ADVERTISEMENT

ಈಕ್ವಿಟಿ ಎಫ್‌.ಎಂ: ಹೂಡಿಕೆ ಹೆಚ್ಚಳ

ಪಿಟಿಐ
Published 9 ಜುಲೈ 2024, 15:30 IST
Last Updated 9 ಜುಲೈ 2024, 15:30 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಮುಂಬೈ: ಈಕ್ವಿಟಿ ಮ್ಯೂಚುವಲ್‌ ಫಂಡ್‌ಗಳಲ್ಲಿ ಜೂನ್‌ ತಿಂಗಳಿನಲ್ಲಿ ₹40,608 ಕೋಟಿ ಬಂಡವಾಳ ಹೂಡಿಕೆಯಾಗಿದೆ. ಮೇ ತಿಂಗಳಿಗೆ ಹೋಲಿಸಿದರೆ ಬಂಡವಾಳ ಒಳಹರಿವಿನ ಪ್ರಮಾಣದಲ್ಲಿ ಶೇ 17ರಷ್ಟು ಏರಿಕೆಯಾಗಿದೆ ಎಂದು ಭಾರತೀಯ ಮ್ಯೂಚುವಲ್ ಫಂಡ್ ಕಂಪನಿಗಳ ಒಕ್ಕೂಟ (ಎಎಂಎಫ್‌ಐ) ಮಂಗಳವಾರ ತಿಳಿಸಿದೆ.

ಜೂನ್‌ನಲ್ಲಿ ವ್ಯವಸ್ಥಿತ ಹೂಡಿಕೆ ಯೋಜನೆ (ಎಸ್‌ಐಪಿ) ಮೂಲಕ ಮ್ಯೂಚುವಲ್‌ ಫಂಡ್‌ಗಳಲ್ಲಿ ₹21,262 ಕೋಟಿ ಹೂಡಿಕೆಯಾಗಿದೆ. ಮೇ ತಿಂಗಳಿನಲ್ಲಿ ₹20,904 ಕೋಟಿ ಹೂಡಿಕೆಯಾಗಿತ್ತು.

ಷೇರು ಮಾರುಕಟ್ಟೆಯಲ್ಲಿ ಉತ್ತಮ ಬೆಳವಣಿಗೆ ಹಾಗೂ ಒಳಹರಿವು ಪ್ರಮಾಣದಲ್ಲಿನ ಏರಿಕೆಯೇ ಇದಕ್ಕೆ ಕಾರಣ ಎಂದು ಎಎಂಎಫ್‌ಐನ ಮುಖ್ಯ ಕಾರ್ಯ ನಿರ್ವಾಹಕ ವೆಂಕಟ್ ಚಲಸಾನಿ ತಿಳಿಸಿದ್ದಾರೆ.

ADVERTISEMENT

ಈಕ್ವಿಟಿ ಮ್ಯೂಚುವಲ್‌ ಫಂಡ್‌ಗಳಲ್ಲಿ ಹೂಡಿಕೆಯಾಗಿರುವ ಸಂಪತ್ತಿನ ನಿರ್ವಹಣಾ ಮೌಲ್ಯವು (ಎಯುಎಂ) ₹27.67 ಲಕ್ಷ ಕೋಟಿಗೆ ತಲುಪಿದೆ. ಎಸ್‌ಐಪಿ ಮೂಲಕ ಹೂಡಿಕೆಯಾಗಿರುವ ಎಯುಎಂ ₹12.43 ಲಕ್ಷ ಕೋಟಿ ಆಗಿದೆ ಎಂದು ವಿವರಿಸಿದ್ದಾರೆ. 

32.35 ಲಕ್ಷ ಎಸ್‌ಐಪಿ ಹೂಡಿಕೆಗಳು ಸ್ಥಗಿತಗೊಂಡಿವೆ ಅಥವಾ ಅವಧಿ ಪೂರ್ಣಗೊಳಿಸಿವೆ. 55 ಲಕ್ಷ ಹೊಸ ಹೂಡಿಕೆದಾರರು ಎಸ್‌ಐಪಿ ಆರಂಭಿಸಿದ್ದು,  ಹೂಡಿಕೆದಾರರ ಒಟ್ಟು ಸಂಖ್ಯೆ 8.98 ಕೋಟಿ ಆಗಿದೆ ಎಂದು ತಿಳಿಸಿದ್ದಾರೆ.

ಮ್ಯೂಚುವಲ್‌ ಫಂಡ್‌ ಉದ್ಯಮ ವಲಯದ ಎಯುಎಂ ₹61.33 ಲಕ್ಷ ಕೋಟಿ ದಾಟಿದೆ. ಮೇ ತಿಂಗಳಿಗೆ ಹೋಲಿಸಿದರೆ ಶೇ 4ರಷ್ಟು ಹೆಚ್ಚಳವಾಗಿದೆ ಎಂದು ತಿಳಿಸಿದ್ದಾರೆ.

‘ಕಳೆದ ಎರಡು ತಿಂಗಳಿನಿಂದಲೂ ಮ್ಯೂಚುವಲ್‌ ಫಂಡ್‌ಗಳಲ್ಲಿ ಬಂಡವಾಳದ ಒಳಹರಿವು ಹೆಚ್ಚುತ್ತಿದೆ. ಪ್ರಸಕ್ತ ಹಣಕಾಸು ವರ್ಷದ ಮೊದಲ ತಿಂಗಳಿನಲ್ಲಿ ದಾಖಲೆ ಪ್ರಮಾಣದಲ್ಲಿ ಒಳಹರಿವು ಏರಿಕೆಯಾಗಿದೆ’ ಎಂದು ಕ್ರೆಡಿಟ್‌ ರೇಟಿಂಗ್‌ ಏಜೆನ್ಸಿ ಐಸಿಆರ್‌ಎ ಮಾರುಕಟ್ಟೆ ದತ್ತಾಂಶ ವಿಭಾಗದ ಮುಖ್ಯಸ್ಥ ಅಶ್ವಿನಿ ಕುಮಾರ್‌ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.