ADVERTISEMENT

ಸಂಖ್ಯೆಯೊಂದೇ ಮಾನದಂಡ ಅಲ್ಲ: ಸಚಿವ ಅಶ್ವತ್ಥ ನಾರಾಯಣ

ನವೋದ್ಯಮಗಳ ರಾಜಧಾನಿ ಈಗ ದೆಹಲಿ: ಆರ್ಥಿಕ ಸಮೀಕ್ಷೆ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2022, 19:14 IST
Last Updated 2 ಫೆಬ್ರುವರಿ 2022, 19:14 IST

ಬೆಂಗಳೂರು: ಸಂಸತ್ತಿನಲ್ಲಿ ಸೋಮವಾರ ಮಂಡನೆಯಾಗಿರುವ ಆರ್ಥಿಕ ಸಮೀಕ್ಷೆ ವರದಿಯು, ‘ದೆಹಲಿಯು ದೇಶದ ನವೋದ್ಯಮ ರಾಜಧಾನಿ ಆಗಿದೆ’ ಎಂದು ಹೇಳಿದೆ. 2019ರ ಏಪ್ರಿಲ್‌ನಿಂದ 2021ರ ಡಿಸೆಂಬರ್‌ ನಡುವಿನ ಅವಧಿಯಲ್ಲಿ ದೆಹಲಿಯಲ್ಲಿ ಐದು ಸಾವಿರಕ್ಕಿಂತ ಹೆಚ್ಚಿನ ನವೋದ್ಯಮಗಳ ನೋಂದಣಿ ಆಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಆದರೆ, ಇದೇ ಅವಧಿಯಲ್ಲಿ ಬೆಂಗಳೂರಿನಲ್ಲಿ 4,514 ನವೋದ್ಯಮಗಳ ನೋಂದಣಿ ಆಗಿದೆ ಎಂದು ಸಮೀಕ್ಷೆಯು ಹೇಳಿದೆ.

ಮಹಾರಾಷ್ಟ್ರದಲ್ಲಿ ಒಟ್ಟು 11,308 ನವೋದ್ಯಮಗಳು ಇದ್ದು, ಸಂಖ್ಯೆಯ ದೃಷ್ಟಿಯಲ್ಲಿ ಇದು ಅತಿಹೆಚ್ಚು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ADVERTISEMENT

ಆರ್ಥಿಕ ಸಮೀಕ್ಷೆ ವರದಿಯಲ್ಲಿ ‘ದೆಹಲಿ ನವೋದ್ಯಮಗಳ ರಾಜಧಾನಿ’ ಎಂದು ಉಲ್ಲೇಖಿಸಿರುವುದರ ವಿಚಾರವಾಗಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದ ರಾಜ್ಯ ಐ.ಟಿ., ಬಿ.ಟಿ. ಮತ್ತು ಕೌಶಲ ಅಭಿವೃದ್ಧಿ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ, ‘2019ರಿಂದ 2021ರ ನಡುವಿನ ಅವಧಿಯಲ್ಲಿ ಬೆಂಗಳೂರಿನ ನವೋದ್ಯಮಗಳಿಗೆ ಅತಿಹೆಚ್ಚಿನ ಬಂಡವಾಳ (ಅಂದಾಜು ₹ 2.29 ಲಕ್ಷ ಕೋಟಿ) ಹರಿದುಬಂದಿದೆ. ಜಾಗತಿಕ ನವೋದ್ಯಮ ವ್ಯವಸ್ಥೆ ಸೂಚ್ಯಂಕ–2021ರ ವರದಿಯ ಅನ್ವಯ, ನವೋದ್ಯಮಗಳಿಗೆ ಪೂರಕವಾಗುವ ವ್ಯವಸ್ಥೆ ಹೊಂದಿರುವ ನಗರಗಳ ಪೈಕಿ ಬೆಂಗಳೂರಿಗೆ ಜಾಗತಿಕ ಮಟ್ಟದಲ್ಲಿ 10ನೆಯ ಸ್ಥಾನ ಲಭಿಸಿದೆ. ಟಾಪ್ 10 ನಗರಗಳ ಪಟ್ಟಿಯಲ್ಲಿ ಜಾಗ ಪಡೆದಿರುವ ಭಾರತದ ಏಕೈಕ ನಗರ ಬೆಂಗಳೂರು’ ಎಂದರು.

ನಗರವೊಂದು ನವೋದ್ಯಮಗಳ ಕೇಂದ್ರ ಎಂದು ಗುರುತಿಸಿಕೊಳ್ಳುವಲ್ಲಿ, ಅಲ್ಲಿನ ನವೋದ್ಯಮಗಳ ಸಂಖ್ಯೆಯನ್ನು ಒಂದು ಅಂಶವನ್ನಾಗಿ ಮಾತ್ರ ಪರಿಗಣಿಸಬಹುದು. ಬಂಡವಾಳ ಸೆಳೆಯುವ ಅವಕಾಶಗಳು, ಪ್ರತಿಭಾವಂತರ ಲಭ್ಯತೆ, ತಂತ್ರಜ್ಞಾನವನ್ನು ಬಳಸಿಕೊಳ್ಳುವ ಅವಕಾಶಗಳು ಕೂಡ ನಗರವನ್ನು ನವೋದ್ಯಮಗಳ ಕೇಂದ್ರವಾಗಿ ಗುರುತಿಸುವಲ್ಲಿ ಕೊಡುಗೆ ನೀಡುತ್ತವೆ ಎಂದು ಅವರು ಹೇಳಿದರು.

‘ಜಾಗತಿಕವಾಗಿ ಯಶಸ್ಸು ಕಾಣುವನವೋದ್ಯಮಕಟ್ಟಲು ಪೂರಕವಾದ ವ್ಯವಸ್ಥೆ ಇರುವ ನಗರಗಳ ಪಟ್ಟಿಯಲ್ಲಿಬೆಂಗಳೂರು23ನೆಯ ಸ್ಥಾನ ಪಡೆದಿದೆ. ಅಮೆರಿಕದ ಸಿಲಿಕಾನ್ ವ್ಯಾಲಿ ಮೊದಲ ಸ್ಥಾನದಲ್ಲಿದೆ. ದೆಹಲಿಯು 36ನೆಯ ಸ್ಥಾನದಲ್ಲಿದೆ’ ಎಂದು ‘ಜಾಗತಿಕನವೋದ್ಯಮವ್ಯವಸ್ಥೆ ವರದಿ – 2021’ ಈಚೆಗೆ ಹೇಳಿತ್ತು.ಸ್ಟಾರ್ಟ್‌ಅಪ್‌ ಜಿನೋಮ್ ಸಂಸ್ಥೆ ಈ ವರದಿ ಸಿದ್ಧಪಡಿಸಿದೆ.

‘ಬಂಡವಾಳ ಸಂಗ್ರಹ, ಮಾಹಿತಿ ಹಾಗೂ ಇತರ ಪ್ರದೇಶಗಳ ಜೊತೆಗಿನ ಸಂಪರ್ಕದ ವಿಚಾರದಲ್ಲಿ ಸುಧಾರಣೆ ಕಂಡಿರುವಬೆಂಗಳೂರು23ನೆಯ ಸ್ಥಾನ ಪಡೆದಿದೆ’ ಎಂದು ಸ್ಟಾರ್ಟ್‌ಅಪ್‌ ಜಿನೋಮ್‌ ಸಂಸ್ಥೆಯ ವರದಿ ಹೇಳಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.