ADVERTISEMENT

ಜಿಲ್ಲೆಗೊಂದು ನವೋದ್ಯಮ ಸ್ಥಾಪನೆ: ಡಿಪಿಐಐಟಿ

​ಪ್ರಜಾವಾಣಿ ವಾರ್ತೆ
Published 16 ಜನವರಿ 2024, 16:24 IST
Last Updated 16 ಜನವರಿ 2024, 16:24 IST
ನವೋದ್ಯಮ
ನವೋದ್ಯಮ   

ನವದೆಹಲಿ: ದೇಶದ ಪ್ರತಿ ಜಿಲ್ಲೆಯಲ್ಲಿಯೂ ಸರ್ಕಾರದಿಂದ ಅಂಗೀಕೃತವಾದ ಒಂದು ನವೋದ್ಯಮ (ಸ್ಟಾರ್ಟ್‌ಅಪ್‌) ಸ್ಥಾಪನೆಗೆ ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆ (ಡಿಪಿಐಐಟಿ) ನಿರ್ಧರಿಸಿದೆ. 

‘ದೇಶದ 125 ಜಿಲ್ಲೆಗಳಲ್ಲಿ ಒಂದು ನವೋದ್ಯಮವಿಲ್ಲ. ಆ ಜಿಲ್ಲೆಗಳಲ್ಲಿ ಸ್ಟಾರ್ಟ್ಅಪ್‌ ಸ್ಥಾಪನೆಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಶೀಘ್ರವೇ, ಈ ನಿಟ್ಟಿನಲ್ಲಿ ಕ್ರಮವಹಿಸಲಾಗುವುದು’ ಎಂದು ಡಿಪಿಐಐಟಿ ಜಂಟಿ ಕಾರ್ಯದರ್ಶಿ ಸಂಜೀವ್‌ ‘ಪ್ರಜಾವಾಣಿ’ಗೆ ತಿಳಿಸಿದರು. 

ತ್ವರಿತಗತಿಯಲ್ಲಿ ನವೋದ್ಯಮ ಸ್ಥಾಪನೆ ಸಂಬಂಧ ಕಾರ್ಯತತ್ಪರವಾಗುವಂತೆ ಆಯಾ ರಾಜ್ಯಗಳ ಕೈಗಾರಿಕಾ ಇಲಾಖೆಗಳು ಮತ್ತು ಸಂಬಂಧಪಟ್ಟ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗುವುದು. ಇದಕ್ಕೆ ಅಗತ್ಯ ಇರುವ ನೆರವು ಕೋರಲಾಗುವುದು ಎಂದು ತಿಳಿಸಿದರು.

ADVERTISEMENT

ಸ್ಟಾರ್ಟ್ಅಪ್‌ಗಳು ವ್ಯಾಪಾರ ಮತ್ತು ಕೈಗಾರಿಕಾ ಚಟುವಟಿಕೆಗಳಿಗೆ ಉತ್ತೇಜನ ನೀಡಲಿವೆ. ಜಿಲ್ಲೆಗಳಲ್ಲಿ ಸ್ಥಾಪನೆಯಾದರೆ ಅಲ್ಲಿರುವ ಹೊಸ ಉದ್ದಿಮೆದಾರರಿಗೂ ಪ್ರೇರಣೆ ಸಿಗಲಿದೆ ಎಂದರು.

ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್‌ 80ಐಎಸಿ ಅಡಿಯಲ್ಲಿ 3 ಸಾವಿರಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳು ತೆರಿಗೆ ವಿನಾಯಿತಿ ಸೌಲಭ್ಯ ಪಡೆಯುತ್ತಿವೆ. ಸರ್ಕಾರದ ಸಾಲ ವಿತರಣಾ ಯೋಜನೆಯಡಿಯೂ ಅವುಗಳಿಗೆ ಆರ್ಥಿಕ ನೆರವು ಲಭಿಸುತ್ತಿದೆ ಎಂದು ತಿಳಿಸಿದರು.

ಮಹಾರಾಷ್ಟ್ರದಲ್ಲಿ ಅತಿ‌ಹೆಚ್ಚು ತೆರಿಗೆ ವಿನಾಯಿತಿ ಸೌಲಭ್ಯ ಪಡೆಯುತ್ತಿರುವ ಸ್ಟಾರ್ಟ್‌ಅಪ್‌ಗಳಿವೆ. ಆ ನಂತರದ ಸ್ಥಾನದಲ್ಲಿ ಕರ್ನಾಟಕ ಇದೆ ಎಂದರು.

2016ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸ್ಟಾರ್ಟ್‌ಅಪ್‌ ಇಂಡಿಯಾಕ್ಕೆ ಚಾಲನೆ ನೀಡಿದರು. ಆ ವೇಳೆ ದೇಶದಲ್ಲಿ ಕೇವಲ 400 ಇದ್ದ ಇವುಗಳ ಸಂಖ್ಯೆ 2023ರ ಡಿಸೆಂಬರ್‌ ಅಂತ್ಯಕ್ಕೆ 1.17 ಲಕ್ಷ ದಾಟಿದೆ ಎಂದು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.