ಚೆನ್ನೈ: ಪ್ರಸಕ್ತ ಸಾಲಿನಡಿ ತಮಿಳುನಾಡು, ಕರ್ನಾಟಕ, ಮಹಾರಾಷ್ಟ್ರ ಹಾಗೂ ಆಂಧ್ರಪ್ರದೇಶದ 200 ಹಳ್ಳಿಗಳಿಗೆ ಗುಬ್ಬಚ್ಚಿಗಳ ಸಂರಕ್ಷಣಾ ಕಾರ್ಯಕ್ರಮವನ್ನು ವಿಸ್ತರಿಸಲು ಟಿವಿಎಸ್ ಮೋಟರ್ ಕಂಪನಿಯ ಶ್ರೀನಿವಾಸನ್ ಸರ್ವಿಸಸ್ ಟ್ರಸ್ಟ್ (ಎಸ್‌ಎಸ್‌ಟಿ) ನಿರ್ಧರಿಸಿದೆ.
ಕಳೆದ ವರ್ಷ ಟ್ರಸ್ಟ್‌ನಿಂದ 100 ಗ್ರಾಮಗಳಲ್ಲಿ ಸಂರಕ್ಷಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಮಾರ್ಚ್ 20ರಂದು ವಿಶ್ವ ಗುಬ್ಬಚ್ಚಿ ದಿನವಾಗಿದೆ. ಹಾಗಾಗಿ, ಅವುಗಳ ಉಳಿವಿಗಾಗಿ ಈ ಕಾರ್ಯಕ್ರಮವನ್ನು ವಿಸ್ತರಿಸಲಾಗುತ್ತಿದೆ ಎಂದು ತಿಳಿಸಿದೆ.
ಸಂರಕ್ಷಣೆ ಸಂಬಂಧ ಗ್ರಾಮಗಳಲ್ಲಿ ಸಮುದಾಯ ಸಭೆಗಳನ್ನು ನಡೆಸಲಾಗುತ್ತದೆ. ಸ್ಥಳೀಯ ಸ್ವಯಂ ಸೇವಕರು ಮತ್ತು ಸಮುದಾಯದ ಸದಸ್ಯರ ಮೂಲಕ ಸಂರಕ್ಷಣೆ ಬಗ್ಗೆ ಜನರಲ್ಲಿ ಅರಿವು ಮೂಡಿಸಲಾಗುವುದು ಎಂದು ಮಾಹಿತಿ ನೀಡಿದೆ.
‘ಗುಬ್ಬಿ ಸಂಕುಲ ಉಳಿಸುವಲ್ಲಿ ಸಮುದಾಯದ ಪಾತ್ರ ಹಿರಿದು. ಹಾಗಾಗಿಯೇ, ಗ್ರಾಮೀಣ ಸಮುದಾಯದ ಸಬಲೀಕರಣದ ಮೂಲಕ ದೀರ್ಘಕಾಲೀನ ಸಂರಕ್ಷಣಾ ಕ್ರಮಗಳನ್ನು ಕೈಗೊಳ್ಳಲು ತೀರ್ಮಾನಿಸಲಾಗಿದೆ. ಜೀವವೈವಿಧ್ಯತೆ ಹಾಗೂ ಅವುಗಳ ಆವಾಸ ಸಂರಕ್ಷಣೆ ಬಗ್ಗೆ ತಳಮಟ್ಟದಲ್ಲಿ ತಿಳಿವಳಿಕೆ ಮೂಡಿಸಲಾಗುತ್ತದೆ ಎಂದು ಟ್ರಸ್ಟ್ ಅಧ್ಯಕ್ಷ ಸ್ವರಣ್ ಸಿಂಗ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.