ADVERTISEMENT

ಭಾರತದ ಆರ್ಥಿಕ ಮುನ್ನೋಟದ ರೇಟಿಂಗ್ಸ್‌: ಎಸ್‌ಆ್ಯಂಡ್‌ಪಿಯಿಂದ ಪರಿಷ್ಕರಣೆ

ಪಿಟಿಐ
Published 29 ಮೇ 2024, 14:35 IST
Last Updated 29 ಮೇ 2024, 14:35 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಮುಂಬೈ: ಜಾಗತಿಕ ಮಾನದಂಡ ಸಂಸ್ಥೆಯಾದ ಎಸ್‌ಆ್ಯಂಡ್‌ಪಿ ಗ್ಲೋಬಲ್‌ ರೇಟಿಂಗ್ಸ್‌, 14 ವರ್ಷಗಳ ಬಳಿಕ ಭಾರತದ ಆರ್ಥಿಕ ಮುನ್ನೋಟದ ರೇಟಿಂಗ್ಸ್‌ ಅನ್ನು ಪರಿಷ್ಕರಿಸಿದ್ದು, ‘ಧನಾತ್ಮಕ’ ಸ್ಥಾನ ನೀಡಿದೆ.  

ಕೇಂದ್ರ ಸರ್ಕಾರದ ವಿತ್ತೀಯ ನಿರ್ವಹಣೆಗೆ ಮೆಚ್ಚುಗೆ ಸೂಚಿಸಿದೆ. ಕಳೆದ ಐದು ವರ್ಷಗಳ ಅವಧಿಯಲ್ಲಿನ ಆರ್ಥಿಕತೆಯ ಬೆಳವಣಿಗೆ, ಸಾರ್ವಜನಿಕ ವೆಚ್ಚದಲ್ಲಿನ ಸುಧಾರಣೆ ಹಾಗೂ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ಹೊಸ ಸರ್ಕಾರವು ಹಣಕಾಸು ನೀತಿ ಮತ್ತು ಸುಧಾರಣೆ ಕಾಯ್ದುಕೊಳ್ಳಲಿದೆ ಎಂಬ ಭರವಸೆಯೊಂದಿಗೆ ರೇಟಿಂಗ್ಸ್‌ನಲ್ಲಿ ಬದಲಾವಣೆ ಮಾಡಿದೆ. 

ADVERTISEMENT

ಕೇಂದ್ರ ಸರ್ಕಾರಕ್ಕೆ ₹2.11 ಲಕ್ಷ ಕೋಟಿ ಲಾಭಾಂಶ ನೀಡಲು ಭಾರತೀಯ ರಿಸರ್ವ್‌ ಬ್ಯಾಂಕ್‌ ಒಪ್ಪಿಗೆ ನೀಡಿದ ಒಂದು ವಾರದ ಬಳಿಕ ಈ ವರದಿ ಬಿಡುಗಡೆಯಾಗಿದೆ. 

‘ವಿತ್ತೀಯ ಶಿಸ್ತು ಕಾಯ್ದುಕೊಳ್ಳುವಲ್ಲಿ ಭಾರತಕ್ಕೆ ದೀರ್ಘಕಾಲದಿಂದ ‘ಬಿಬಿಬಿ ಮೈನಸ್‌’ (ನಕಾರಾತ್ಮಕ) ರೇಟಿಂಗ್ಸ್‌ ನೀಡಲಾಗಿತ್ತು. 2010ರಲ್ಲಿ ಇದನ್ನು ಪರಿಷ್ಕರಿಸಿ ‘ಎ–3’ (ಸ್ಥಿರ) ರೇಟಿಂಗ್ಸ್‌ ನೀಡಲಾಯಿತು. ಸರ್ಕಾರದ ವೆಚ್ಚದ ಪ್ರಮಾಣದಲ್ಲಿ ಏರಿಕೆ ಹಾಗೂ ಆರ್ಥಿಕ ಸದೃಢತೆಯಿಂದಾಗಿ ಈಗ ಪರಿಷ್ಕರಿಸಲಾಗಿದೆ’ ಎಂದು ಸಂಸ್ಥೆಯು ತಿಳಿಸಿದೆ. 

