ನವದೆಹಲಿ: 2024–25ನೇ ಆರ್ಥಿಕ ವರ್ಷದಲ್ಲಿ ಭಾರತದ ಜಿಡಿಪಿಯು ಶೇ 6.8ರಷ್ಟು ಪ್ರಗತಿ ಕಾಣಲಿದೆ. ಅಕ್ಟೋಬರ್‌ನಲ್ಲಿ ನಡೆಯಲಿರುವ ಹಣಕಾಸು ನೀತಿ ಸಮಿತಿ ಸಭೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ರೆಪೊ ದರ ಕಡಿತಗೊಳಿಸುವ ಸಾಧ್ಯತೆಯಿದೆ ಎಂದು ಜಾಗತಿಕ ಕ್ರೆಡಿಟ್ ರೇಟಿಂಗ್ಸ್ ಸಂಸ್ಥೆ ಎಸ್ ಆ್ಯಂಡ್ ಪಿ ಗ್ಲೋಬಲ್ ತಿಳಿಸಿದೆ.
ಮಂಗಳವಾರ ಏಷ್ಯಾ ಪ್ಯಾಸಿಫಿಕ್ ಆರ್ಥಿಕ ಮುನ್ನೋಟ ಕುರಿತ ವರದಿಯನ್ನು ಬಿಡುಗಡೆ ಮಾಡಿದೆ. 2025–26ನೇ ಆರ್ಥಿಕ ವರ್ಷದಲ್ಲಿ ಜಿಡಿಪಿಯು ಶೇ 6.9ರಷ್ಟು ಬೆಳವಣಿಗೆ ಸಾಧಿಸಲಿದೆ ಎಂದು ಅಂದಾಜಿಸಿದೆ.
ಚಿಲ್ಲರೆ ಹಣದುಬ್ಬರವನ್ನು ಶೇ 4ರ ಮಿತಿಯೊಳಗೆ ತರಲು ಆರ್‌ಬಿಐ ಹಲವು ಕ್ರಮಕೈಗೊಂಡಿದೆ. ಆರ್ಥಿಕ ಸ್ಥಿರತೆಯು ಇದಕ್ಕೆ ನೆರವಾಗಲಿದೆ ಎಂದು ಹೇಳಿದೆ.
ಮೂಲಸೌಕರ್ಯ ಅಭಿವೃದ್ಧಿಗೆ ಜುಲೈನಲ್ಲಿ ಮಂಡಿಸಿದ್ದ ಬಜೆಟ್‌ನಲ್ಲಿ ಒತ್ತು ನೀಡಿದ್ದು, ಒಟ್ಟು ₹11.11 ಲಕ್ಷ ಕೋಟಿ ನಿಗದಿಪಡಿಸಿದೆ. ಇದು ಆರ್ಥಿಕತೆಯ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದು ಹೇಳಿದೆ.
‘ಆಹಾರ ಹಣದುಬ್ಬರ ಏರಿಕೆಯು ರೆಪೊ ದರ ಕಡಿತಕ್ಕೆ ಅಡ್ಡಿಯಾಗಿದೆ ಎಂದು ಆರ್‌ಬಿಐ ತಿಳಿಸಿದೆ. ಆದರೆ, ಆಹಾರ ಪದಾರ್ಥಗಳ ಬೆಲೆ ಏರಿಕೆಯು ಮುಂದುವರಿದರೆ ನಿಗದಿತ ಮಿತಿಯೊಳಗೆ ಹಣದುಬ್ಬರವನ್ನು ಕಾಯ್ದುಕೊಳ್ಳುವುದು ಕಷ್ಟಕರವಾಗಲಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಎರಡು ಹಂತದಲ್ಲಿ ರೆಪೊ ದರ ಕಡಿತಗೊಳಿಸುವ ಸಾಧ್ಯತೆಯಿದೆ’ ಎಂದು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.