ರಾಜ್‌ಕೋಟ್: ‘ಸುಸ್ಥಿರ ಅಭಿವೃದ್ಧಿ ಗುರಿ (ಎಸ್‌ಡಿಜಿ) ಸಾಧಿಸಲು ಸ್ಥಳೀಯ ಸರ್ಕಾರಗಳನ್ನು ಬಲವರ್ಧನೆಗೊಳಿಸಬೇಕಿದೆ’ ಎಂದು ಮಹಾ ಲೆಕ್ಕಪರಿಶೋಧಕ ಮತ್ತು ಮಹಾಲೇಖಪಾಲ (ಸಿಎಜಿ) ಗಿರೀಶ್ ಚಂದ್ರ ಮುರ್ಮು ಪ್ರತಿಪಾದಿಸಿದ್ದಾರೆ.
ಗುರುವಾರ ಇಲ್ಲಿ ಸ್ಥಳೀಯ ಆಡಳಿತದ ಲೆಕ್ಕ ಪರಿಶೋಧನೆಗಾಗಿ ಆರಂಭಿಸಿರುವ ಅಂತರರಾಷ್ಟ್ರೀಯ ಕೇಂದ್ರದ (ಐಸಿಎಎಲ್) ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಜಾಗತಿಕ ಮಾನದಂಡಕ್ಕೆ ಅನುಗುಣವಾಗಿ ಸುಸ್ಥಿರ ಅಭಿವೃದ್ಧಿ ಗುರಿ ಸಾಧನೆಗೆ ಪೂರಕವಾದ ನೀತಿಗಳನ್ನು ತಳಮಟ್ಟದಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಲ್ಲಿ ಸ್ಥಳೀಯ ಸರ್ಕಾರಗಳ ಪಾತ್ರ ಹೆಚ್ಚಿದೆ ಎಂದರು.
ಈ ಸರ್ಕಾರಗಳು ಹವಾಮಾನ ಬದಲಾವಣೆಯಂತಹ ಜಾಗತಿಕ ಸವಾಲುಗಳನ್ನು ಎದುರಿಸಿ ದೇಶದ ಆರ್ಥಿಕತೆ ಬೆಳವಣಿಗೆಗೆ ಒತ್ತು ನೀಡುತ್ತವೆ. ಸಮುದ್ರದ ಸಂಪನ್ಮೂಲಗಳ ಸಂರಕ್ಷಣೆಯಲ್ಲಿ ಇವುಗಳ ಪಾತ್ರ ಹಿರಿದು ಎಂದು ಹೇಳಿದರು.
ಸರ್ಕಾರದ ನೀತಿ ನಿರೂಪಕರು, ಆಡಳಿತಗಾರರು ಮತ್ತು ಲೆಕ್ಕಪರಿಶೋಧಕರು ಸ್ಥಳೀಯ ಸರ್ಕಾರಗಳಲ್ಲಿ ಭಾಗಿಯಾಗಲು ಈ ಕೇಂದ್ರವು ವೇದಿಕೆ ಕಲ್ಪಿಸಲಿ ಎಂದು ಹೇಳಿದರು.
ಜನಪ್ರತಿನಿಧಿಗಳು, ಕಾರ್ಯ ನಿರ್ವಾಹಕ ಅಧಿಕಾರಿಗಳು, ಸ್ಥಳೀಯ ಸರ್ಕಾರಗಳ ಲೆಕ್ಕ ಪರಿಶೋಧಕರು, ಪ್ರಮುಖ ಆಡಿಟ್ ಸಂಸ್ಥೆಗಳು ಈ ಕೇಂದ್ರದಲ್ಲಿ ಸಕ್ರಿಯರಾಗಿರುತ್ತಾರೆ. ಇದರಿಂದ ತಳಮಟ್ಟದಲ್ಲಿ ಆಡಳಿತದ ಹೊಣೆಗಾರಿಕೆಯ ಸುಧಾರಣೆಗೆ ಸಹಕಾರಿಯಾಗಲಿದೆ ಎಂದು ತಿಳಿಸಿದರು.
ದೇಶದಲ್ಲಿ 2.5 ಲಕ್ಷಕ್ಕೂ ಹೆಚ್ಚು ಗ್ರಾಮ ಪಂಚಾಯಿತಿಗಳು ಮತ್ತು 7 ಸಾವಿರಕ್ಕೂ ಹೆಚ್ಚು ಪುರಸಭೆಗಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.