‘ಸರ್ಕಾರವು ತನ್ನ ಸಾಲದ ಪ್ರಮಾಣವನ್ನು ತಗ್ಗಿಸಿಕೊಂಡು ಬಡ್ಡಿ ಹೊರೆಯನ್ನು ಕಡಿಮೆ ಮಾಡಿಕೊಳ್ಳಬೇಕಿದೆ. ಆ ಮೂಲಕ ದೇಶದ ಆರ್ಥಿಕತೆಯ ಚೇತರಿಕೆಗೆ ಮತ್ತಷ್ಟು ಬಲ ನೀಡಬೇಕಿದೆ. ಈ ನಿಟ್ಟಿನಲ್ಲಿ ಸದೃಢವಾದ ಹಣಕಾಸು ನೀತಿಗಳನ್ನು ಅಳವಡಿಸಿಕೊಂಡರೆ ಮುಂದಿನ ಎರಡು ವರ್ಷಗಳಲ್ಲಿ ಭಾರತದ ರೇಟಿಂಗ್ಸ್‌ ಅನ್ನು ಮತ್ತೆ ಪರಿಷ್ಕರಿಸಲಾಗುವುದು’ ಎಂದು ಅಮೆರಿಕ ಮೂಲದ ಈ ಸಂಸ್ಥೆ ಹೇಳಿದೆ.

ಭಾರತಕ್ಕೆ ಪ್ರಯೋಜನ ಏನು?

ದೇಶದ ಹೂಡಿಕೆ ವಲಯದಲ್ಲಿನ ಅಪಾಯದ ಸ್ಥಿತಿ ಅರಿಯಲು ಈ ರೇಟಿಂಗ್ಸ್‌ ನಿರ್ಣಾಯಕವಾಗಿದೆ. ಜೊತೆಗೆ ದೇಶದ ಸಾಲ ಮರುಪಾವತಿ ಸಾಮರ್ಥ್ಯ ಮತ್ತು ಸಾಲದ ಅರ್ಹತೆ ನಿರ್ಧರಿಸುವ ಮಾಪಕವೂ ಆಗಿದೆ. ರೇಟಿಂಗ್ಸ್‌ ಸ್ಥಿತಿಗತಿ ಆಧರಿಸಿಯೇ ಹೂಡಿಕೆದಾರರು ಬಂಡವಾಳ ತೊಡಗಿಸುತ್ತಾರೆ. ಕೋವಿಡ್‌ ಸಾಂಕ್ರಾಮಿಕದ ಬಳಿಕ ಭಾರತದ ಜಿಡಿಪಿ ಬೆಳವಣಿಗೆಯು ನಿರೀಕ್ಷೆ ಮೀರಿ ಬೆಳವಣಿಗೆ ಕಂಡಿದೆ. ಎಸ್‌ಆ್ಯಂಡ್‌ಪಿ ಗ್ಲೋಬಲ್‌ ರೇಟಿಂಗ್ಸ್‌ ಸಂಸ್ಥೆಯು 2024–25ನೇ ಆರ್ಥಿಕ ವರ್ಷದಲ್ಲಿ ಜಿಡಿಪಿಯು ಶೇ 6.8ರಷ್ಟು ಪ್ರಗತಿ ಕಾಣಲಿದೆ ಎಂದು ಅಂದಾಜಿಸಿದೆ. ಜಾಗತಿಕ ಆರ್ಥಿಕತೆಯ ನಿಧಾನಗತಿ ನಡುವೆಯೂ ಭಾರತದ ಆರ್ಥಿಕತೆಯು ವೇಗವಾಗಿ ಬೆಳೆಯುತ್ತಿದೆ ಎಂದು ಹೇಳಿದೆ. ಫಿಚ್‌ ರೇಟಿಂಗ್ಸ್‌ ಸಂಸ್ಥೆ ಹಾಗೂ ಮೂಡಿಸ್‌ ಇನ್ವೆಸ್ಟರ್ಸ್‌ ಸರ್ವಿಸಸ್‌ ಸಂಸ್ಥೆಯು ಭಾರತದ ಆರ್ಥಿಕ ಮುನ್ನೋಟವನ್ನು ‘ಸ್ಥಿರ’ ಮಟ್ಟದಲ್ಲಿಯೇ ಇರಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.