ್ದರೂ ಹೂಡಿಕೆ ಮಾಡಲು ಇಚ್ಛಿಸುವವರಿಗೆ ಎಸ್‌ಐಪಿ ಒಂದು ಅತ್ಯುತ್ತಮ ಆಯ್ಕೆಯಾಗಿದೆ. ಇಲ್ಲಿ ಹೂಡಿಕೆದಾರ ಮಾರುಕಟ್ಟೆಯ ಏರುಪೇರಿನ ಬಗ್ಗೆ ಚಿಂತೆ ಮಾಡಬೇಕಿಲ್ಲ. ಹೂಡಿಕೆದಾರರ ಖಾತೆಯಿಂದ ಪ್ರತಿ ತಿಂಗಳೂ ನಿಗದಿತ ಪ್ರಮಾಣದ ಹಣ ಹೂಡಿಕೆ ಆಗುತ್ತಲೇ ಇರುತ್ತದೆ. ಹೂಡಿಕೆಗೆ ದೊಡ್ಡ ಮೊತ್ತವೇ ಬೇಕೆಂದಿಲ್ಲ. ಕನಿಷ್ಠ ₹ 500 ಹೂಡಿಕೆಗೂ ಅವಕಾಶ ಇದೆ. ದೀರ್ಘ ಅವಧಿಯವರೆಗೆ ತಡೆರಹಿತವಾಗಿ ಇಷ್ಟು ಹಣವನ್ನು ಹೂಡಿಕೆ ಮಾಡುತ್ತಾ ಹೋದರೆ ಕೊನೆಗೆ ಒಳ್ಳೆಯ ನಿಧಿಯನ್ನು ಪಡೆಯಲು ಸಾಧ್ಯ. ಈ ಹೂಡಿಕೆಯ ವೆಚ್ಚವೂ ಕಡಿಮೆ ಇರುತ್ತದೆ ಎಂಬುದು ಇನ್ನೊಂದು ಆಕರ್ಷಕ ವಿಚಾರ.

ಆದರೆ, ಮಾರುಕಟ್ಟೆಯಲ್ಲಿ ಈಗ ಸಾಮಾನ್ಯ ಎಸ್‌ಐಪಿಗೂ ಮಿಗಿಲಾದ, ಅದಕ್ಕಿಂತ ಹೆಚ್ಚಿನ ಸೌಲಭ್ಯಗಳನ್ನು ನೀಡುವಂತಹ ಹೂಡಿಕಾ ವಿಧಾನಗಳೂ ಇವೆ. ಕೆಲವು ಮ್ಯೂಚುವಲ್‌ ಫಂಡ್‌ ಸಂಸ್ಥೆಗಳು ತಮ್ಮದೇ ಆದ ಹೂಡಿಕಾ ವಿಧಾನವನ್ನೂ ಪರಿಚಯಿಸಿವೆ. ಕೆಲವು ಉದಾಹರಣೆ ಕೊಡಬಹುದೆಂದರೆ...

ಟಾಪ್‌ಅಪ್‌ ಎಸ್‌ಐಪಿ

ಹೂಡಿಕೆದಾರರ ಆದಾಯವು ಪ್ರತಿ ವರ್ಷವೂ ಏರಿಕೆಯಾಗುತ್ತಾ ಹೋಗುತ್ತಿದ್ದರೆ ಅಥವಾ ಭವಿಷ್ಯದಲ್ಲಿ ಕೈಗೆ ಹೆಚ್ಚಿನ ಹಣ ಬರುತ್ತದೆ ಎಂಬ ನಿರೀಕ್ಷೆ ಇರುವವರು ಈ ಆಯ್ಕೆಯನ್ನು ಮಾಡಿಕೊಳ್ಳಬಹುದು. ಆದಾಯ ಹೆಚ್ಚಿದಂತೆ ಎಸ್‌ಐಪಿ ಮೂಲಕ ಮಾಡುವ ಹೂಡಿಕೆಯನ್ನೂ ಏರಿಸುತ್ತಲೇ ಹೋಗುವುದನ್ನು ‘ಟಾಪ್‌ ಅಪ್‌’ ಎಂದು ಗುರುತಿಸಬಹುದು. ಹೂಡಿಕೆದಾರರೊಬ್ಬರು ಮಾಸಿಕ ₹ 1,000 ರಂತೆ 25ವರ್ಷಗಳ ಅವಧಿಗೆ ಹೂಡಿಕೆ ಮಾಡಲು ಆರಂಭಿಸುತ್ತಾರೆ ಎಂದಿಟ್ಟುಕೊಳ್ಳೋಣ. ಪ್ರತಿವರ್ಷವೂ ಅವರು ಹೂಡಿಕೆಯ ಪ್ರಮಾಣವನ್ನು ₹ 1,000ದಂತೆ ಟಾಪ್‌ಅಪ್‌ ಮಾಡಿಸುತ್ತಾ ಹೋದರೆ 25ವರ್ಷಗಳ ಅಂತ್ಯದಲ್ಲಿ ₹54.78 ಲಕ್ಷ ಗಳಿಕೆ ಮಾಡಲು ಸಾಧ್ಯವಾಗುತ್ತದೆ. ಸಾಮಾನ್ಯ ಎಸ್‌ಐಪಿ ಆಗಿದ್ದರೆ 25ವರ್ಷಗಳಲ್ಲಿ ₹27.57 ಮಾತ್ರ ಗಳಿಸಲು ಸಾಧ್ಯ.

