ಶಿರಸಿ: ಕೆಲವು ವರ್ತಕರು ಮಲೆನಾಡಿನ ಗುಣಮಟ್ಟದ ಚಾಲಿ ಅಡಿಕೆ ಜತೆ ಬರ್ಮಾ ಅಡಿಕೆಯನ್ನು ಕಲಬೆರಕೆ ಮಾಡಿ ಮಾರುಕಟ್ಟೆಗೆ ಪೂರೈಕೆ ಮಾಡುತ್ತಿದ್ದಾರೆ. ಇದರಿಂದ ಕಳೆದ ಒಂದು ತಿಂಗಳ ಅವಧಿಯಲ್ಲಿ ಚಾಲಿ ಅಡಿಕೆ ದರ ಕ್ವಿಂಟಲ್‌ಗೆ ₹3 ಸಾವಿರ ಕುಸಿದಿದೆ. ದರ ಸ್ಥಿರತೆಗೆ ಶ್ರಮಿಸುತ್ತಿರುವ ಸಹಕಾರ ಸಂಘಗಳಿಗೆ ಇದು ಕಂಗೆಡಿಸಿದೆ.
ಕೊಳೆ, ಎಲೆಚುಕ್ಕಿ ರೋಗದಿಂದ ಫಸಲು ಕಳೆದುಕೊಂಡಿರುವ ಅಡಿಕೆ ಬೆಳೆಗಾರರಿಗೆ ಈಗ ಮಾರುಕಟ್ಟೆಯಲ್ಲಿನ ಕೆಲ ವರ್ತಕರ ನಡೆಯಿಂದ ಆರ್ಥಿಕ ಅಸ್ಥಿರತೆ ಎದುರಾಗಿದೆ. ‘ಕಲಬೆರಕೆ’ ಕಾರಣಕ್ಕೆ ಚಾಲಿ ಅಡಿಕೆ ದರ ಇಳಿಕೆಯ ಹಾದಿ ಹಿಡಿದಿದ್ದು, ಪ್ರಾಮಾಣಿಕವಾಗಿ ಗುಣಮಟ್ಟದ ಅಡಿಕೆ ಮಾರುವ ರೈತರನ್ನು ಚಿಂತೆಗೀಡು ಮಾಡಿದೆ.
‘ವಿದೇಶಿ ಒಪ್ಪಂದಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ವರ್ತಕರು ಬರ್ಮಾ ದೇಶದ ಕೆಳಪೆ ದರ್ಜೆಯ ಅಡಿಕೆಯನ್ನು ತರಿಸಿಕೊಳ್ಳುತ್ತಿದ್ದಾರೆ. ಕೆ.ಜಿಗೆ ₹100 ರಿಂದ ₹140ಕ್ಕೆ ಸಿಗುವ ಈ ಅಡಿಕೆಯನ್ನು ಸ್ಥಳೀಯ ಉತ್ತಮ ಗುಣಮಟ್ಟದ ಅಡಿಕೆ ಜತೆ ಮಿಶ್ರಣಗೊಳಿಸಿ ಮತ್ತೆ ಮಾರುಕಟ್ಟೆಗೆ ಪೂರೈಸುತ್ತಾರೆ. ಇಷ್ಟು ವರ್ಷ ಹೊರ ರಾಜ್ಯಗಳಲ್ಲಿ ಇಂಥ ಬೆಳವಣಿಗೆ ಹೆಚ್ಚಿತ್ತು. ಈಗ ರಾಜ್ಯದ ಮಲೆನಾಡಿನ ಅಡಿಕೆ ಮಾರುಕಟ್ಟೆಗೂ ಬಂದಿದೆ’ ಎಂದು ಮಾರುಕಟ್ಟೆ ತಜ್ಞರು ಹೇಳುತ್ತಾರೆ.
