ಬೆಂಗಳೂರು: ಬೆಂಗಳೂರಿನಿಂದ ಶ್ರೀಲಂಕಾದ ರಾಜಧಾನಿ ಕೊಲಂಬೊಗೆ ಅಕ್ಟೋಬರ್ 31ರಿಂದ ಹೊಸ ವಿಮಾನ ಸೇವೆಯನ್ನು ಪ್ರಾರಂಭಿಸಲಾಗುತ್ತಿದೆ ಎಂದು ಶ್ರೀಲಂಕಾ ಏರ್‌ಲೈನ್ಸ್ ಶುಕ್ರವಾರ ತಿಳಿಸಿದೆ.
ವಾರಾಂತ್ಯದಲ್ಲಿ ಈ ನಗರಗಳ ನಡುವೆ 10 ವಿಮಾನಗಳು ಕಾರ್ಯಾಚರಣೆ ನಡೆಸಲಿವೆ. ಗುರುವಾರದಿಂದ ಶನಿವಾರದವರೆಗೆ ಕೊಲಂಬೊಗೆ ಹೊರಡಲಿರುವ ವಿಮಾನವು (ಯುಎಲ್ 1174) ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಳಿಗ್ಗೆ 9.40ಕ್ಕೆ ಹೊರಡಲಿದೆ. ಕೊಲಂಬೊವನ್ನು ಬೆಳಿಗ್ಗೆ 11.10ಕ್ಕೆ ತಲುಪಲಿದೆ.
ಕೊಲಂಬೊದಿಂದ ಬೆಳಿಗ್ಗೆ 7.20ಕ್ಕೆ ಹೊರಡಲಿರುವ ವಿಮಾನವು (ಯುಎಲ್ 1173) ಬೆಂಗಳೂರಿಗೆ ಬೆಳಿಗ್ಗೆ 8.40ಕ್ಕೆ ತಲುಪಲಿದೆ. ಈ ವಿಮಾನ ಸೇವೆ ಸೇರ್ಪಡೆಯ ಜೊತೆಗೆ ದೈನಂದಿನ ಸೇವೆಗಳು ಎಂದಿನಂತೆ ಇರಲಿವೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.
ದೆಹಲಿ, ಮುಂಬೈ, ಹೈದರಾಬಾದ್, ಕೊಚ್ಚಿನ್, ತಿರುವನಂತಪುರ, ಚೆನ್ನೈ, ತಿರುಚ್ಚಿ, ಮಧುರೈ ಮತ್ತು ಬೆಂಗಳೂರಿನಿಂದ ಶ್ರೀಲಂಕಾಕ್ಕೆ ವಿಮಾನ ಸೇವೆ ಇದೆ. ಪ್ರತಿ ವಾರ ಭಾರತ ಮತ್ತು ಶ್ರೀಲಂಕಾದ ನಡುವೆ 90 ವಿಮಾನಗಳು ಕಾರ್ಯಾಚರಣೆ ನಡೆಸುತ್ತವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.