ನವದೆಹಲಿ: ‘ದೇಶದ ಭೂಪ್ರದೇಶದಲ್ಲಿರುವ ಶೇ 30ರಷ್ಟು ಮಣ್ಣಿನ ಫಲವತ್ತತೆ ನಾಶವಾಗಿದೆ. ಸುಸ್ಥಿರ ಕೃಷಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಮಣ್ಣಿನ ಗುಣಮಟ್ಟದ ನಿರ್ವಹಣೆಗೆ ತುರ್ತು ಕ್ರಮಕೈಗೊಳ್ಳಬೇಕಿದೆ’ ಎಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ.
ಮಣ್ಣಿನ ಸಂರಕ್ಷಣೆ ಬಗ್ಗೆ ಮಂಗಳವಾರ ಹಮ್ಮಿಕೊಂಡಿದ್ದ ಜಾಗತಿಕ ಸಮಾವೇಶದಲ್ಲಿ ವಿಡಿಯೊ ಕಾನ್ಫರೆನ್ಸ್ ಮೂಲಕ ಮಾತನಾಡಿದ ಅವರು, ಶೂನ್ಯ ಹಸಿವು ಸೇರಿ ಸುಸ್ಥಿರ ಅಭಿವೃದ್ಧಿಯ ಗುರಿ ಸಾಧನೆಗೆ ಮಣ್ಣಿನ ಆರೋಗ್ಯವು ನಿರ್ಣಾಯಕವಾಗಿದೆ ಎಂದು ಹೇಳಿದರು.
ದೇಶದಲ್ಲಿ ಪ್ರತಿ ವರ್ಷ 330 ದಶಲಕ್ಷ ಟನ್ ಆಹಾರ ಧಾನ್ಯಗಳನ್ನು ಬೆಳೆಯಲಾಗುತ್ತದೆ. ₹4.22 ಲಕ್ಷ ಕೋಟಿ ಮೌಲ್ಯದ ಆಹಾರ ಧಾನ್ಯಗಳನ್ನು ರಫ್ತು ಮಾಡಲಾಗುತ್ತದೆ ಎಂದು ವಿವರಿಸಿದರು.
ಅತಿಯಾದ ರಸಗೊಬ್ಬರ ಬಳಕೆ, ನೈಸರ್ಗಿಕ ಸಂಪನ್ಮೂಲಗಳ ದುರ್ಬಳಕೆ ಹಾಗೂ ಮಣ್ಣಿನ ಅವೈಜ್ಞಾನಿಕ ನಿರ್ವಹಣೆಯೇ ಫಲವತ್ತತೆ ಕಳೆದುಕೊಳ್ಳಲು ಕಾರಣ ಎಂದರು.
ರೈತರಿಗೆ ಸಣ್ಣ ನೀರಾವರಿ, ಸಾವಯವ ಮತ್ತು ನೈಸರ್ಗಿಕ ಕೃಷಿ ವಿಧಾನಕ್ಕೆ ಅನುಕೂಲ ಕಲ್ಪಿಸಲು 22 ಕೋಟಿ ಮಣ್ಣಿನ ಆರೋಗ್ಯ ಕಾರ್ಡ್ ವಿತರಿಸಲಾಗಿದೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.