ADVERTISEMENT

20ಕ್ಕೆ ಕೈಗಾರಿಕಾ ಒಕ್ಕೂಟದ ಜತೆ ನಿರ್ಮಲಾ ಸೀತಾರಾಮನ್‌ ಬಜೆಟ್‌ ಪೂರ್ವ ಸಭೆ

ಪಿಟಿಐ
Published 16 ಜೂನ್ 2024, 16:01 IST
Last Updated 16 ಜೂನ್ 2024, 16:01 IST
ನಿರ್ಮಲಾ ಸೀತಾರಾಮನ್‌ –ಪಿಟಿಐ ಚಿತ್ರ
ನಿರ್ಮಲಾ ಸೀತಾರಾಮನ್‌ –ಪಿಟಿಐ ಚಿತ್ರ   

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು, ಜುಲೈನಲ್ಲಿ 2024–25ನೇ ಆರ್ಥಿಕ ಸಾಲಿನ ಬಜೆಟ್‌ ಮಂಡಿಸಲಿದ್ದಾರೆ. ಇದರ ಅಂಗವಾಗಿ ಜೂನ್‌ 20ರಂದು ದೇಶದ ಕೈಗಾರಿಕಾ ಒಕ್ಕೂಟಗಳ ಜೊತೆಗೆ ಅವರು, ಬಜೆಟ್‌ ಪೂರ್ವ ಸಭೆ ನಡೆಸುವ ಸಾಧ್ಯತೆಯಿದೆ.

‍ಬಜೆಟ್‌ ಪೂರ್ವ ಸಮಾಲೋಚನೆ ಸಭೆಗೂ ಮೊದಲು ಜೂನ್ 18ರಂದು ಕಂದಾಯ ಕಾರ್ಯದರ್ಶಿ ಸಂಜಯ್ ಮಲ್ಹೋತ್ರಾ ಅವರನ್ನು ಭೇಟಿ ಮಾಡಿ ಚರ್ಚಿಸಲಾಗುವುದು ಎಂದು ಕೈಗಾರಿಕಾ ಒಕ್ಕೂಟದ ಮೂಲಗಳು ತಿಳಿಸಿವೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಸರ್ಕಾರದ ಆರ್ಥಿಕ ಕಾರ್ಯಸೂಚಿಯನ್ನು ಈ ಬಜೆಟ್‌ ಒಳಗೊಂಡಿರಲಿದೆ.

ADVERTISEMENT

ಚಿಲ್ಲರೆ ಹಣದುಬ್ಬರದ ಏರಿಕೆ ತಡೆಯುವ ಜೊತೆಗೆ ದೇಶದ ಆರ್ಥಿಕತೆಗೆ ಬಲವರ್ಧನೆ ನೀಡುವ ಅಗತ್ಯವಿರುವ ಕ್ರಮಗಳತ್ತ ಸಚಿವೆ ನಿರ್ಮಲಾ ಎದುರು ನೋಡಬೇಕಿದೆ. ಅಲ್ಲದೆ, ಮೈತ್ರಿಕೂಟದ ಅಗತ್ಯತೆ ಪೂರೈಸಲು ಸಂಪನ್ಮೂಲಗಳ ಹುಡುಕಾಟ ನಡೆಸುವ ಸವಾಲು ಕೂಡ ಅವರ ಮುಂದಿದೆ.

ಭಾರತದ ಆರ್ಥಿಕತೆಯನ್ನು 5 ಟ್ರಿಲಿಯನ್‌ ಡಾಲರ್‌ಗೆ ಹೆಚ್ಚಿಸಲು ಮತ್ತು 2047ರ ವೇಳೆಗೆ ‘ವಿಕಸಿತ ಭಾರತ’ವಾಗಿ ರೂಪಿಸಲು ಅಗತ್ಯವಿರುವ ಆರ್ಥಿಕ ಕಾರ್ಯಸೂಚಿಯನ್ನೂ ರೂಪಿಸಬೇಕಿದೆ. 

ಪ್ರಸಕ್ತ ಆರ್ಥಿಕ ವರ್ಷದಲ್ಲಿ ದೇಶದ ಜಿಡಿಪಿಯು ಶೇ 7.2ರಷ್ಟು ಪ್ರಗತಿ ಕಾಣಲಿದೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ ಅಂದಾಜಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.