ಮುಂಬೈ: ದೇಶದ ಷೇರುಪೇಟೆಗಳು ಸತತ ಐದನೇ ದಿನವಾದ ಗುರುವಾರವೂ ಲಾಭ ಗಳಿಕೆಯ ಒತ್ತಡಕ್ಕೆ ಸಿಲುಕಿ ಇಳಿಕೆ ಕಂಡಿವೆ.
ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ 617 ಅಂಶ ಇಳಿಕೆ (ಶೇ 0.83ರಷ್ಟು) ಕಂಡು, 73,885 ಅಂಶಗಳಿಗೆ ತಲುಪಿದೆ. ಅತಿಹೆಚ್ಚು ಎಂ–ಕ್ಯಾಪ್ ಹೊಂದಿದ ಕಂಪನಿಗಳ ಷೇರಿನ ಮಾರಾಟ ಹೆಚ್ಚಿದ್ದರಿಂದ ಈ ಕುಸಿತ ಕಂಡಿದೆ.
ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 216 ಅಂಶ ಇಳಿಕೆ (ಶೇ 0.95ರಷ್ಟು) ಕಂಡು, 22,488 ಅಂಶಗಳಲ್ಲಿ ವಹಿವಾಟು ಮುಕ್ತಾಯಗೊಂಡಿತು.
ವಾರದ ಹಿಂದೆ ಷೇರು ಸೂಚ್ಯಂಕಗಳು ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ತಲುಪಿದ್ದವು. ಲೋಕಸಭಾ ಚುನಾವಣಾ ಫಲಿತಾಂಶದ ಅನಿಶ್ಚಿತತೆ ಹಾಗೂ ಹೂಡಿಕೆದಾರರು ಲಾಭ ಗಳಿಕೆಯತ್ತ ಚಿತ್ತ ನೆಟ್ಟಿರುವುದರಿಂದ ಇಳಿಕೆ ಕಂಡಿವೆ. ಕಳೆದ ಐದು ವಹಿವಾಟುಗಳಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ಸುಮಾರು ಶೇ 2ರಷ್ಟು ಕುಸಿದಿದೆ.
‘ಅಮೆರಿಕದ ಫೆಡರಲ್ ರಿಸರ್ವ್‌ನ ಬಡ್ಡಿದರ ಕಡಿತ ವಿಳಂಬವಾಗುತ್ತಿದೆ. ಜಾಗತಿಕ ಮಟ್ಟದಲ್ಲಿ ಹಣದುಬ್ಬರ ಇಳಿಕೆಯಾಗುವ ಲಕ್ಷಣಗಳು ಗೋಚರಿಸುತ್ತಿಲ್ಲ. ಇದರಿಂದ ಅಮೆರಿಕದಲ್ಲಿ ಬಾಂಡ್‌ಗಳ ಮೇಲಿನ ಗಳಿಕೆ ಏರಿಕೆಯಾಗುತ್ತಿದೆ. ಇದು ದೇಶೀಯ ಷೇರುಪೇಟೆ ಮೇಲೆ ಪರಿಣಾಮ ಬೀರಿದೆ’ ಎಂದು ಜಿಯೋಜಿತ್ ಫೈನಾನ್ಶಿಯಲ್ ಸರ್ವಿಸಸ್‌ನ (ಸಂಶೋಧನಾ ವಿಭಾಗ) ಮುಖ್ಯಸ್ಥ ವಿನೋದ್ ನಾಯರ್ ತಿಳಿಸಿದ್ದಾರೆ.
ಸೆನ್ಸೆಕ್ಸ್ ಗುಚ್ಛದಲ್ಲಿನ ಟಾಟಾ ಸ್ಟೀಲ್, ಟೈಟನ್, ಟೆಕ್ ಮಹೀಂದ್ರ, ವಿಪ್ರೊ, ಬಜಾಜ್ ಫಿನ್‌ಸರ್ವ್, ಬಜಾಜ್ ಫೈನಾನ್ಸ್, ನೆಸ್ಲೆ ಇಂಡಿಯಾ, ಟಾಟಾ ಮೋಟರ್ಸ್ ಮತ್ತು ಜೆಎಸ್‌ಡಬ್ಲ್ಯು ಸ್ಟೀಲ್‌ನ ಷೇರಿನ ಮೌಲ್ಯ ಕುಸಿದಿದೆ.
ಐಸಿಐಸಿಐ ಬ್ಯಾಂಕ್, ಎಕ್ಸಿಸ್ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಟೆಕ್ ಮಹೀಂದ್ರ ಬ್ಯಾಂಕ್‌ನ ಷೇರಿನ ಮೌಲ್ಯದಲ್ಲಿ ಏರಿಕೆಯಾಗಿದೆ.
ಸೋಲ್, ಟೋಕಿಯೊ, ಹಾಂಗ್‌ಕಾಂಗ್ ಮತ್ತು ಶಾಂಘೈ ಮಾರುಕಟ್ಟೆಗಳು ಇಳಿಕೆ ದಾಖಲಿಸಿವೆ.
ಬುಧವಾರದ ವಹಿವಾಟಿನಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ₹5,841 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲದ ದರವು ಶೇ 0.41ರಷ್ಟು ಏರಿಕೆಯಾಗಿದ್ದು, ಪ್ರತಿ ಬ್ಯಾರೆಲ್‌ಗೆ 83.19 ಡಾಲರ್ ಆಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.