‘ಈ ಕುತಂತ್ರದಿಂದಾಗಿ ಮಲೆನಾಡಿನ ಉತ್ತಮ ಅಡಿಕೆಗೆ ಉತ್ತರ ಭಾರತದ ಮಾರುಕಟ್ಟೆಯಲ್ಲಿ ಇದ್ದ ಬೇಡಿಕೆ ಕುಸಿಯುತ್ತಿದೆ. ಇದರಿಂದ ತಿಂಗಳಲ್ಲಿ ಚಾಲಿ ಅಡಿಕೆ ದರ ಕ್ವಿಂಟಲ್‌ಗೆ ₹33 ಸಾವಿರದಿಂದ ₹30 ಸಾವಿರಕ್ಕೆ ಇಳಿದಿದೆ. ಸರ್ಕಾರ ನಿಗಾ ವಹಿಸದಿದ್ದರೆ ಅಡಿಕೆ ಮಾರಾಟದ ಹಂಗಾಮಿನ ವೇಳೆ ದರ ಪಾತಾಳಕ್ಕೆ ಕುಸಿಯಬಹುದು’ ಎಂಬುದು ಅವರ ಆತಂಕ.
‘ಸ್ಥಳೀಯವಾಗಿ ರೈತರೆಂದು ಗುರುತಿಸಿಕೊಂಡು, ಅಡಿಕೆ ವರ್ತಕರಾಗಿಯೂ ಕೆಲಸ ಮಾಡುವವರು ಬರ್ಮಾ ಅಡಿಕೆ ಮಿಶ್ರಣವನ್ನು ಸಂಘದಲ್ಲಿ ಮಾರಲು ಬಂದಾಗ 35 ರಿಂದ 40 ಚೀಲ ಕಲಬೆರಕೆ ಆಗಿದ್ದು ಗೊತ್ತಾಯಿತು. ತಕ್ಷಣವೇ ಎಲ್ಲ ಅಡಿಕೆಯನ್ನು ವಶಕ್ಕೆ ಪಡೆಯಲಾಯಿತು. ವರ್ತಕರ ಇಂಥ ಕುತಂತ್ರದಿಂದ ಅಡಿಕೆಯ ಸ್ಥಿರ ದರ ಕಾಪಾಡಲು ಸಮಸ್ಯೆ ಆಗುತ್ತಿದೆ’ ಎನ್ನುತ್ತಾರೆ ಅಡಿಕೆ ವಹಿವಾಟು ಸಂಸ್ಥೆ ಟಿ.ಎಸ್.ಎಸ್. ಮುಖ್ಯಸ್ಥ ಗೋಪಾಲಕೃಷ್ಣ ವೈದ್ಯ.
‘ಇದೇ ವರ್ತಕರು ಬೆಳೆಗಾರರನ್ನು ನೇರವಾಗಿ ಸಂಪರ್ಕಿಸಿ ಅವರ ಮನೆ ಬಾಗಿಲಲ್ಲೇ ಅಡಿಕೆ ಖರೀದಿಸಿ, ಅವುಗಳಿಗೂ ಬರ್ಮಾ ಅಡಿಕೆ ಸೇರಿಸಿ ಇಡೀ ಮಾರುಕಟ್ಟೆ ವ್ಯವಸ್ಥೆಯನ್ನು ಹದಗೆಡಿಸುತ್ತಿದ್ದಾರೆ’ ಎಂದು ಹೇಳುತ್ತಾರೆ ಅವರು.
ಮಾರುಕಟ್ಟೆಯಲ್ಲಿ ಕಳಪೆ ದರ್ಜೆಯ ಬರ್ಮಾ ಅಡಿಕೆ ಮಿಶ್ರಣ ಮಾರಲು ಮುಂದಾಗುವ ವರ್ತಕರ ವಿರುದ್ಧ ಕಾನೂನು ಕ್ರಮಕ್ಕೆ ಆಯಾ ಎಪಿಎಂಸಿ ಅಧಿಕಾರಿಗಳು ಮುಂದಾಗಬೇಕು.–ಎಂ.ಎನ್.ಭಟ್, ಉಪಾಧ್ಯಕ್ಷ ಟಿಎಸ್‌ಎಸ್ ಶಿರಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.