ADVERTISEMENT

ಭಾರತದ ಜಿಡಿಪಿ ಮುನ್ನೋಟ ಬದಲಿಸದ ಎಸ್‌ ಆ್ಯಂಡ್‌ ಪಿ ಗ್ಲೋಬಲ್‌ ರೇಟಿಂಗ್ಸ್‌ ಸಂಸ್ಥೆ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2023, 12:28 IST
Last Updated 25 ಸೆಪ್ಟೆಂಬರ್ 2023, 12:28 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಎಸ್‌ ಆ್ಯಂಡ್‌ ಪಿ ಗ್ಲೋಬಲ್‌ ರೇಟಿಂಗ್ಸ್‌ ಸಂಸ್ಥೆಯು ಭಾರತದ ಜಿಡಿಪಿ ಬೆಳವಣಿಗೆ ಮುನ್ನೋಟದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಪ್ರಸಕ್ತ ಹಣಕಾಸು ವರ್ಷಕ್ಕೆ ಜಿಡಿಪಿ ಬೆಳವಣಿಗೆ ಪ್ರಮಾಣವು ಈಗಾಗಲೇ ಅಂದಾಜು ಮಾಡಿರುವಂತೆ ಶೇ 6ರಷ್ಟು ಆಗಲಿದೆ ಎಂದು ಹೇಳಿದೆ.

ಜಾಗತಿಕ ಆರ್ಥಿಕತೆಯು ಮಂದಗತಿಯಲ್ಲಿ ಇರುವುದು, ಮುಂಗಾರು ಮಳೆಯು ವಾಡಿಕೆಗಿಂತಲೂ ಕಡಿಮೆ ಆಗಿರುವುದು ಹಾಗೂ ಬಡ್ಡಿದರ ಏರಿಕೆಯ ಪ್ರಯೋಜನವು ಬಹಳ ತಡವಾಗಿ ಪ್ರಭಾವ ಬೀರಿರುವ ಕಾರಣಗಳಿಂದಾಗಿ ಜಿಡಿಪಿ ಬೆಳವಣಿಗೆಯನ್ನು ಬದಲಿಸದೇ ಇರಲು ನಿರ್ಧರಿಸಿರುವುದಾಗಿ ಹೇಳಿದೆ.

ಈ ವರ್ಷ ಆರ್ಥಿಕ ಬೆಳವಣಿಗೆಯು 2022ರಲ್ಲಿ ಆಗಿದ್ದಕ್ಕಿಂತಲೂ ಕಡಿಮೆ ಆಗಲಿದೆ. ಆದರೆ, ಒಟ್ಟಾರೆ ಮುನ್ನೋಟವು ಅನುಕೂಲಕರವಾಗಿ ಇರಲಿದೆ ಎಂದು ಏಷ್ಯಾ ಪೆಸಿಫಿಕ್‌ನ 2023ರ ನಾಲ್ಕನೇ ತ್ರೈಮಾಸಿಕದ ಆರ್ಥಿಕ ಮುನ್ನೋಟದ ವರದಿಯಲ್ಲಿ ತಿಳಿಸಿದೆ. ಭಾರತದ ಆರ್ಥಿಕತೆಯು 2022–23ರಲ್ಲಿ ಶೇ 7.2ರಷ್ಟು ಬೆಳವಣಿಗೆ ಕಂಡಿತ್ತು.

ADVERTISEMENT

2024–25 ಮತ್ತು 2025–26ರಲ್ಲಿ ಭಾರತದ ಆರ್ಥಿಕತೆಯು ಶೇ 6.9ರಷ್ಟು ಬೆಳವಣಿಗೆ ಕಾಣಲಿದೆ ಎನ್ನುವ ತನ್ನ ಈ ಹಿಂದಿನ ಅಂದಾಜನ್ನು ಸಹ ಸಂಸ್ಥೆಯು ಬದಲಿಸಿಲ್ಲ.

ಈಚೆಗೆ ತರಕಾರಿಗಳ ಬೆಲೆ ಏರಿಕೆಯಿಂದ ಆಗಿರುವ ಹಣದುಬ್ಬರವು ತಾತ್ಕಾಲಿಕ ಆಗಿದೆ ಎಂದು ಅದು ಹೇಳಿದೆ. ಆದರೆ, ಪ್ರಸಕ್ತ ಹಣಕಾಸು ವರ್ಷಕ್ಕೆ ಚಿಲ್ಲರೆ ಹಣದುಬ್ಬರವನ್ನು ಶೇ 5 ರಿಂದ ಶೇ 5.5ಕ್ಕೆ ಏರಿಕೆ ಮಾಡಿದೆ. ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲ ದರ ಏರಿಕೆ ಆಗಿರುವುದನ್ನು ಗಮದನಲ್ಲಿ ಇಟ್ಟಕೊಂಡು ಹಣದುಬ್ಬರದ ಮುನ್ನೋಟದಲ್ಲಿ ಈ ಪರಿಷ್ಕರಣೆ ಮಾಡಿದೆ.

ಜಿಡಿಪಿ ಬೆಳವಣಿಗೆ ಅಂದಾಜು (2023–24ಕ್ಕೆ)

ಎಸ್‌ ಆ್ಯಂಡ್‌ ಪಿ;6%

ಇಂಡಿಯಾ ರೇಟೀಂಗ್ಸ್‌; 6.2%

ಎಡಿಬಿ;6.3%

ಮೂಡಿಸ್‌;6.7%

ಆರ್‌ಬಿಐ;6.5%

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.