ADVERTISEMENT

ಹೆಸರು ಖರೀದಿಗೆ ಸಾಫ್ಟ್‌ವೇರ್‌ ಕಂಟಕ

ಕೇಂದ್ರ ಪ್ರಾರಂಭವಾದರೂ ಬೆಳೆಗಾರರಿಗೆ ಲಭಿಸದ ಬೆಂಬಲ ಬೆಲೆ ಪ್ರಯೋಜನ

ಜೋಮನ್ ವರ್ಗಿಸ್
Published 6 ಸೆಪ್ಟೆಂಬರ್ 2018, 19:30 IST
Last Updated 6 ಸೆಪ್ಟೆಂಬರ್ 2018, 19:30 IST
ಗದಗ ಎಪಿಎಂಸಿಗೆ ಗುರುವಾರ ರೈತರು ಮಾರಾಟಕ್ಕೆ ತಂದಿದ್ದ ಹೆಸರು ಕಾಳನ್ನು ವ್ಯಾಪಾರಿಯೊಬ್ಬರು ಬೊಗಸೆಯಲ್ಲಿ ಹಿಡಿದು ಗುಣಮಟ್ಟ ಪರಿಶೀಲಿಸಿದರು
ಗದಗ ಎಪಿಎಂಸಿಗೆ ಗುರುವಾರ ರೈತರು ಮಾರಾಟಕ್ಕೆ ತಂದಿದ್ದ ಹೆಸರು ಕಾಳನ್ನು ವ್ಯಾಪಾರಿಯೊಬ್ಬರು ಬೊಗಸೆಯಲ್ಲಿ ಹಿಡಿದು ಗುಣಮಟ್ಟ ಪರಿಶೀಲಿಸಿದರು   

ಗದಗ: ಉತ್ತರ ಕರ್ನಾಟಕದ ಏಳು ಜಿಲ್ಲೆಗಳಲ್ಲಿ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಯೋಜನೆಯಡಿ ಹೆಸರು ಖರೀದಿ ಕೇಂದ್ರಗಳು ಆರಂಭವಾಗಿ ಒಂದು ವಾರ ಕಳೆದಿದೆ. ಆದರೆ, ಸಾಫ್ಟ್‌ವೇರ್‌ ಸಮಸ್ಯೆಯಿಂದಾಗಿ ಇದುವರೆಗೆ ಆನ್‌ಲೈನ್‌ ನೋಂದಣಿ ಪ್ರಕ್ರಿಯೆ ಆರಂಭವಾಗಿಲ್ಲ. ನೋಂದಣಿ ಮಾಡಿಕೊಳ್ಳಲು ಸೆ.9 ಕೊನೆಯ ದಿನವಾಗಿದ್ದು, ರೈತರ ಆತಂಕ ಹೆಚ್ಚಿದೆ.

ರಾಜ್ಯದಲ್ಲೇ ಅತಿ ಹೆಚ್ಚು ಪ್ರಮಾಣದಲ್ಲಿ ಹೆಸರು ಬೆಳೆಯುವ ಜಿಲ್ಲೆ ಗದಗ. ಇಲ್ಲಿ 30ಕ್ಕೂ ಹೆಚ್ಚು ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ. ಆದರೆ, ಒಂದೇ ಒಂದು ಕೇಂದ್ರದಲ್ಲೂ ಇದುವರೆಗೆ ನೋಂದಣಿ ಆಗಿಲ್ಲ. ನಿತ್ಯ ಈ ಕೇಂದ್ರಗಳಿಗೆ ಎಡತಾಕುತ್ತಿರುವ ನೂರಾರು ರೈತರು ಪಹಣಿ, ಬೆಳೆ ದೃಢೀಕರಣ ಪತ್ರ, ಆಧಾರ್‌ ಕಾರ್ಡ್‌ನ ನಕಲು ಪ್ರತಿ ಕೊಟ್ಟು ತಮ್ಮ ಹೆಸರನ್ನಷ್ಟೇ ಪುಸ್ತಕದಲ್ಲಿ ಬರೆಯಿಸಿ, ಚೀಟಿ ಪಡೆದುಕೊಂಡು ಹೋಗುತ್ತಿದ್ದಾರೆ.