ವ್ಯಾಲ್ಯೂ ಎಸ್‌ಐಪಿ

ಸಾಮಾನ್ಯ ಎಸ್‌ಐಪಿಯಲ್ಲಿರುವ ಒಂದು ಕೊರತೆ ಎಂದರೆ ಅದರಲ್ಲಿ ಮೌಲ್ಯದ ಸರಾಸರಿ ಮಾಡಿ ಅದಕ್ಕೆ ಅನುಗುಣವಾದ ಹೂಡಿಕೆ ಮಾಡುವ ವ್ಯವಸ್ಥೆ ಇಲ್ಲದಿರುವುದು. ಇದರಿಂದಾಗಿ ಪ್ರತಿ ತಿಂಗಳೂ ನಿಮ್ಮ ಬ್ಯಾಂಕ್‌ ಖಾತೆಯಿಂದ ನಿಗದಿತ ಮೊತ್ತ ಹೂಡಿಕೆ ಆಗುತ್ತಲೇ ಇರುತ್ತದೆ. ಆದರೆ, ವ್ಯಾಲ್ಯೂ ಎಸ್‌ಐಪಿಯು ಮಾರುಕಟ್ಟೆಯ ಏರಿಳಿಕೆಗೆ ಅನುಗುಣವಾಗಿ ಹೂಡಿಕೆಯ ಪ್ರಮಾಣವನ್ನು ನಿರ್ಧರಿಸುತ್ತದೆ.

ಉದಾಹರಣೆಗೆ, ಹೂಡಿಕೆದಾರರು ₹ 1,000 ಹೂಡಿಕೆ ಆರಂಭಿಸುತ್ತಾರೆ ಎಂದಿಟ್ಟುಕೊಳ್ಳಿ. ಮಾಸಾಂತ್ಯದಲ್ಲಿ ಹೂಡಿಕೆಯ ಮೌಲ್ಯ ₹ 1500ಕ್ಕೆ ಏರಿಕೆಯಾಯಿತು ಎಂದಾದರೆ ಮುಂದಿನ ತಿಂಗಳಲ್ಲಿ ನಿಮ್ಮ ಹೂಡಿಕೆ ಕೇವಲ ₹ 500 ಆಗಿರುತ್ತದೆ. ಹೆಚ್ಚುವರಿ ಹಣವನ್ನು ಬೇರೆ ಯೋಜನೆಯಲ್ಲಿ ಹೂಡಿಕೆ ಮಾಡಲಾಗುವುದು. ಒಂದು ವೇಳೆ ನಿಮ್ಮ ₹ 1,000 ಹೂಡಿಕೆಯ ಮೌಲ್ಯವು ₹ 900ಕ್ಕೆ ಕುಸಿದರೆ ಮುಂದಿನ ತಿಂಗಳಲ್ಲಿ ₹ 1,100 ಹೂಡಿಕೆ ನಡೆಸಲಾಗುವುದು. ಹೀಗೆ ಮಾಡುವುದರಿಂದ ಹೂಡಿಕೆದಾರರಿಗೆ ಶೇ 1ರಿಂದ ಶೇ 3ರಷ್ಟು ಹೆಚ್ಚುವರಿ ಗಳಿಕೆ ಸಾಧ್ಯವಾಗುತ್ತದೆ.

ಅವ್ಯವಸ್ಥಿತ ಹೂಡಿಕೆ

ಎಸ್‌ಐಪಿ ಅಲ್ಲದೆ ಹೆಚ್ಚುವರಿಯಾಗಿ ಹಣವನ್ನು ಹೂಡಿಕೆ ಮಾಡಬೇಕು ಎಂದುಕೊಂಡವರಿಗೆ ಇದು ಒಂದು ಆಯ್ಕೆಯಾಗಿದೆ. ಇದಕ್ಕೆ ಅವಧಿಯ ಮಿತಿ ಇಲ್ಲ. ಷೇರುಪೇಟೆಯ ಏರಿಳಿತವನ್ನು ನೋಡಿ ಸೂಕ್ತ ಸಂದರ್ಭದಲ್ಲಿ ಮಾಡುವ ಹೂಡಿಕೆ ಇದಾಗಿದೆ. ನಿಗದಿತ ಅವಧಿಯಲ್ಲಿ ಉಂಟಾದ ಹೂಡಿಕೆಯ ಅವಕಾಶವನ್ನು ಸಮರ್ಥವಾಗಿ ಬಳಸಿಕೊಳ್ಳುವುದು ಈ ಯೋಜನೆಯ ಉದ್ದೇಶ. ಇಲ್ಲಿ ಹೆಚ್ಚಿನ ಗಳಿಕೆ ದಾಖಲಿಸಲು ಅವಕಾಶ ಇರುತ್ತದೆ ಎಂಬುದು ನಿಜ. ಆದರೆ, ಹೂಡಿಕೆದಾರ ಬಹಳ ಎಚ್ಚರದಿಂದ ಇರಬೇಕಾಗುತ್ತದೆ.

