ಬೆಂಗಳೂರು: ‘ಸಾಲದ ಮರುಪಾವತಿಯನ್ನು ಮುಂದೂಡುವುದು ಕಡಿಮೆ ಅವಧಿಯದ್ದಾಗಿರಬೇಕು ಎನ್ನುವುದರ ಪರ ನಾನಿರುತ್ತೇನೆ. ಸಮಸ್ಯೆಯನ್ನು ಬಗೆಹರಿಸಲು ಅದು ತಾತ್ಕಾಲಿಕ ಕ್ರಮವಾಗಬೇಕಷ್ಟೆ’ ಎಂದು ಆರ್‌ಬಿಐನ ಮಾಜಿ ಡೆಪ್ಯುಟಿ ಗವರ್ನರ್ ವಿರಲ್ ಆಚಾರ್ಯ ಅಭಿಪ್ರಾಯಪಟ್ಟಿದ್ದಾರೆ.
ಕೊರೊನಾ ಸೃಷ್ಟಿಸಿರುವ ಬಿಕ್ಕಟ್ಟಿನ ಕಾರಣದಿಂದಾಗಿ ವಿವಿಧ ಅವಧಿ ಸಾಲಗಳ ಮರುಪಾವತಿ (ಇಎಂಐ) ಅವಧಿಯನ್ನು ಆರು ತಿಂಗಳವರೆಗೆ ವಿಸ್ತರಿಸಲಾಗಿದ್ದು, ಅದು ಈ ತಿಂಗಳು ಅಂತ್ಯವಾಗಲಿದೆ. ಅದನ್ನು ಮತ್ತೆ ವಿಸ್ತರಿಸುವ ಬಗ್ಗೆ ಆರ್‌ಬಿಐ ಮತ್ತು ಸರ್ಕಾರದ ಮಧ್ಯೆ ಮಾತುಕತೆ ನಡೆಯುತ್ತಿದೆ. ಆದರೆ, ಸಾಲದ ಕಂತು ಮರುಪಾವತಿಗೆ ಆರು ತಿಂಗಳವರೆಗೆ ಅವಧಿ ವಿಸ್ತರಣೆ ಮಾಡಿರುವುದು ಸಾಕು ಎಂದು ಆಚಾರ್ಯ ಹೇಳಿದ್ದಾರೆ.
‘ಕಾರ್ಪೊರೇಟ್‌ಗಳು ತಮ್ಮ ಸಾಲವನ್ನು ಮರುಹೊಂದಾಣಿಕೆ ಮಾಡಿಕೊಳ್ಳಬೇಕು. ವರಮಾನ ಬರುತ್ತಿಲ್ಲ ಎಂದಾದರೆ ಸಾಲವನ್ನು ಕಡಿಮೆ ಮಾಡಿಕೊಳ್ಳಬೇಕು. ಮರುಪಾವತಿ ಅವಧಿ ಮುಂದೂಡಿಕೆಯು ನಿರ್ದಿಷ್ಟ ದಿನಾಂಕದ ಬಳಿಕ ಸ್ವಯಂಚಾಲಿತವಾಗಿ ಮುಕ್ತಾಯವಾಗುವಂತೆ ಮಾಡಬೇಕಿದೆ’ ಎಂದಿದ್ದಾರೆ.
ಆರ್‌ಬಿಐನ ಸ್ವಾಯತ್ತೆಯ ಕುರಿತು ಮಾತನಾಡಿದ ಅವರು, ‘ಕೆಲವು ವಿಷಯಗಳಿಗೆ ಸಂಬಂಧಿಸಿದಂತೆ ಆರ್‌ಬಿಐ ಕಾಯ್ದೆ ದುರ್ಬಲವಾಗಿದೆ. ನೇಮಕಾತಿ, ಸೇವಾವಧಿ ಕೊನೆಗೊಳಿಸುವುದು ಹಾಗೂ ಸೇವಾವಧಿ ಎಷ್ಟು ಎಂಬುದನ್ನು ತೀರ್ಮಾನಿಸುವ ಪ್ರಕ್ರಿಯೆಗಳಲ್ಲಿ ಸುಧಾರಣೆ ತರುವ ಮೂಲಕ ಅದನ್ನು ಬಲಪಡಿಸಬಹುದಾಗಿದೆ’ ಎಂದಿದ್ದಾರೆ.
‘ಬ್ಯಾಂಕ್‌ಗಳ ನಿಯಂತ್ರಣದ ವಿಚಾರದಲ್ಲಿ, ಖಾಸಗಿ ಅಥವಾ ಸರ್ಕಾರಿ ಯಾವುದೇ ಬ್ಯಾಂಕ್ ಆಗಿದ್ದರೂ ಕ್ರಮ ಕೈಗೊಳ್ಳಲು ಆರ್‌ಬಿಐಗೆ ಸಾಧ್ಯವಾಗುವಂತಿರಬೇಕು. ಸದ್ಯ, ಆರ್‌ಬಿಐಗೆ ಖಾಸಗಿ ಬ್ಯಾಂಕ್‌ಗಳ ಮೇಲೆ ಇರುವಂತಹ ನಿಯಂತ್ರಣ ಅಧಿಕಾರವು ಸರ್ಕಾರಿ ಬಾಂಕ್‌ಗಳ ಮೇಲೆ ಇಲ್ಲ.
‘ಕೇಂದ್ರ ಸರ್ಕಾರವು ಮಾರುಕಟ್ಟೆಯಿಂದ ಸಾಲ ಪಡೆಯುವುದಕ್ಕೆ ಬದಲಾಗಿ, ಕೇಂದ್ರೀಯ ಬ್ಯಾಂಕ್ ಬಳಿ ಇರುವ ಹೆಚ್ಚವರಿ ಮೊತ್ತವನ್ನು ವರ್ಗಾಯಿಸುವಂತೆ ಬಲವಂತ ಮಾಡುವುದು ಸರಿಯಲ್ಲ. ದಬ್ಬಾಳಿಕೆ ಮಾಡಿ ಹಣ ಪಡೆಯುವುದು ಎಂದು ಇದನ್ನು ನಾನು ಕರೆಯುತ್ತೇನೆ’ ಎಂದೂ ಅವರು ಹೇಳಿದ್ದಾರೆ.
2018ರ ಅಕ್ಟೋಬರ್‌ನಲ್ಲಿ ನಡೆದಿದ್ದ ಎ.ಡಿ. ಶ್ರಾಫ್ ಸ್ಮಾರಕ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಅವರು, ‘ಆರ್‌ಬಿಐ ಸ್ವಾತಂತ್ರ್ಯವನ್ನು ಕೇಂದ್ರ ಸರ್ಕಾರ ಗೌರವಿಸದೇ ಇದ್ದರೆ, ಇಂದಲ್ಲ ನಾಳೆ ಹಣಕಾಸು ಮಾರುಕಟ್ಟೆಯ ಆಕ್ರೋಶಕ್ಕೆ ಗುರಿಯಾಗಬೇಕಾದೀತು’ ಎಂದು ಎಚ್ಚರಿಸಿದ್ದರು. ಈ ಹೇಳಿಕೆಯು ಆರ್‌ಬಿಐ ಮತ್ತು ಕೇಂದ್ರ ಸರ್ಕಾರದ ಮಧ್ಯೆ ಇರುವ ಭಿನ್ನಾಭಿಪ್ರಾಯಗಳು ಸಾರ್ವಜನಿಕವಾಗಿ ಚರ್ಚೆಗೆ ಬರಲು ದಾರಿ ಮಾಡಿಕೊಟ್ಟಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.