ADVERTISEMENT

ಡಿ. 21, 22ಕ್ಕೆ ಜಿಎಸ್‌ಟಿ ಮಂಡಳಿ ಸಭೆ

ಪಿಟಿಐ
Published 12 ನವೆಂಬರ್ 2024, 14:43 IST
Last Updated 12 ನವೆಂಬರ್ 2024, 14:43 IST
<div class="paragraphs"><p> ಜಿಎಸ್‌ಟಿ </p></div>

ಜಿಎಸ್‌ಟಿ

   

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರ ಅಧ್ಯಕ್ಷತೆಯಲ್ಲಿ ಡಿಸೆಂಬರ್‌ 21 ಮತ್ತು 22ರಂದು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮಂಡಳಿಯ 55ನೇ ಸಭೆ ನಡೆಯಲಿದೆ.

ಇದೇ ವೇಳೆ ಕೇಂದ್ರ ಬಜೆಟ್‌ ಪೂರ್ವ ಸಮಾಲೋಚನೆಗೆ ಸಂಬಂಧಿಸಿದಂತೆ ರಾಜ್ಯಗಳ ಹಣಕಾಸು ಸಚಿವರೊಟ್ಟಿಗೆ ಅವರು ಸಭೆ ಕೂಡ ನಡೆಸುವ ಸಾಧ್ಯತೆಯಿದೆ ಎಂದು ಹಣಕಾಸು ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ADVERTISEMENT

ಸಂಸತ್‌ನಲ್ಲಿ ಮುಂದಿನ ವರ್ಷದ ಫೆಬ್ರುವರಿ 1ರಂದು 2025–26ನೇ ಸಾಲಿನ ಬಜೆಟ್‌ ಮಂಡನೆಯಾಗಲಿದೆ. ಇದಕ್ಕೆ ಪೂರ್ವಭಾವಿಯಾಗಿ ನಡೆಯುವ ಸಭೆಯಲ್ಲಿ ರಾಜ್ಯಗಳ ಹಣಕಾಸು ಸಚಿವರು ಶಿಫಾರಸುಗಳನ್ನು ಮಂಡಿಸಲಿದ್ದಾರೆ.

ಹಿರಿಯ ನಾಗರಿಕರಿಗೆ ವಿನಾಯಿತಿ?:

ಆರೋಗ್ಯ ಮತ್ತು ಜೀವ ವಿಮೆ ಕಂತುಗಳ ಮೇಲೆ ವಿಧಿಸುವ ಶೇ 18ರಷ್ಟು ಜಿಎಸ್‌ಟಿಗೆ ವಿನಾಯಿತಿ ನೀಡಬೇಕು ಅಥವಾ ಕಡಿಮೆಗೊಳಿಸಬೇಕು ಎಂಬ ಒತ್ತಾಯ ಕೇಳಿಬಂದಿತ್ತು. ಈ ಬಗ್ಗೆ ಪರಿಶೀಲಿಸುವಂತೆ ಮಂಡಳಿಯು 13 ಸಚಿವರ ಸಮಿತಿ ರಚಿಸಿತ್ತು.

ಕಳೆದ ತಿಂಗಳು ನಡೆದ ಈ ಸಮಿತಿ ಸಭೆಯು ಟರ್ಮ್‌ ಲೈಫ್ ಇನ್ಶೂರೆನ್ಸ್ (ಅವಧಿ ವಿಮೆ) ಮತ್ತು ಹಿರಿಯ ನಾಗರಿಕರ ಆರೋಗ್ಯ ವಿಮೆ ಕಂತಿನ ಮೇಲಿನ ತೆರಿಗೆ ಹಿಂಪಡೆಯುವ ಬಗ್ಗೆ ಶಿಫಾರಸು ಮಾಡಲು ನಿರ್ಣಯಿಸಿದೆ. ವೈಯಕ್ತಿಕ ವಿಮೆದಾರರ ₹5 ಲಕ್ಷದ ಒಳಗಿರುವ ಆರೋಗ್ಯ ವಿಮೆ ಕಂತಿನ ಮೇಲೆ ತೆರಿಗೆ ವಿನಾಯಿತಿ ನೀಡುವ ಕುರಿತು ಶಿಫಾರಸು ಮಾಡಲು ತೀರ್ಮಾನಿಸಿದೆ.

ಅಲ್ಲದೆ, ಜಿಎಸ್‌ಟಿ ದರ ಸರಳೀಕರಿಸುವ ಬಗ್ಗೆ ಆರು ಸಚಿವರ ಸಮಿತಿ ರಚಿಸಲಾಗಿದೆ. ಕಳೆದ ತಿಂಗಳು ನಡೆದ ಸಭೆಯಲ್ಲಿ ಈ ಸಮಿತಿಯು ಕೆಲವು ಪದಾರ್ಥಗಳ ಮೇಲಿನ ಜಿಎಸ್‌ಟಿಯನ್ನು ಶೇ 12ರಿಂದ ಶೇ 5ಕ್ಕೆ ತಗ್ಗಿಸುವ ಬಗ್ಗೆ ಶಿಫಾರಸು ಮಾಡಿದೆ.

ಎರಡೂ ಸಮಿತಿಗಳ ಶಿಫಾರಸ್ಸಿನ ಬಗ್ಗೆ ಜಿಎಸ್‌ಟಿ ಮಂಡಳಿಯು ಈ ಸಭೆಯಲ್ಲಿ ಅಂತಿಮ ನಿರ್ಧಾರ ಪ್ರಕಟಿಸುವ ಸಾಧ್ಯತೆಯಿದೆ. ಎರಡು ದಿನ ನಿಗದಿಯಾಗಿರುವ ಸಭೆಯು ರಾಜಸ್ಥಾನದ ಜೈಸಲ್ಮೇರ್‌ ಅಥವಾ ಜೋಧಪುರದಲ್ಲಿ ನಡೆಯುವ ನಿರೀಕ್ಷೆಯಿದೆ ಎಂದು ಹೇಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.