ಸರಿಯಾದ ಸಮಯಕ್ಕಾಗಿ ಕಾಯ್ದು ಹೂಡಿಕೆ ಮಾಡಿ ಲಾಭ ಗಳಿಸಬೇಕು ಎಂಬುದು ಪ್ರತಿಯೊಬ್ಬ ಹೂಡಿಕೆದಾರನ ನಿರೀಕ್ಷೆಯಾಗಿರುತ್ತದೆ. ಆದರೆ, ಅನೇಕ ಸಂದರ್ಭಗಳಲ್ಲಿ ಹೀಗೆ ಮಾಡಿದ ಹೂಡಿಕೆ ನಷ್ಟದಲ್ಲಿ ಅಂತ್ಯವಾಗುವುದಿದೆ. ಹೂಡಿಕೆದಾರರು ‘ಭಯ ಮತ್ತು ಆಸೆ’ಗಳೆಂಬ ಭಾವನೆಗಳನ್ನು ಇಟ್ಟುಕೊಂಡೇ ಷೇರುಪೇಟೆಯಲ್ಲಿ ಹೂಡಿಕೆ ಮಾಡಿರುತ್ತಾರೆ. ಈ ಭಯ ಮತ್ತು ಆಸೆ ಎಂಬ ಭಾವಗಳೇ ಅನೇಕ ಸಂದರ್ಭದಲ್ಲಿ ತಮ್ಮ ಯೋಜನೆಗಳನ್ನು ಬುಡಮೇಲು ಮಾಡುತ್ತವೆ. ಎಸ್‌ಐಪಿ ಮೂಲಕ ಮ್ಯೂಚುವಲ್‌ ಫಂಡ್‌ಗಳಲ್ಲಿ ಹೂಡಿಕೆ ಮಾಡುವುದೇ ಈ ಮಿಶ್ರಭಾವದಿಂದ ಹೊರಬರಲು ಇರುವ ಮಾರ್ಗ.

ಮ್ಯೂಚುವಲ್‌ ಫಂಡ್‌ನಲ್ಲಿ ಎಸ್‌ಐಪಿ ಮೂಲಕ ಹೂಡಿಕೆ ಮಾಡುವ ವಿಧಾನ ಆರಂಭವಾದ ಮೇಲೆ ಅನೇಕ ಚಿಲ್ಲರೆ ಹೂಡಿಕೆದಾರರಿಗೆ ದೀರ್ಘಾವಧಿಯಲ್ಲಿ ಒಳ್ಳೆಯ ಗಳಿಕೆಯನ್ನು ದಾಖಲಿಸಲು ಸಾಧ್ಯವಾಗಿದೆ. ಇದು ಪಾರಂಪರಿಕ ಹೂಡಿಕಾ ವಿಧಾನಗಳಷ್ಟೇ ಸುರಕ್ಷಿತ ಮಾತ್ರವಲ್ಲ ಹೆಚ್ಚು ಲಾಭದಾಯಕವೂ ಆಗಿದೆ ಎಂಬುದನ್ನು ಸಾಬೀತುಪಡಿಸಿದೆ. ಪ್ರತಿ ತಿಂಗಳೂ ನಿಗದಿತ ಪ್ರಮಾಣದ ಹೂಡಿಕೆ ಮಾಡುವುದರಿಂದ ಗಳಿಕೆ ಹೆಚ್ಚಾಗುತ್ತದೆ ಎಂಬ ಕಾರಣದಿಂದ ಸಾಂಪ್ರದಾಯಿಕ ಹೂಡಿಕಾ ಉತ್ಪನ್ನಗಳನ್ನು ನೆಚ್ಚಿಕೊಂಡಿದ್ದ ಅನೇಕರು ಈಗ ‘ಎಸ್‌ಐಪಿ’ಗಳತ್ತ ವಾಲುತ್ತಿದ್ದಾರೆ. ಹೂಡಿಕೆದಾರರ ಯೋಚನೆಯಲ್ಲಿ ಆಗಿರುವ ಈ ಬದಲಾವಣೆಯಿಂದ ಎಸ್‌ಐಪಿ ಮತ್ತು ಇದರ ಇತರ ಹೂಡಿಕಾ ವಿಧಾನಗಳನ್ನು ಹೆಚ್ಚು ಆಕರ್ಷಕವಾಗಿಸಿದೆ.

(ಲೇಖಕ: 5ನಾನ್ಸ್‌ಡಾಟ್‌ಕಾಂನ ಸಂಸ್ಥಾಪಕ ಮತ್ತು ಸಿಇಒ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.