ADVERTISEMENT

ಸಕಾಲದಲ್ಲಿ ತೆರಿಗೆ ಪಾಲು ಹಂಚಿಕೆ: ನಿರ್ಮಲಾ

ಪಿಟಿಐ
Published 22 ಜೂನ್ 2024, 14:00 IST
Last Updated 22 ಜೂನ್ 2024, 14:00 IST
ನವದೆಹಲಿಯಲ್ಲಿ ಶನಿವಾರ ನಡೆದ 53ನೇ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಮಾತನಾಡಿದರು –ಪಿಟಿಐ ಚಿತ್ರ
ನವದೆಹಲಿಯಲ್ಲಿ ಶನಿವಾರ ನಡೆದ 53ನೇ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಮಾತನಾಡಿದರು –ಪಿಟಿಐ ಚಿತ್ರ   

ನವದೆಹಲಿ (ಪಿಟಿಐ): ‘ಸಕಾಲದಲ್ಲಿ ತೆರಿಗೆ ಪಾಲು ಹಂಚಿಕೆ ಹಾಗೂ ಜಿಎಸ್‌ಟಿ ವರಮಾನ ನಷ್ಟ ಪರಿಹಾರ ಬಾಕಿ ವಿತರಿಸುವ ಮೂಲಕ ರಾಜ್ಯಗಳ ಅಭಿವೃದ್ಧಿಗೆ ಸರ್ಕಾರವು ಸಂಪೂರ್ಣ ಸಹಕಾರ ನೀಡಲಿದೆ’ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದರು.

ರಾಜ್ಯಗಳ ಹಣಕಾಸು ಸಚಿವರೊಟ್ಟಿಗೆ ಶನಿವಾರ ನಡೆದ ಬಜೆಟ್‌ ಪೂರ್ವ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.

ಕೇಂದ್ರವು ರಾಜ್ಯ ಸರ್ಕಾರಗಳಿಗೆ 50 ವರ್ಷಗಳ ಬಡ್ಡಿರಹಿತ ಸಾಲ ಸೌಲಭ್ಯ ಕಲ್ಪಿಸಿದೆ. ಮೂಲ ಸೌಕರ್ಯದಲ್ಲಿ ಹೂಡಿಕೆಗೆ ಉತ್ತೇಜನ ನೀಡಲು ಇದರಿಂದ ಸಹಕಾರಿಯಾಗಲಿದೆ. ಈ ಸಾಲವನ್ನು ಬಂಡವಾಳ ವೆಚ್ಚದ ರೂಪದಲ್ಲಿ ವಿನಿಯೋಗಿಸಬೇಕು ಎಂದರು.

ADVERTISEMENT

ಹಣಕಾಸು ಆಯೋಗದ ಶಿಫಾರಸು ಅನ್ವಯ ಕೇಂದ್ರ ಸಂಗ್ರಹಿಸುವ ತೆರಿಗೆ ವರಮಾನದಲ್ಲಿ ರಾಜ್ಯಗಳಿಗೆ ನೀಡುವ ಪಾಲಿನ ಹಣವನ್ನು ಸಕಾಲದಲ್ಲಿ ಬಿಡುಗಡೆಗೊಳಿಸಲಾಗುವುದು. ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆ ಜಾರಿಯಿಂದಾಗಿ ರಾಜ್ಯಗಳಿಗೆ ಆಗುವ ವರಮಾನ ನಷ್ಟಕ್ಕೆ ನೀಡುವ ಪರಿಹಾರ ಬಾಕಿಯನ್ನೂ ನೀಡಲಾಗುವುದು ಎಂದು ಹೇಳಿದರು.

ರಾಜ್ಯಗಳ ಬಂಡವಾಳ ವೆಚ್ಚಕ್ಕೆ ಉತ್ತೇಜನ ನೀಡಲು ಕೇಂದ್ರ ಒತ್ತು ನೀಡಲಿದೆ. ಬಂಡವಾಳ ಹೂಡಿಕೆಗಾಗಿ ರಾಜ್ಯಗಳಿಗೆ ವಿಶೇಷ ಹಣಕಾಸಿನ ನೆರವು ಯೋಜನೆಯನ್ನು ಜಾರಿಗೊಳಿಸಿದೆ. ನಾಗರಿಕ ಕೇಂದ್ರಿತ ಸುಧಾರಣೆ ಮತ್ತು ವಲಯವಾರು ನಿರ್ದಿಷ್ಟ ಬಂಡವಾಳ ಯೋಜನೆಗಳಿಗೆ ಕೆಲವು ಷರತ್ತು ವಿಧಿಸಲಾಗಿದೆ ಎಂದರು.

ಇದರ ಹೊರತಾಗಿ ವಿವಿಧ ಕ್ಷೇತ್ರಗಳಲ್ಲಿ ಬಂಡವಾಳ ಹೂಡಿಕೆಗೆ ಈ ಯೋಜನೆಯಡಿ ಲಭಿಸುವ ಬಡ್ಡಿರಹಿತ ಸಾಲವನ್ನು ಬಳಸಿಕೊಳ್ಳಬಹುದಾಗಿದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.