ಬೆಂಗಳೂರು: ನಗರದ ವಿಧಾನ ಸೌಧದ ಸಭಾಂಗಣದಲ್ಲಿ ಇತ್ತೀಚೆಗೆ 165ನೇ ರಾಜ್ಯಮಟ್ಟದ ಬ್ಯಾಂಕರ್‌ಗಳ ಸಮಿತಿ (ಎಸ್‌ಎಲ್‌ಬಿಸಿ) ಸಭೆ ನಡೆಯಿತು.
ಅಧ್ಯಕ್ಷತೆವಹಿಸಿದ್ದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಮಾತನಾಡಿ, ‘ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ ಮತ್ತು ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಯಡಿ ಅರ್ಹ ಫಲಾನುಭವಿಗಳ ಹೆಸರನ್ನು ನೋಂದಣಿ ಮಾಡಿಸಲು ಇಲಾಖೆಯ ಅಧಿಕಾರಿಗಳು ಮತ್ತು ಬ್ಯಾಂಕ್‌ಗಳು ಮುಂದಾಗಬೇಕು’ ಎಂದು ಸೂಚಿಸಿದರು.
‘ಏಪ್ರಿಲ್ ಮೊದಲ ವಾರದಲ್ಲಿ 2024–25ನೇ ಸಾಲಿನ ವಾರ್ಷಿಕ ಸಾಲ ಯೋಜನೆಯನ್ನು ಪ್ರಾರಂಭಿಸಿರುವುದು ಒಳ್ಳೆಯ ಬೆಳವಣಿಗೆಯಾಗಿದೆ’ ಎಂದರು.
2023–24ನೇ ಆರ್ಥಿಕ ವರ್ಷದಲ್ಲಿ ವಾರ್ಷಿಕ ಸಾಲ ಯೋಜನೆಯು (ಎಸಿಪಿ) ಯಶಸ್ವಿಯಾಗಿದೆ. ಕೃಷಿ ಕ್ಷೇತ್ರದಲ್ಲಿ ಶೇ 104ರಷ್ಟು ಸಾಧನೆಯಾಗಿದೆ. ಆದರೆ, ಶಿಕ್ಷಣದಲ್ಲಿ ಶೇ 29ರಷ್ಟು ಮತ್ತು ವಸತಿ ವಲಯದಲ್ಲಿ ಶೇ 26ರಷ್ಟು ಮಾತ್ರ ಗುರಿ ಸಾಧನೆಯಾಗಿದೆ. ನಿರೀಕ್ಷಿತ ಗುರಿ ಸಾಧನೆಯಾಗಿಲ್ಲ. 2024-25ನೇ ಹಣಕಾಸು ವರ್ಷದಲ್ಲಿ ನಿಗದಿತ ಗುರಿ ಸಾಧಿಸಬೇಕು ಎಂದು ಸೂಚಿಸಿದರು.
ಮಾರ್ಚ್ ತ್ರೈಮಾಸಿಕದಲ್ಲಿ ಬ್ಯಾಂಕ್‌ಗಳು ಶೇ 78.19ರಷ್ಟು ಕ್ರೆಡಿಟ್ ಠೇವಣಿ ಅನುಪಾತ ಸಾಧಿಸಿರುವುದು ಶ್ಲಾಘನೀಯ ಎಂದರು.
ಆರ್‌ಬಿಐನ ಪ್ರಾದೇಶಿಕ ನಿರ್ದೇಶಕಿ ಸೋನಾಲಿ ಸೆನ್ ಗುಪ್ತ, ನಬಾರ್ಡ್‌ನ ಮುಖ್ಯ ಪ್ರಧಾನ ವ್ಯವಸ್ಥಾಪಕ ಟಿ. ರಮೇಶ್, ಕೆನರಾ ಬ್ಯಾಂಕ್‌ನ ಕಾರ್ಯ ನಿರ್ವಾಹಕ ನಿರ್ದೇಶಕ ಭವೇಂದ್ರ ಕುಮಾರ್, ಎಸ್‌ಎಲ್‌ಬಿಸಿ ಸಂಚಾಲಕ ಕೆ.ಜೆ. ಶ್ರೀಕಾಂತ್ ಸೇರಿದಂತೆ ಎಲ್ಲಾ ಬ್ಯಾಂಕ್‌ಗಳ ರಾಜ್ಯ ನಿಯಂತ್ರಣ ಮುಖ್ಯಸ್ಥರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.