‘ನಾಫೆಡ್‌’, ಇ–ಸಮೃದ್ಧಿ ತಂತ್ರಾಂಶದ ಯೂಸರ್‌ ನೇಮ್‌ ಮತ್ತು ಪಾಸ್‌ವರ್ಡ್‌ ಕೊಟ್ಟಿಲ್ಲ. ಹೀಗಾಗಿ ಜಿಲ್ಲೆಯಲ್ಲಿ ಖರೀದಿ ಕೇಂದ್ರ ತೆರೆಯಲಾಗಿದ್ದರೂ ರೈತರ ನೋಂದಣಿ ಸಾಧ್ಯವಾಗುತ್ತಿಲ್ಲ. ಕಳೆದೊಂದು ವಾರದಲ್ಲಿ 3 ಸಾವಿರಕ್ಕಿಂತ ಹೆಚ್ಚಿನ ರೈತರು ಖರೀದಿ ಕೇಂದ್ರಗಳಿಗೆ ಬಂದು ತಮ್ಮ ಹೆಸರು ಬರೆಸಿದ್ದಾರೆ’ ಎಂದು ಸಹಕಾರ ಮಹಾಮಂಡಳದ ಜಿಲ್ಲಾ ವ್ಯವಸ್ಥಾಪಕ ಶ್ರೀಕಾಂತ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ರಾಜ್ಯದಿಂದ ಬೆಂಬಲ ಬೆಲೆಯಡಿ 23,250 ಟನ್‌ಗಳಷ್ಟು ಹೆಸರು ಕಾಳು ಖರೀದಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಗದಗ, ಧಾರವಾಡ, ಕಲಬುರ್ಗಿ, ಬೆಳಗಾವಿ, ಬಾಗಲಕೋಟೆ, ಯಾದಗಿರಿ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಖರೀದಿ ಕೇಂದ್ರಗಳೂ ಪ್ರಾರಂಭವಾಗಿವೆ. ರಾಜ್ಯದಲ್ಲಿ ಸಹಕಾರ ಮಹಾಮಂಡಳ ಈ ಖರೀದಿ ಪ್ರಕ್ರಿಯೆಯ ಮಧ್ಯವರ್ತಿ ಸಂಸ್ಥೆಯಾಗಿದೆ.

ಇ–ಸಮೃದ್ಧಿ: ರೈತರಿಂದ ಹೆಸರು ಕಾಳು ಖರೀದಿಸುವಾಗ ಆನ್‌ಲೈನ್‌ನಲ್ಲಿ ಅವರ ಹೆಸರು, ಜಮೀನು ವಿವರ ನೋಂದಣಿ ಮಾಡಿಕೊಳ್ಳಲು, ರಾಷ್ಟ್ರೀಯ ಕೃಷಿ ಸಹಕಾರಿ ಮಾರುಕಟ್ಟೆ ಒಕ್ಕೂಟ (ನಾಫೆಡ್), ‘ಇ–ಸಮೃದ್ಧಿ’ ಎಂಬ ಮೊಬೈಲ್‌ ಅಪ್ಲಿಕೇಷನ್‌ ಅಭಿವೃದ್ಧಿಪಡಿಸಿದೆ.

ಖರೀದಿ ಕೇಂದ್ರಗಳಲ್ಲಿನ ಸಿಬ್ಬಂದಿ ಈ ಅಪ್ಲಿಕೇಷನ್‌ ತೆರೆದು, ರೈತರ ವಿವರ ನಮೂದಿಸುತ್ತಾರೆ. ಇದರಿಂದ ಹೆಸರು ಮಾರಾಟದ ಮೊತ್ತವು ಬೆಳೆಗಾರರ ಆಧಾರ್‌ ಜೋಡಿಸಿದ ಬ್ಯಾಂಕ್‌ ಖಾತೆಗೆ ನೇರವಾಗಿ ಮೂರು ದಿನಗಳಲ್ಲಿ ಪಾವತಿ ಆಗುತ್ತದೆ.

