ADVERTISEMENT

ನೋಟು ರದ್ದತಿ ಬಳಿಕ ನಗದು ಚಲಾವಣೆ ಶೇ 83ರಷ್ಟು ಏರಿಕೆ!

ಪಿಟಿಐ
Published 2 ಜನವರಿ 2023, 10:46 IST
Last Updated 2 ಜನವರಿ 2023, 10:46 IST
   

ನವದೆಹಲಿ: ಚಲಾವಣೆಯಲ್ಲಿದ್ದ ಶೇ 86 ರಷ್ಟು ಕರೆನ್ಸಿಯನ್ನು ರದ್ದುಗೊಳಿಸಿದ ಆರು ವರ್ಷಗಳ ಬಳಿಕ ಸಾರ್ವಜನಿಕರಲ್ಲಿರುವ ನಗದು ಮೌಲ್ಯ ದುಪ್ಪಟ್ಟಾಗಿದೆ ಎಂದು ರಿಸರ್ವ್ ಬ್ಯಾಂಕ್ ಅಂಕಿ ಅಂಶಗಳು ಹೇಳುತ್ತಿವೆ.

ರಿಸರ್ವ್ ಬ್ಯಾಂಕ್ ಅಂಕಿ ಅಂಶಗಳ ಪ್ರಕಾರ, 2022ರ ಡಿಸೆಂಬರ್ 23ರಂದು ದೇಶದಲ್ಲಿ ಚಲಾವಣೆಯಲ್ಲಿರುವ ಕರೆನ್ಸಿಯ ಮೌಲ್ಯ (ಅಥವಾ ಸಾರ್ವಜನಿಕರ ಬಳಿಯಿರುವ ನಗದು) ₹32.42 ಲಕ್ಷ ಕೋಟಿ.

ಕಪ್ಪುಹಣ ತಡೆ ಮತ್ತು ಭ್ರಷ್ಟಾಚಾರದ ವಿರುದ್ಧ ಹೋರಾಡಲು ಪ್ರಧಾನಿ ನರೇಂದ್ರ ಮೋದಿ ಹಳೆಯ ₹1,000 ಮತ್ತು 500 ರ ನೋಟುಗಳನ್ನು ನ.4, 2016 ರಂದು ನಿಷೇಧಿಸಿದ್ದರು. ಅಂದು ₹17.74 ಲಕ್ಷ ಕೋಟಿ ಮೌಲ್ಯದ ನೋಟುಗಳು ಚಲಾವಣೆಯಲ್ಲಿದ್ದವು. ನೋಟು ನಿಷೇಧದ ಬಳಿಕ ಚಲಾವಣೆಯಲ್ಲಿರುವ ನಗದು ಮೌಲ್ಯ ₹ 9 ಲಕ್ಷ ಕೋಟಿಯಷ್ಟು ಕುಸಿದಿತ್ತು.

ADVERTISEMENT

2017 ರ ಜನವರಿಗೆ ಹೋಲಿಸಿದರೆ, ಚಲಾವಣೆಯಲ್ಲಿರುವ ನಗದು 3 ಪಟ್ಟು ಏರಿಕೆ ಅಥವಾ ಶೇ 260ರಷ್ಟು ಜಿಗಿತ ಕಂಡಿದೆ. ನ.4, 2016 ರಿಂದ ಪರಿಗಣಿಸಿದರೆ ಸುಮಾರು 83 ಪ್ರತಿಶತ ಏರಿಕೆಯಾಗಿದೆ.

ನ.8, 2016 ರಂದು ಚಲಾವಣೆಯಲ್ಲಿದ್ದ ಒಟ್ಟು ₹ 15.4 ಲಕ್ಷ ಕೋಟಿ ಮೌಲ್ಯದ ನೋಟುಗಳಲ್ಲಿ ₹ 15.3 ಲಕ್ಷ ಕೋಟಿ ಮೌಲ್ಯದ ಅಥವಾ ಶೇ 99.3 ರಷ್ಟು ನೋಟುಗಳನ್ನು ಸಾರ್ವಜನಿಕರು ಹಿಂದಿರುಗಿಸಿದ್ದರು.

ನಿಷೇಧಿತ ಕರೆನ್ಸಿ ನೋಟುಗಳ ಬದಲಿಗೆ ಹೊಸ ₹500 ಮತ್ತು ₹2,000 ನೋಟುಗಳು ಚಲಾವಣೆಗೆ ಬಂದಿವೆ. ಆದರೆ, ₹ 1,000 ನೋಟು ಮರು ಚಲಾವಣೆಗೆ ಬಂದಿಲ್ಲ.

₹500 ಹಾಗೂ ₹1,000 ಮುಖಬೆಲೆಯ ನೋಟುಗಳನ್ನು ಅಮಾನ್ಯ ಮಾಡಿದ್ದ ಕೇಂದ್ರ ಸರ್ಕಾರದ ನಿರ್ಧಾರ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಗಳ ಕುರಿತ ತೀರ್ಪನ್ನು ಸುಪ್ರೀಂ ಕೋರ್ಟ್‌ ಸೋಮವಾರ ಪ್ರಕಟಿಸಿದೆ. ನೋಟು ಅಮಾನ್ಯಗೊಳಿಸಿದ ಸರ್ಕಾರದ ನಿರ್ಧಾರವನ್ನು 4:1ರ ಬಹುಮತದ ತೀರ್ಪಿನೊಂದಿಗೆ ಸುಪ್ರೀಂ ಕೋರ್ಟ್‌ ಎತ್ತಿಹಿಡಿದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.