ADVERTISEMENT

ಜಿಡಿಪಿ ಕುಸಿತಕ್ಕೆ ಸರ್ಕಾರಿ ವೆಚ್ಚ ಕಡಿಮೆ ಕಾರಣ: ಶಕ್ತಿಕಾಂತ ದಾಸ್‌

ಪಿಟಿಐ
Published 31 ಆಗಸ್ಟ್ 2024, 14:37 IST
Last Updated 31 ಆಗಸ್ಟ್ 2024, 14:37 IST
ಶಕ್ತಿಕಾಂತ ದಾಸ್‌ –ಪಿಟಿಐ ಚಿತ್ರ
ಶಕ್ತಿಕಾಂತ ದಾಸ್‌ –ಪಿಟಿಐ ಚಿತ್ರ   

ಭುವನೇಶ್ವರ: ‘2024–25ನೇ ಜೂನ್‌ ತ್ರೈಮಾಸಿಕದಲ್ಲಿ ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿತ್ತು. ಹಾಗಾಗಿ, ಸರ್ಕಾರದ ವೆಚ್ಚ ಕಡಿಮೆಯಾಗಿದ್ದರಿಂದ ಈ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆಯು 15 ತಿಂಗಳ ಕನಿಷ್ಠ ಮಟ್ಟಕ್ಕೆ ದಾಖಲಾಗಿದೆ’ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ನ ಗವರ್ನರ್‌ ಶಕ್ತಿಕಾಂತ ದಾಸ್‌ ಶನಿವಾರ ತಿಳಿಸಿದ್ದಾರೆ.

ಜೂನ್‌ ತ್ರೈಮಾಸಿಕದಲ್ಲಿ ಜಿಡಿಪಿಯು ಶೇ 7.1ರಷ್ಟು ಪ್ರಗತಿ ಕಾಣಲಿದೆ ಎಂದು ಆರ್‌ಬಿಐ ಅಂದಾಜಿಸಿತ್ತು. ರಾಷ್ಟ್ರೀಯ ಸಾಂಖ್ಯಿಕ ಕಚೇರಿ (ಎನ್‌ಎಸ್‌ಒ) ಪ್ರಕಟಿಸಿರುವ ವರದಿ ಪ್ರಕಾರ ಇಳಿಕೆಯಾಗಿದೆ ಎಂದು ಹೇಳಿದ್ದಾರೆ.

ಸರಕು ಮತ್ತು ಸೇವೆ ವೆಚ್ಚ, ಹೂಡಿಕೆ, ತಯಾರಿಕೆ, ಸೇವಾ ಮತ್ತು ನಿರ್ಮಾಣ ವಲಯದ ಪ್ರಗತಿಯು ಶೇ 7ಕ್ಕಿಂತಲೂ ಹೆಚ್ಚಿದೆ ಎಂದು ತಿಳಿಸಿದ್ದಾರೆ.

ADVERTISEMENT

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವೆಚ್ಚದ ಪ್ರಮಾಣದಲ್ಲಿ ಇಳಿಕೆಯಾಗಿದೆ. ಕೃಷಿ ವಲಯದ ಬೆಳವಣಿಗೆಯು ಕಡಿಮೆಯಾಗಿದೆ. ಇದು ಜಿಡಿಪಿ ಪ್ರಗತಿ ಮೇಲೆ ಪರಿಣಾಮ ಬೀರಿದೆ ಎಂದು ಹೇಳಿದ್ದಾರೆ.

‘ಮುಂಬರುವ ತ್ರೈಮಾಸಿಕಗಳಲ್ಲಿ ಸರ್ಕಾರದ ವೆಚ್ಚ ಪ್ರಮಾಣದಲ್ಲಿ ಏರಿಕೆಯಾಗಲಿದ್ದು, ಜಿಡಿಪಿ ಬೆಳವಣಿಗೆಗೆ ನೆರವಾಗಲಿದೆ’ ಎಂದು ಹೇಳಿದ್ದಾರೆ.

ಏಪ್ರಿಲ್‌–ಜೂನ್‌ ಅವಧಿಯಲ್ಲಿ ಕೃಷಿ ವಲಯದ ಬೆಳವಣಿಗೆಯು ಶೇ 2ರಷ್ಟು ದಾಖಲಾಗಿದೆ. ಸದ್ಯ ದೇಶದ ಕೆಲವು ಪ್ರದೇಶದ ಹೊರತುಪಡಿಸಿದರೆ ಉಳಿದೆಡೆ ಮುಂಗಾರು ಮಳೆ ಉತ್ತಮವಾಗಿ ಸುರಿದಿದೆ. ಹಾಗಾಗಿ, ಕೃಷಿ ವಲಯವು ಬೆಳವಣಿಗೆ ಮೇಲೆ ನಿರೀಕ್ಷೆ ಹೆಚ್ಚಿದೆ ಎಂದು ತಿಳಿಸಿದ್ದಾರೆ. 

ಸರ್ಕಾರದ ವೆಚ್ಚ ಮತ್ತು ಕೃಷಿ ವಲಯವು ದೃಢವಾದ ಬೆಳವಣಿಗೆ ದಾಖಲಿಸುವ ಭರವಸೆಯಿದೆ. ಮುಂಬರುವ ತ್ರೈಮಾಸಿಕಗಳಲ್ಲಿ ಜಿಡಿಪಿ ಪ್ರಗತಿ ಸದೃಢವಾಗಲಿದೆ. 2024–25ನೇ ಆರ್ಥಿಕ ವರ್ಷದಲ್ಲಿ ಜಿಡಿಪಿ ಶೇ 7.2ರಷ್ಟು ಪ್ರಗತಿ ಕಾಣಲಿದೆ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.