ಅವಧಿ ವಿಸ್ತರಿಸಲು ‘ನಾಫೆಡ್‌’ ಮನವಿ
ಹೆಸರು ಸೇರಿದಂತೆ ಮುಂಗಾರು ಹಂಗಾಮಿನ 14 ಬೆಳೆಗಳನ್ನು ರೈತರಿಂದ ಖರೀದಿಸಿ ಅದನ್ನು ವಿಲೇವಾರಿ ಮಾಡುವ ಒಟ್ಟು ಪ್ರಕ್ರಿಯೆ ಪೂರ್ಣಗೊಳಿಸಲು ‘ನಾಫೆಡ್‌’ಗೆ ಕೇಂದ್ರ ಸರ್ಕಾರ ಆರು ತಿಂಗಳು ಗಡುವು ನೀಡಿದೆ. ಆದರೆ, ಖರೀದಿ ಪ್ರಕ್ರಿಯೆ ಮುಗಿಯುವಷ್ಟರಲ್ಲೇ ನಾಲ್ಕು ತಿಂಗಳು ಕಳೆಯುತ್ತದೆ. ಇನ್ನುಳಿದ ಎರಡು ತಿಂಗಳಲ್ಲಿ, ಖರೀದಿಸಲಾದ ಉತ್ಪನ್ನವನ್ನು ವಿಲೇವಾರಿ ಮಾಡಲು ಸಾಧ್ಯವಿಲ್ಲ. ಹೀಗಾಗಿ ಈ ಅವಧಿ ವಿಸ್ತರಿಸುವಂತೆ ‘ನಾಫೆಡ್‌’ ಕೇಂದ್ರದ ಮುಂದೆ ಬೇಡಿಕೆ ಇಟ್ಟಿದೆ. ಇದಕ್ಕೆ ಕೇಂದ್ರ ಇನ್ನೂ ಅನುಮತಿ ನೀಡಿಲ್ಲ. ಈ ಹಗ್ಗಜಗ್ಗಾಟದಿಂದ ಖರೀದಿ ಪ್ರಕ್ರಿಯೆ ವಿಳಂಬ ಆಗುತ್ತಿದೆ ಎಂದು ಹೆಸರು ಹೇಳಲು ಇಚ್ಛಿಸದ ರಾಜ್ಯ ಮಾರಾಟ ಮಹಾಮಂಡಳದ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

ಬೆಲೆ ಏರಿಕೆ
ಖರೀದಿ ಕೇಂದ್ರ ಪ್ರಾರಂಭವಾದ ಬೆನ್ನಲ್ಲೆ ಮುಕ್ತ ಮಾರುಕಟ್ಟೆಯಲ್ಲಿ ಹೆಸರು ಕಾಳಿನ ಬೆಲೆಯಲ್ಲಿ ತುಸು ಏರಿಕೆಯಾಗಿದೆ. ಗುರುವಾರ ಗದಗ ಎಪಿಎಂಸಿಗೆ 2,807 ಕ್ವಿಂಟಲ್‌ ಹೆಸರು ಆವಕವಾಗಿದ್ದು, ವರ್ತಕರು ರಫ್ತು ಗುಣಮಟ್ಟದ ಹೆಸರು ಕಾಳನ್ನು ಕ್ವಿಂಟಲ್‌ಗೆ ಗರಿಷ್ಠ ₹6,369 ದರ ನೀಡಿ ಖರೀದಿಸಿದರು.

*
ನೋಂದಣಿ ಅವಧಿ ವಿಸ್ತರಿಸಬೇಕು. ತಂತ್ರಾಂಶ ಸಮಸ್ಯೆ ಇತ್ಯರ್ಥಪಡಿಸುವಂತೆ ಜಿಲ್ಲಾಧಿಕಾರಿ ಮೂಲಕ ‘ನಾಫೆಡ್‌’ಗೆ ಮನವಿ ಮಾಡಿಕೊಳ್ಳಲಾಗಿದೆ.
-ಶ್ರೀಕಾಂತ್‌, ಜಿಲ್ಲಾ ವ್ಯವಸ್ಥಾಪಕ, ಸಹಕಾರ ಮಹಾಮಂಡಳ, ಗದಗ

*
ಈಗಾಗಲೇ ಪ್ರತಿಭಟನೆ ನಡೆಸಿದ್ದೇವೆ. ಇನ್ನು ಎರಡು ದಿನದಲ್ಲಿ ಖರೀದಿ ಕೇಂದ್ರ ಆರಂಭವಾಗದಿದ್ದರೆ ಬೀದಿಗಿಳಿದು ಹೋರಾಟ ಮಾಡುವುದು ನಿಶ್ಚಿತ.
-ವಿಠ್ಠಲ ಜಾಧವ ,ರೈತ ಸಂಘದ ನರಗುಂದ ಘಟಕದ

*
ಪ್ರತಿ ದಿನ ಖರೀದಿ ಕೇಂದ್ರಕ್ಕೆ ಅಲೆಯಲು ₹50 ಪ್ರಯಾಣ ದರ ಆಗುತ್ತಿದೆ. ಇದನ್ನು ಯಾರು ಕೊಡುತ್ತಾರೆ? ಕೂಡಲೇ ನೋಂದಣಿ, ಖರೀದಿ ಆರಂಭವಾಗಬೇಕು
– ಶಿವಾನಂದ ಗೋಲಪ್ಪನವರ, ನರಗುಂದದ ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.